ನಾಡಿನಾದ್ಯಂತ ಕ್ರಿಸ್ಮಸ್ ಸಂಭ್ರಮ ಜೋರಾಗಿದೆ. ಏಸು ಕ್ರಿಸ್ತನ ಜನ್ಮದಿನದಂದು ಕ್ರೈಸ್ತರು ಆಚರಿಸುವ ಹಬ್ಬವೇ ಕ್ರಿಸ್ಮಸ್. ಕ್ರೈಸ್ತರಿಗೆ ಇದು ಅತ್ಯಂತ ಪವಿತ್ರವಾದ ಹಬ್ಬ. ಈ ಸಂದರ್ಭ ಪರಸ್ಪರ ಕ್ರಿಸ್ಮಸ್ ಕಾರ್ಡ್, ಉಡುಗೊರೆ ನೀಡುವುದು, ಚರ್ಚ್‌ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದು ಜೊತೆಗೆ ಮನೆಯನ್ನು ಕ್ರಿಸ್‌ಮಸ್ ಟ್ರೀ ಹಾಗೂ ಹೂವುಗಳಿಂದ ಆಲಂಕರಿಸಲಾಗುತ್ತದೆ. ಅಲ್ಲದೇ ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳನ್ನು ತಯಾರಿಸಿ ಜೊತೆಯಾಗಿ ಸಂಭ್ರಮಿಸುವ ಹಬ್ಬ ಇದಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಟೂಟಿ-ಫ್ರೂಟಿ ಕೇಕ್ ತಯಾರಿಸುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
Advertisement
ಬೇಕಾಗುವ ಸಾಮಗ್ರಿಗಳು:
ಮೊಸರು- ಒಂದು ಕಪ್
ಸಕ್ಕರೆ- ಒಂದೂವರೆ ಕಪ್
ಎಣ್ಣೆ-ಅರ್ಧ ಕಪ್
ಮೈದಾ- ಒಂದು ಕಪ್
ವೆನಿಲ್ಲಾ ಸಾರ- ಒಂದು ಚಮಚ
ಅಡುಗೆ ಸೋಡ- ಒಂದು ಚಿಟಿಕೆ
ಬೇಕಿಂಗ್ ಪೌಡರ್- ಒಂದು ಚಮಚ
ನೀರು- ಅರ್ಧ ಕಪ್
ಟೂಟಿ ಫ್ರೂಟಿ- ಅರ್ಧ ಕಪ್
ಉಪ್ಪು- 1 ಚಿಟಿಕೆ
Advertisement
Advertisement
ತಯಾರಿಸುವ ವಿಧಾನ:
* ಮೊದಲನೆಯದಾಗಿ ಟೂಟಿ ಫ್ರೂಟಿಯನ್ನು ತೆಗೆದುಕೊಂಡು ಅದಕ್ಕೆ 1 ಟೀ ಚಮಚದಷ್ಟು ಮೈದಾ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ.
* ನಂತರ ಒಂದು ಪಾತ್ರೆಯಲ್ಲಿ ಮೊಸರು, ಸಕ್ಕರೆ, ಎಣ್ಣೆ ಮತ್ತು ವೆನಿಲ್ಲಾ ಸಾರಗಳನ್ನು ತೆಗೆದುಕೊಳ್ಳಿ. ನಂತರ ಅದನ್ನು ವಿಸ್ಕ್ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ.
* ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದಕ್ಕೆ ಮೈದಾ ಹಿಟ್ಟನ್ನು ಜರಡಿ ಹಿಡಿದು ಹಾಕಿ. ಜೊತೆಗೆ ಅಡುಗೆ ಸೋಡಾ, ಬೇಕಿಂಗ್ ಪೌಡರ್, ಚಿಟಿಕೆ ಉಪ್ಪು ಹಾಕಿ ಗಂಟು ಬಾರದಂತೆ ಚೆನ್ನಾಗಿ ಕಲಸಿ.
* ಈ ಮಿಶ್ರಣ ದಪ್ಪಗಿದ್ದರೆ ನೀರು ಸೇರಿಸಬಹುದು, ಇದಕ್ಕೆ ವೆನಿಲ್ಲಾ ಸಾರವನ್ನು ಹಾಕಿ ಕಲಸಿ.
* ಬಳಿಕ ಟೂಟಿ ಫ್ರೂಟಿಯನ್ನು ಹಾಕಿ ಮಿಕ್ಸ್ ಮಾಡಿ.
* ಈಗ ಕೇಕ್ ಅಚ್ಚಿಗೆ ಎಣ್ಣೆ ಸವರಿ. ಟ್ರೇಯ ಕೆಳಭಾಗಕ್ಕೆ ಬಟರ್ ಕಾಗದ (ಬಟರ್ ಪೇಪರ್) ಹಾಕಿ. ನಂತರ ಹಿಟ್ಟನ್ನು ಅದಕ್ಕೆ ಸುರಿಯಿರಿ.
* ಟ್ರೇಯನ್ನು ಎರಡು ಬಾರಿ ತಟ್ಟಿ. ಮೇಲೆ ಬೇಕಿದ್ದರೆ ಸ್ವಲ್ಪ ಟೂಟಿ ಫ್ರೂಟಿ ಹಾಕಬಹುದು.
* ಈಗ ಕೇಕ್ ಟ್ರೇಯನ್ನು ಮೊದಲೇ ಬಿಸಿಯಾಗಿರಿಸಿದ ಓವನ್‌ನಲ್ಲಿ ಇರಿಸಿ. ಇದನ್ನು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 30 ರಿಂದ 40 ನಿಮಿಷಗಳ ಕಾಲ ಬೇಯಿಸಿ.
* ನಂತರ ಕೇಕ್ ಅನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಟ್ಟು ಒಂದು ತಟ್ಟೆಯಲ್ಲಿ ಅಲಂಕರಿಸಿದರೆ ರುಚಿಕರವಾದ ಟೂಟಿ ಫ್ರೂಟಿ ಕೇಕ್ ಸವಿಯಲು ಸಿದ್ಧ.
Advertisement