ಕಲಬುರಗಿ: ಲೋಕಸಭಾ ಸಮರ ಹತ್ತಿರವಾಗುತ್ತಿದಂತೆ ಕಾಂಗ್ರೆಸ್ – ಬಿಜೆಪಿ ನಾಯಕರ ನಡುವಿನ ವಾಕ್ ಸಮರ ತಾರಕಕ್ಕೆ ಏರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಚೌಕಿದಾರ್ ಹೇಳಿಕೆಗೆ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಚೌಕಿದಾರ್’ ಏನಿದಾನೆ ಎಂದು ಜನರಿಗೆ ಗೊತ್ತಿದೆ. ಮೊದಲು ಪ್ರಧಾನಮಂತ್ರಿ ಅಲ್ಲ ಪ್ರಧಾನ ಸೇವಕ್ ಅಂತಿದ್ದವರು, ಈಗ ಚೌಕಿದಾರ್ ಎನ್ನುತ್ತಿದ್ದಾರೆ. ಬಿಜೆಪಿ ಸರ್ಕಾರ ಚೌಕಿದಾರ ದೇಶದಲ್ಲಿ ಆಗುವ ದೊಡ್ಡ ಹಗರಣಗಳಿಗೆ ರಕ್ಷಣೆ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಚೌಕಿದಾರ ದೇಶದ ಸಂಪತ್ತು ರಕ್ಷಣೆ ಮಾಡುವುದು ಬಿಟ್ಟು ಬೇರೆಯವರಿಗೆ ದುಡ್ಡು ಮಾಡಿ ಕೊಡೋದು ಸರಿಯಲ್ಲ. ರಫೇಲ್ ಡೀಲ್, ದೊಡ್ಡ ದೊಡ್ಡ ಶ್ರೀಮಂತರು, ಕಂಪನಿಗಳ ಸಾಲ ಮನ್ನಾ ಮಾಡಿದ್ದರು. ಸುಮಾರು ಮೂರು ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ಈ ದುಡ್ಡು ಜನರದ್ದು, ರೈತರ ಸಾಲಮನ್ನಾ ಮಾಡಿ ಅಂದರೆ ಆಗಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳುತ್ತಿದ್ದಾರೆ. ಈಗ ಎಲೆಕ್ಷನ್ ಟೈಮ್ ನಲ್ಲಿ ಎರಡೆರಡು ಸಾವಿರ ರೂ. ಮೊದಲ ಕಂತು ಬಿಡುಗಡೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದೇಶದ ಒಬ್ಬ ರೈತನಿಗೆ ದಿನಕ್ಕೆ 16.40 ರೂ. ಕೊಟ್ಟು ದೇಶದ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿ ಮೋದಿ ದೇಶದ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಚೌಕಿದಾರ ಸಾವಿರಾರು ಕೋಟಿ ರೂ. ಬೇರೆಯವರಿಗೆ ಲಾಭ ಮಾಡಿ ಕೊಡುತ್ತಿದ್ದಾರೆ. ಜನರ ದುಡ್ಡು ಕದ್ದು ಬೇರೆಯವರಿಗೆ ಹಂಚುತ್ತಿದ್ದಾರೆ. ಹೀಗಾಗಿ ‘ಚೌಕಿದಾರ್ ಚೋರ್ ಹೈ’ ಅಂತಾ ಹೇಳಿದ್ದೇವೆ. ಈಗ ತಾವೇ ಮರುನಾಮಕರಣ ಮಾಡಿಕೊಂಡಿದ್ದಾರೆ ಎಂದರು.
ಜನರು ‘ಚೌಕಿದಾರ್’ ಎಂಬ ಹೆಸರು ಕೊಟ್ಟಿಲ್ಲ. ಚೌಕಿದಾರ್ ಸ್ವಯಂ ಘೋಷಿತವಾದ ಹೆಸರು. ಜನರಿಗೆ ಯಾರು ಏನು ಅಂತ ಗೊತ್ತಿದೆ. ಲೋಕ್‍ಪಾಲ್ ಮಸೂದೆ ಇಷ್ಟು ವರ್ಷ ಯಾಕೆ ಜಾರಿ ಮಾಡಿಲ್ಲ? ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದರೂ ಪ್ರತಿಕ್ರಿಯೆ ನೀಡಿಲ್ಲ. ಚೌಕಿದಾರ್ ಎಂಬುವುದು ಚುನಾವಣಾ ಗಿಮಿಕ್ ಅಷ್ಟೇ ಎಂದು ಟೀಕಿಸಿದರು.
ಇದೇ ವೇಳೆ ತುಮಕೂರು ಲೋಕಸಭಾಕ್ಕೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಸ್ಪಷ್ಟನೆ ನೀಡಿದ ಅವರು, ಮುದ್ದಹನುಮೇಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ. ದೆಹಲಿಯಲ್ಲಿ ಈ ಬಗ್ಗೆ ಎಲ್ಲರೂ ಸೇರಿ ಚರ್ಚೆ ಮಾಡಿದ್ದೇವೆ. ಹಾಲಿ ಸಂಸದರಿಗೆ ಟಿಕೆಟ್ ಸಿಗಬೇಕೆನ್ನುವುದು ಆಶಯ ಎಂದು ಹೇಳುವ ಮೂಲಕ ಡಿಸಿಎಂ ಪರಮೇಶ್ವರ್ ಅವರು ಬ್ಯಾಟಿಂಗ್ ನಡೆಸಿದರು.