ದಾವಣಗೆರೆ: ಕಾರು ಅಡ್ಡಗಟ್ಟಿ 38 ಲಕ್ಷ ರೂ. ಹಣ ದೋಚಿದ ಘಟನೆ ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿಯ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ಭದ್ರಾವತಿಯ ಮಾಲತೇಶ್ ಹಣ ಕಳೆದುಕೊಂಡವರು. ಮಾಲತೇಶ್ ಅವರ ಸ್ನೇಹಿತ ಮಾನಚಾರಿ ಜೊತೆ ಹಗರಿಬೊಮ್ಮನಹಳ್ಳಿಯಲ್ಲಿ ತಮ್ಮ ಪೂರ್ವೀಕರ ಜಮೀನು ಮಾರಿ, ಓಮ್ನಿ ಕಾರಲ್ಲಿ ಹಣ ತರುತ್ತಿದ್ದರು. 76 ಲಕ್ಷ ರೂ. ಹಣವನ್ನು ಒಂದು ಬ್ಯಾಗಿನಲ್ಲಿ 38 ಲಕ್ಷ ರೂ. ಹಣವನ್ನು ಮತ್ತೊಂದು ಬ್ಯಾಗಿನಲ್ಲಿ ಹಾಗೂ ಜೆಬಿನಲ್ಲಿ ಎರಡು ಲಕ್ಷ ಇಟ್ಟುಕೊಂಡು ಬರುತ್ತಿದ್ದರು.
ಕಾರಲ್ಲಿ ಬರುವಾಗ ಮಲೆಬೆನ್ನೂರು ಸಮೀಪ ಕಾರೊಂದು ಮಾಲತೇಶ್ ಅವರ ಕಾರಿಗೆ ಉಜ್ಜಿಕೊಂಡು ಹೋಗಿದೆ. ಇದರಿಂದ ಭಯಗೊಂಡ ಅವರು ಕಾರನ್ನು ಜೋರಾಗಿ ಓಡಿಸಿಕೊಂಡು ಹೋಗಿದ್ದಾರೆ. ಅವರನ್ನು ಹಿಂಬಾಲಿಸಿಕೊಂಡು ಬಂದ ಗ್ಯಾಂಗ್ ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿ ಬಳಿ ಅಡ್ಡಗಟ್ಟಿದ್ದಾರೆ. ಅಷ್ಟೇ ಅಲ್ಲದೇ ಕಾರಿನಿಂದ ಇಳಿದು ಬಂದ ನಾಲ್ವರು ಮಾಲತೇಶ್ ಮೇಲೆ ಹಲ್ಲೆ ಮಾಡಿ, ಬಳಿಕ ಕಾರಿನಲ್ಲಿದ್ದ 38 ಲಕ್ಷ ರೂ. ಸಮೇತ ಎಸ್ಕೇಪ್ ಆಗಿದ್ದಾರೆ
ಪ್ರಾಣಭಯದಿಂದ ಮಾಲತೇಶ್ ತಕ್ಷಣ ಮಲೆಬೆನ್ನೂರಿಗೆ ಮರಳಿ, ಆ ಹಣವನ್ನು ಸಂಬಂಧಿಕರ ಮನೆಯಲ್ಲಿಟ್ಟು ನೇರವಾಗಿ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಾವಣಗೆರೆ ಎಸ್ಪಿ ಹೆಚ್.ಟಿ. ಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಈಗ ವಿಶೇಷ ತಂಡಗಳನ್ನು ರಚಿಸಿದ್ದಾರೆ.

