ಮಂಗ್ಳೂರು ಗೋಲಿಬಾರ್ ತನಿಖೆ ಆರಂಭಿಸಿದ ಸಿಐಡಿ

Public TV
2 Min Read
MNG 12

ಮಂಗಳೂರು: ದೇಶದಲ್ಲೇ ಸಂಚಲನ ಮೂಡಿಸಿದ್ದ ಮಂಗಳೂರು ಗೋಲಿಬಾರ್ ಪ್ರಕರಣದ ತನಿಖೆ ಆರಂಭಗೊಂಡಿದೆ. ಗೋಲಿಬಾರ್ ಮತ್ತು ಹಿಂಸಾಚಾರ ಪ್ರಕರಣವನ್ನು ಸಿಐಡಿ ಮತ್ತು ಮ್ಯಾಜಿಸ್ಟ್ರೇಟ್ ತಖೆಗೆ ರಾಜ್ಯ ಸರ್ಕಾರ ಒಪ್ಪಿಸಿದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದಾರೆ.

ಸಿಐಡಿ ಎಸ್‍ಪಿ ರಾಹುಲ್ ಕುಮಾರ್ ಷಹಾಪುರ್ ವಾಡ್ ನೇತೃತ್ವದ ಆರು ಮಂದಿ ಅಧಿಕಾರಿಗಳ ತಂಡ ಮಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಪ್ರಕರಣದ ಇಂಚಿಂಚು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಗಲಭೆ ನಡೆದ ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತ, ಬಂದರು ಪ್ರದೇಶಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದೆ. ಆಯಾ ಪ್ರದೇಶದ ಸಿಸಿಟಿವಿ ಕ್ಯಾಮೆರಾ ವಿಡಿಯೋ, ಬಂದರು ಠಾಣಾ ಸಿಬ್ಬಂದಿ ಸೇರಿದಂತೆ ಸ್ಥಳೀಯರಿಂದ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ.

MNG Protest death

ಗೋಲಿಬಾರ್ ನಡೆದ ಬಂದರು ಪ್ರದೇಶಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಸಾಕ್ಷ್ಯ ಪಡೆದಿದ್ದಾರೆ. ಡಿಸೆಂಬರ್ 19ರ ಸಂಜೆ ವೇಳೆ ಘಟನೆ ನಡೆದಿದ್ದು, ಅಂದು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಹೇಳಿಕೆಗಳನ್ನೂ ದಾಖಲಿಸಿಕೊಂಡಿರುವ ಅಧಿಕಾರಿಗಳು ಮುಂದಿನ ಮೂರು ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆಗಳಿವೆ. ಈಗಾಗಲೇ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಹೇಳಿಕೆಯನ್ನೂ ಅಧಿಕಾರಿಗಳು ಪಡೆದಿದ್ದು, ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮ್ಯಾಜಿಸ್ಟ್ರೇಟ್ ತನಿಖೆಯೂ ಆರಂಭ:
ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗಾಗಿ ಪ್ರತಿಪಕ್ಷಗಳ ತೀವ್ರ ಒತ್ತಾಯದ ನಡುವೆಯೂ ರಾಜ್ಯ ಸರ್ಕಾರ, ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲಾಧಿಕಾರಿ ಡಾ.ಜಿ. ಜಗದೀಶ್ ಅವರಿಗೆ ಗೋಲಿಬಾರ್ ತನಿಖೆಯ ಹೊಣೆಯನ್ನು ಸರ್ಕಾರ ನೀಡಿದ್ದು, ಡಿಸೆಂಬರ್ 28ರಿಂದ ತನಿಖೆ ಆರಂಭವಾಗಲಿದೆ. ಮಂಗಳೂರಿಗೆ ಆಗಮಿಸಲಿರುವ ಡಾ.ಜಗದೀಶ್ ಗಲಭೆ ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

MNG Protest A 1

ಪೊಲೀಸರು ಮತ್ತು ಪ್ರತಿಭಟನಾಕಾರರನ್ನೂ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಪ್ರಕರಣದ ಬಗ್ಗೆ ಎರಡೂ ಕಡೆಯಿಂದಲೂ ಮಾಹಿತಿ, ಹೇಳಿಕೆ ಸಂಗ್ರಹಿಸಿದ ಬಳಿಕ ಅಂತಿಮ ವರದಿಯನ್ನು ಸರ್ಕಾರಕ್ಕೆ ನೀಡಲಿದ್ದಾರೆ. ಘಟನೆಯ ಸಿಸಿಟಿವಿ ಕ್ಯಾಮೆರಾ ಫೂಟೇಜ್ ಅನ್ನು ಪೊಲೀಸ್ ಇಲಾಖೆ ಮತ್ತು ಪ್ರತಿಭಟನಾಕಾರರ ಗುಂಪು ಸಂಗ್ರಹಿಸಿದ್ದು, ವಿಚಾರಣೆ ವೇಳೆ ಮ್ಯಾಜಿಸ್ಟ್ರೇಟ್ ಮುಂದೆ ಒಪ್ಪಿಸಲಿದ್ದಾರೆ.

ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರ ಹತ್ತು ತಂಡ:
ಮಂಗಳೂರಿನ ಹಿಂಸಾಚಾರ ಘಟನೆಯಲ್ಲಿ ದುಷ್ಕರ್ಮಿಗಳ ಪತ್ತೆಗಾಗಿ ಹತ್ತು ಪೊಲೀಸ್ ತಂಡಗಳ ರಚನೆಯಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್ ಹರ್ಷ ನೇತೃತ್ವದಲ್ಲಿ ತನಿಖಾ ತಂಡಗಳನ್ನು ನೇಮಕ ಮಾಡಲಾಗಿದ್ದು, ವಿಡಿಯೋ ಫೂಟೇಜ್ ಆಧರಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.

mng ayodhye 1

ಮತ್ತೆ ಬೃಹತ್ ಪ್ರತಿಭಟನೆ:
ಜನವರಿ 4ರಂದು ಮುಸ್ಲಿಂ ಸಂಘಟನೆಗಳು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿದ್ದು, ರೂಪುರೇಷೆ ಬಗ್ಗೆ ಚರ್ಚಿಸಲು ಮಾಜಿ ಸಚಿವ ಜಮೀರ್ ಅಹ್ಮದ್ ಮಂಗಳೂರಿಗೆ ಆಗಮಿಸಿದ್ದಾರೆ. ಗೋಲಿಬಾರ್ ಘಟನೆಯಲ್ಲಿ ಮೃತರಿಗೆ ನೀಡಿದ್ದ ಪರಿಹಾರ ಹಿಂಪಡೆದ ಸರ್ಕಾರದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಮಂಗಳೂರಿನ ಗೋಲಿಬಾರ್ ಪ್ರಕರಣ ಸಿಐಡಿ ಮತ್ತು ಮ್ಯಾಜಿಸ್ಟ್ರೇಟ್ ತನಿಖೆ ಆರಂಭಗೊಳ್ಳುವಷ್ಟರಲ್ಲಿ ಮತ್ತೊಂದು ರೀತಿಯ ಹೋರಾಟಕ್ಕೆ ಮುಸ್ಲಿಂ ಸಂಘಟನೆಗಳು ಸಜ್ಜಾಗಿದ್ದು, ಮಂಗಳೂರು ಮತ್ತೊಮ್ಮೆ ದೇಶದ ಗಮನ ಸೆಳೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *