Connect with us

Bellary

3 ವರ್ಷಗಳಿಂದ ಬೆಳಗಾವಿಯಲ್ಲಿದ್ದ ಛೋಟಾ ಶಕೀಲನ ಬಂಟ ರಶೀದ್ ಮಲಬಾರಿ

Published

on

– ಮಲಬಾರಿಯ 6 ಮಂದಿ ಸಹಚರರು ಪೊಲೀಸರ ವಶಕ್ಕೆ

ಬೆಳಗಾವಿ: ಭೂಗತ ಪಾತಕಿ ಛೋಟಾ ಶಕೀಲನ ಬಂಟ ರಶೀದ್ ಮಲಬಾರಿ ಮೂರು ವರ್ಷಗಳಿಂದ ಯಾರಿಗೂ ಗೊತ್ತಿಲ್ಲದಂತೆ ಬೆಳಗಾವಿಯಲ್ಲಿ ಠಿಕಾಣಿ ಹೂಡಿದ್ದ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ.

2014ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ರಷೀದ್ ದುಬೈನಲ್ಲಿ ಭೂಗತಾಗಿದ್ದ ಎಂದು ಎಲ್ಲರು ಭಾವಿಸಿದ್ದರು. ಆದರೆ ಆತ ಮಾಮು ಎಂದು ಹೆಸರು ಬದಲಿಸಿಕೊಂಡು ಬೆಳಗಾವಿ, ಮುಂಬೈನಲ್ಲಿ ಓಡಾಡಿಕೊಂಡಿದ್ದ. ಈತನಿಗೆ ಬೆಳಗಾವಿ ಜಿಪಂ ಮಾಜಿ ಅಧ್ಯಕ್ಷರೊಬ್ಬರು ಫಾರ್ಮ್ ಹೌಸ್‍ನಲ್ಲಿ ಆಶ್ರಯ ನೀಡಿರುವುದು ಬೆಳಕಿಗೆ ಬಂದಿದೆ. ರಷೀದ್ ಮಲಬಾರಿಗೆ ಸಹಕರಿಸಿದ ಆರೋಪದ ಮೇಲೆ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಶೀದ್ ಮಲಬಾರಿಯ ಸಹಚರರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಜೀರ್ ನದಾಫ್, ಸರ್ಫರಾಜ್, ಇಮ್ತಿಯಾಜ್ ಸೇರಿ 6 ಮಂದಿಯನ್ನು ಬೆಳಗಾವಿ ಅಪರಾಧ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

2014ರ ಮಾರ್ಚ್ 14ರಂದು ಬೆಳಗಾವಿಗೆ ಬಂದು ಅಡಗಿ ಕುಳಿತಿದ್ದ ರಶೀದ್, ಪಾತಕ ಕೃತ್ಯಗಳಿಗೆ ಸ್ಥಳೀಯ ಯುವಕರನ್ನು ಪ್ರಚೋದಿಸುತ್ತಿದ್ದ. ಹುಣಸೆಹಣ್ಣು ವ್ಯಾಪಾರಿ ಸುರೇಶ ರೇಡೆಕರ್ ಪುತ್ರ ರೋಹನ ರೇಡೆಕರ್, ಬ್ಯಾಂಕ್ ಅಕೌಂಟ್ ಹ್ಯಾಕರ್ ಆಶಿಷ್ ರಂಜನ್, ಅಯಾಜ್ ಅಹ್ಮದ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಬಯಲಾಗಿದೆ.

2015ರ ಫೆಬ್ರವರಿ 18ರಂದು ರೋಹನ್ ಹತ್ಯೆ ನಡೆದಿತ್ತು. ಬೆಳಗಾವಿ ಉದ್ಯಮಿ ಮಗನಾದ ರೋಹನ್‍ನನ್ನು ಅಪಹರಿಸಿ ಹಣ ನೀಡುವುದಾಗಿ ಹೇಳಿದ್ರೂ ಬಿಡದೇ ಕೊಚ್ಚಿ ಕೊಂದಿದ್ರು. ರೋಹನ್ ಮೃತದೇಹ ಇನ್ನೂ ಪತ್ತೆಯಾಗಿಲ್ಲ.

ಮುಂಬೈ ಮೂಲದ ಆಶಿಷ್ ಉದ್ಯಮಿಗಳಿಗೆ ಹೆದರಿಸಿ ಸುಲಿಗೆ ಮಾಡ್ತಿದ್ದ. ಇದಕ್ಕೆ ರಶೀದ್ ಮಲಬಾರಿ ಬೆಂಬಲವಿತ್ತು. ಆದ್ರೆ ಸುಳ್ಳು ಹೇಳಲು ಆರಂಭಿಸಿ ಮುಂಬೈ ಬಿಲ್ಡರ್‍ಗಳನ್ನೇ ಕೊಲ್ಲುವ ಬೆದರಿಕೆ ಹಾಕಿದ್ರಿಂದ ಮಲಬಾರಿ ಗ್ಯಾಂಗ್ ಆಶೀಷ್ ಮತ್ತು ಅವನ ಗೆಳೆಯ ಅಯಾಜ್ ಅಹ್ಮದ್‍ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿತ್ತು. ಬಳಿಕ ಅಂಕೋಲಾ ಮತ್ತು ಯಲ್ಲಾಪೂರ ಘಾಟಿನಲ್ಲಿ ಶವವನ್ನು ಬಿಸಾಡಿ ಹೋಗಿದ್ದರು ಎಂದು ತಿಳಿದುಬಂದಿದೆ.

ಇತ್ತೀಚಿಗೆ ಒರ್ವ ಉದ್ಯಮಿಯನ್ನ ಅಪಹರಿಸಿ ಹಲ್ಲೆ ನಡೆಸಿದ್ದು, ಹಲ್ಲೆಗೆ ಸಂಬಂಧಿಸಿದಂತೆ ಕೆಲವರನ್ನ ಬಂಧಿಸಿ ತನಿಖೆ ನಡೆಸುತ್ತಿದ್ದ ವೇಳೆ ಆಘಾತಕಾರಿ ವಿಚಾರಗಳು ಬಯಲಾಗಿದೆ. ವಿಷಯ ತಿಳಿದು ರಷೀದ್ ಬೆಳಗಾವಿಯಿಂದ ಕಾಲ್ತಿತ್ತಿದ್ದಾನೆ.

Click to comment

Leave a Reply

Your email address will not be published. Required fields are marked *