ತುಮಕೂರು: ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಮುಂದಾಗಿರುವುದಕ್ಕೆ ಕ್ರೈಸ್ತ ಸಮುದಾಯದ ಮುಖಂಡರು, ಕ್ರೈಸ್ತ ದೇವಾಲಯಗಳ ಪಾದ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಸಿಎಸ್‍ಐವಿಸಿ ಪ್ರಾರ್ಥನಾಲಯದಲ್ಲಿ ಸಂಜೆ ನಡೆದ ಕ್ರೈಸ್ತ ದೇವಾಲಯಗಳ ಎಲ್ಲ ಪಾದ್ರಿಗಳು ಹಾಗೂ ಕ್ರೈಸ್ತ ಮುಖಂಡರ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಸಿಎಸ್‍ಐ, ರೋಮನ್ ಕ್ಯಾಥೋಲಿಕ್, ಸ್ವತಂತ್ರ ಸಭೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
Advertisement
Advertisement
ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಯ ಹಕ್ಕುಗಳು ಹಾಗೂ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ. ತಮಗೆ ಬೇಕಾದ ಧರ್ಮವನ್ನು ಸ್ವೀಕರಿಸಲು ಸಂವಿಧಾನದಲ್ಲೇ ಬಿ.ಆರ್.ಅಂಬೇಡ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಈಗ ಸಂವಿಧಾನಕ್ಕೆ ವಿರುದ್ಧವಾಗಿ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದನ್ನೂ ಓದಿ: ಉದ್ಯಮಿಗೆ ಹಣಕ್ಕೆ ಜೈಲಿನಿಂದಲೇ ಬೇಡಿಕೆಯಿಟ್ಟ ಕೈದಿ
Advertisement
ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ವ್ಯಕ್ತಿಯ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ. ಇಂತಹ ಪ್ರಯತ್ನಕ್ಕೆ ಸರ್ಕಾರ ಮುಂದಾಗಬಾರದು. ವ್ಯಕ್ತಿಯ ಹಕ್ಕು ರಕ್ಷಿಸಬೇಕು ಎಂದು ಒತ್ತಾಯಿಸಿದರು.
Advertisement
ಇತ್ತೀಚಿನ ದಿನಗಳಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ, ಹಲ್ಲೆ, ದಬ್ಬಾಳಿಕೆಗಳು ಹೆಚ್ಚಾಗಿವೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ನಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದೆ ಮಂಡಿಸಿ ನೆರವು ಪಡೆಯುವುದು. ಜತೆಗೆ ಕಾನೂನು ಮೂಲಕ ಹೋರಾಟ ನಡೆಸುವುದು. ದೌರ್ಜನ್ಯ ಖಂಡಿಸಿ ಇತರೆಡೆಗಳಲ್ಲಿ ರ‍್ಯಾಲಿ ನಡೆಸಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯಲ್ಲೂ ಹೋರಾಟ ರೂಪಿಸಿ, ಸಮಾವೇಶ ಸಂಘಟಿಸುವುದು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಒಮ್ಮತಕ್ಕೆ ಬರಲಾಯಿತು.
‘ಸಮುದಾಯದ ಎಲ್ಲ ಪಂಗಡಗಳ ಮುಖಂಡರು ಒಟ್ಟಾಗಿ ಸಭೆ ನಡೆಸಿದ್ದೇವೆ. ಈಗ ಪೂರ್ವಭಾವಿ ಸಭೆಮಾಡಿ ಚರ್ಚಿಸಿದ್ದೇವೆ. ಮುಂದೆ ಹೋರಾಟ ರೂಪಿಸಲಾಗುವುದು. ಸಮುದಾಯದ ಎಲ್ಲ ಪಂಗಡಗಳು ಒಟ್ಟಾಗಿ ಹೋರಾಟ ನಡೆಸುತ್ತೇವೆ’ ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಸಿಎಸ್‍ಐ ತುಮಕೂರು ಕ್ಷೇತ್ರಾಧ್ಯಕ್ಷ ಮನೋಜ್ ಕುಮಾರ್ ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಹೀರೋ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅನಕ್ಷರಸ್ಥ ಪುರಾಣ ಕವಿ ರಾಮಣ್ಣ ಇನ್ನಿಲ್ಲ
ಲೂರ್ದ್ ಮಾತೆ ಕ್ಯಾಥೋಲಿಕ್ ದೇವಾಲಯದ ಫಾದರ್ ಜೇಮ್ಸ್ ಪ್ರಭು, ಯುಸಿಡಬ್ಲ್ಯೂಎ ಅಧ್ಯಕ್ಷ ಜಾಯ್ ಕುಟ್ಟಿ, ಪ್ರಧಾನಮಂತ್ರಿಗಳ 15 ಅಂಶಗಳ ವಿಷನ್ ಕಾರ್ಯಕ್ರಮದ ಸ್ಥಾಯಿ ಸಮಿತಿ ಸದಸ್ಯ ಜೆಫಿನ್ ಜಾಯ್ ಭಾಗವಹಿಸಿದ್ದರು.