– ಸಿನಿಮಾ, ಸೀರಿಯಲ್‍ಗಳಲ್ಲಿ ಲಿಪ್‍ಲಾಕ್ ಬ್ಯಾನ್
ಬೀಜಿಂಗ್: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್‍ಗೆ ಇಡೀ ದೇಶವೇ ಬೆಚ್ಚಿ ಬೀಳುತ್ತಿದೆ. ಇದೀಗ ಕೊರೊನಾ ವೈರಸ್ ಎಫೆಕ್ಟ್ ಸಿನಿಮಾ, ಸೀರಿಯಲ್‍ಗಳ ಮೇಲೂ ಪರಿಣಾಮ ಬೀರುತ್ತಿವೆ.
ಇದುವರೆಗೂ ದೇಶದಲ್ಲಿ ಸುಮಾರು 900ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ. ಮಧ್ಯ ಚೀನಾದ ವುಹಾನ್‍ನಿಂದ ಕಂಡು ಬಂದಿರುವ ಕೊರೊನಾ ವೈರಸ್ ಇಡೀ ಜಗತ್ತನ್ನೇ ವ್ಯಾಪಿಸುತ್ತಿದೆ. ಈಗಾಗಲೇ ಹಲವಾರು ದೇಶಗಳು ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ. ಜನರಂತೂ ಮನೆಬಿಟ್ಟು ಹೊರಗಡೆ ಬರುತ್ತಿಲ್ಲ. ಈಗ ಕೊರೊನಾ ವೈರಸ್ ಸಿನಿಮಾರಂಗಕ್ಕೂ ಲಗ್ಗೆ ಇಟ್ಟಿದೆ.
ಹೌದು. ಚೀನಾದಲ್ಲಿ ಏಕಾಏಕಿ ಸಿನಿಮಾ, ಸೀರಿಯಲ್ ಚಿತ್ರೀಕರಣವನ್ನು ಸ್ಥಗಿತಗೊಳಿಸಿದೆ. ತೈವಾನ್ ದೇಶದಲ್ಲಿ ಕೊರೊನಾ ವೈರಸ್‍ನ ತೀವ್ರತೆ ಅಷ್ಟಾಗಿ ಕಂಡು ಬಂದಿಲ್ಲ. ಹೀಗಾಗಿ ಅಲ್ಲಿನ ಸರ್ಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪ್ರಮುಖವಾಗಿ ತೈವಾನ್‍ನಲ್ಲಿ ಸರ್ಕಾರ ಸಿನಿರಂಗಕ್ಕೆ ಸಂಬಂಧಿಸಿದಂತೆ ಒಂದು ನಿರ್ಧಾರ ತೆಗೆದುಕೊಂಡು ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ತೈವಾನ್‍ನಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಹಾಗೂ ನಿರ್ಮಾಣಗೊಳ್ಳುತ್ತಿರುವ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳನ್ನು ಮಾಡದಂತೆ ಸರ್ಕಾರ ನಿರ್ಬಂಧ ಹೇರಿದೆ. ಅಲ್ಲದೇ ನಟಿ-ನಟರು ಮುಖ್ಯವಾಗಿ ಲಿಪ್‍ಲಾಕ್ ಸನ್ನಿವೇಶಗಳನ್ನು ಕೈಬಿಡಬೇಕೆಂದು ಟಿವಿ ಸ್ಟೇಷನ್ಸ್, ನಿರ್ದೇಶಕ, ನಿರ್ಮಾಪಕರಿಗೆ ಸೂಚನೆಗಳನ್ನು ನೀಡಲಾಗಿದೆ. ಕೊರೊನಾ ವೈರಸ್ ಭೀತಿಯಿಂದಾಗಿ ಸರ್ಕಾರ ಈ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ ಎನ್ನಲಾಗಿದೆ.
ತೈವಾನ್‍ನ ‘ಗೋಲ್ಡನ್ ಸಿಟಿ’ ಸೀರಿಯಲ್‍ನಲ್ಲಿ ಅಧಿಕವಾಗಿ ಕಿಸ್ಸಿಂಗ್ ದೃಶ್ಯಗಳಿವೆ. ಹೀಗಾಗಿ ಈ ಸೀರಿಯಲ್‍ನಲ್ಲಿ ನಟಿಸುತ್ತಿರುವ ಇಬ್ಬರು ಕಲಾವಿದರಿಗೆ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸದಂತೆ ಸರ್ಕಾರ ಎಚ್ಚರಿಕೆ ಕೊಟ್ಟಿದೆ. ಅದರಲ್ಲೂ ಸೀರಿಯಲ್‍ಗೆ ಅವಶ್ಯಕತೆ ಇದೆ ಎಂದು ಹಸಿಬಿಸಿ ದೃಶ್ಯ ಹಾಗೂ ಕಲಾವಿದರೂ ತುಂಬಾ ರೊಮ್ಯಾನ್ಸ್ ದೃಶ್ಯದಲ್ಲಿ ಅಭಿನಯಿಸದಂತೆ ಎಚ್ಚರಿಕೆ ಕೊಟ್ಟಿದೆ ಎಂದು ವರದಿಯಾಗಿದೆ.
ಸಾರ್ವಜನಿಕ ಸ್ಥಳಗಳಲ್ಲೂ ಶೂಟಿಂಗ್ ಮಾಡುವುದನ್ನು ರದ್ದು ಮಾಡಲಾಗಿದೆ. ಕರೋನಾ ವೈರಸ್‍ನಿಂದ ಯಾವುದೇ ರೀತಿ ಸಮಸ್ಯೆಯಾಗಬಾರದೆಂದು ಸರ್ಕಾರ ಈ ರೀತಿಯ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.