– ದೇವಿಯ ಒಪ್ಪಿಗೆ ಮೇರೆಗೆ ಸ್ಥಳಾಂತರ
ಚಿತ್ರದುರ್ಗ: ತಾಲೂಕಿನ ಭರಮಸಾಗರದ ಬಳಿ ಇರುವ ಕೋಳಾಳ್ ಚೌಡೇಶ್ವರಿ ದೇವಾಲಯವನ್ನು ಸ್ಥಳಾಂತರಿಸಿದ್ದಕ್ಕೆ ವಾಹನ ಸವಾರರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಿಯ ಹೆದ್ದಾರಿ 14ರ ದಾವಣಗೆರೆ-ಚಿತ್ರದುರ್ಗ ನಡುವೆ ಭರಮಸಾಗರದ ಬಳಿ ಈ ದೇವಾಲಯವಿದ್ದು, ನಿತ್ಯ ಹೆದ್ದಾರಿಯಲ್ಲಿ ಸಂಚರಿಸುವ ನೂರಾರು ವಾಹನಗಳ ಸವಾರರು ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿ ಮುಂದೆ ಸಾಗುತ್ತಿದ್ದರು. ಆದರೆ ಇತ್ತೀಚೆಗೆ ರಸ್ತೆ ಅಗಲೀಕರಣದಿಂದಾಗಿ ರಸ್ತೆಯ ಪಕ್ಕದಲ್ಲೇ ಇರುವ ಈ ದೇವಿಯ ದೇವಸ್ಥಾನವನ್ನು ಪಕ್ಕಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿತ್ತು. ಇದಕ್ಕೆ ಹಲವು ಅಡೆತಡೆಗಳು ಎದುರಾಗಿ, ಸಾವು ನೋವುಗಳು ಸಹ ಸಂಭವಿಸಿದ್ದವು. ಇದು ಅಪಶಕುನ ಎಂದು ಭಾವಿಸಿದ ಭಕ್ತರು ದೇವತೆಯ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
Advertisement
Advertisement
ದೇವತೆಯ ದರ್ಶನಕ್ಕಾಗಿ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಅಲ್ಲದೆ ಮಳೆ ಬೆಳೆ ಚೆನ್ನಾಗಿ ಆಗಲೆಂದು ಪೂಜೆ ಸಲ್ಲಿಸುತ್ತಾರೆ. ವರ್ಷಕ್ಕೊಮ್ಮೆ ದೇವಿಯ ಹಬ್ಬ ಆಚರಿಸಿ, ಅನ್ನಸಂತರ್ಪಣೆ ಸಹ ಏರ್ಪಡಿಸುತ್ತಾರೆ. ಹೀಗಾಗಿ ರಸ್ತೆ ಅಗಲೀಕರಣದ ವಿಚಾರ ಬಂದಾಗ ಗ್ರಾಮಸ್ಥರು ದೇವಿಯ ವಿಗ್ರಹವನ್ನು ಸ್ಥಳಾಂತರಿಸಲು ಒಪ್ಪಿರಲಿಲ್ಲ. ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಹೂವಿನ ಪ್ರಸಾದದ ಮೂಲಕ ದೇವಿಯ ಅಪ್ಪಣೆ ಕೇಳಿದ್ದು, ಭಕ್ತರ ಕೋರಿಕೆಗೆ ದೇವತೆ ಸ್ಪಂದಿಸಿದ್ದಾಳೆ. ದೇವಿಯ ವಿಗ್ರಹ ಸ್ಥಳಾಂತರಕ್ಕೆ ತಾಯಿ ಚೌಡೇಶ್ವರಿ ಒಪ್ಪಿಗೆ ನೀಡಿದ್ದಾಳೆ ಎಂದು ಹೇಳಲಾಗಿದೆ.
Advertisement
Advertisement
ದೇವತೆ ಒಪ್ಪಿಗೆ ಮೇರೆಗೆ ರಸ್ತೆ ಬಳಿಯೇ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಬೃಹತ್ ದೇವಸ್ಥಾನ ನಿರ್ಮಾಣ ಮಾಡಲು ಇಲ್ಲಿನ ಭಕ್ತರು ನಿರ್ಧರಿಸಿದ್ದಾರೆ.