ಬೆಂಗಳೂರು: ಕೆಂಗೇರಿ ಉಪನಗರದಲ್ಲಿನ ಚರ್ಚ್‌ಗೆ ನುಗ್ಗಿದ ದುಷ್ಕರ್ಮಿಗಳ ತಂಡ ಒಳಗಿದ್ದ ವಸ್ತುಗಳನ್ನು ಒಡೆದು ಧ್ವಂಸ ಮಾಡಿದ್ದಾರೆ. ಸ್ಯಾಟಲೈಟ್ ಟೌನ್‍ನಲ್ಲಿರುವ ಸೆಂಟ್ ಫ್ರಾನ್ಸಿಸ್ ಅಸಿಸ್ ಚರ್ಚ್‌ನಲ್ಲಿ ಈ ಘಟನೆ ನಡೆದಿದೆ.
ತಡರಾತ್ರಿ ಚರ್ಚ್‍ನ ಕಾಂಪೌಂಡ್ ಗೇಟ್ ಹಾರಿ ಒಳ ನುಗ್ಗಿದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಚರ್ಚ್ ಒಳಗಿನ ಕಿಟಕಿ, ಬಾಗಿಲು, ಚೇರುಗಳು, ಮೈಕ್, ಅಲಂಕಾರಿಕ ವಸ್ತುಗಳನ್ನು ಸೇರಿದಂತೆ ಬಹುತೇಕ ವಸ್ತುಗಳು ಒಡೆದು ಧ್ವಂಸ ಮಾಡಿದ್ದಾರೆ.
ಬೆಳಗ್ಗಿನ ಜಾವ ಚರ್ಚ್‌ನ ಸಿಬ್ಬಂದಿ ಬಾಗಿಲು ಓಪನ್ ಮಾಡಿದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಕೆಂಗೇರಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಚರ್ಚ್ ಒಳಗೆ ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಧ್ವಂಸದ ದೃಶ್ಯಗಳು ಸೆರೆಯಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ.
ಯಾವ ಕಾರಣಕ್ಕೆ ಈ ರೀತಿ ಚರ್ಚ್‌ಗೆ ನುಗ್ಗಿ ವಸ್ತುಗಳನ್ನು ಒಡೆದು ಹಾಕಿದ್ದಾರೆ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಸದ್ಯ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ.