ನವದೆಹಲಿ: ಚರಂಡಿಯಲ್ಲಿ ಪೀಸ್ ಪೀಸ್ ಮಾಡಿ ಎರಡು ಚೀಲಗಳಲ್ಲಿ ತುಂಬಿದ್ದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆಯಾಗಿರುವ ಘಟನೆ ದೆಹಲಿಯ ಬರಾಪುಲ್ಲಾದಲ್ಲಿ ನಡೆದಿದೆ.
ಬರಾಪುಲ್ಲಾದಲ್ಲಿರುವ ಫ್ಲೈಓವರ್ ಅಡಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಮೃತ ಯುವತಿಯನ್ನು ಆಕೆಯ ಗೆಳೆಯನೇ ಕೊಲೆ ಮಾಡಿದ್ದಾನೆ. ಯುವತಿ ನನಗೆ ಮೋಸ ಮಾಡುತ್ತಿದ್ದಾನೆ ಎಂದು ಅನುಮಾನ ಪಟ್ಟು ಈ ರೀತಿಯಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ನಿಜಾಮುದ್ದೀನ್ ಪ್ರದೇಶದ ನಿಜಾಮ್ ನಗರ ನಿವಾಸಿ ರಿಜ್ವಾನ್ ಖಾನ್(20) ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಆರೋಪಿ ರಿಜ್ವಾನ್ ಖಾನ್ ತನ್ನ ಗೆಳತಿಯನ್ನು ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬಳಿಕ ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಎರಡು ಚೀಲಗಳಲ್ಲಿ ತುಂಬಿ ಚರಂಡಿಗೆ ಬಿಸಾಕಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ನಾನು ಆಕೆಯನ್ನು ಕಳೆದ ಹನ್ನೊಂದು ತಿಂಗಳಿನಿಂದ ಪ್ರೀತಿಸುತ್ತಿದ್ದೆ. ಆದರೆ ಕೆಲ ದಿನಗಳ ಹಿಂದೆ ಆಕೆ ಬೇರೆಯೊಬ್ಬನ ಜೊತೆ ಸ್ನೇಹ ಬೆಳೆಸಿದ್ದಳು. ಇದರಿಂದ ನಾನು ಆಕೆಯನ್ನು ಕೊಲೆ ಮಾಡಿದ್ದೇನೆ ಎಂದು ಆರೋಪಿ ಖಾನ್ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv