ಕಲಬುರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವ ಹಾಗೂ ವಿಜಯದಶಮಿಯ ಅಂಗವಾಗಿ ರಾಜ್ಯಾದ್ಯಂತ ಈವರೆಗೂ 500 ಸ್ಥಳಗಳಲ್ಲಿ ಗಣವೇಷಧಾರಿ ಸ್ವಯಸೇವಕರಿಂದ ಪಥಸಂಚಲನ ನಡೆದಿವೆ. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಆದರೂ ಕಲಬುರಗಿ ಹೈಕೋರ್ಟ್ (Kalaburagi) ಪೀಠದ ತೀರ್ಪಿಗನುಗುಣವಾಗಿ ನಾವು ನಡೆಯುತ್ತೇವೆ ಎಂದು ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ ಅಶೋಕ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತ ಕಚೇರಿಯಲ್ಲಿ ವಿವಿಧ ಸಂಘಟನೆಗಳ ಶಾಂತಿ ಸಭೆ ಬಳಿಕ ಸಂಘದಿಂದ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸಂಘವು ದೇಶದ ಎಲ್ಲ ಸಮುದಾಯಗಳ ಭಾಷೆ, ಪಂಥ, ನಂಬಿಕೆ ಗೌರವಿಸುವ ಸಂಘಟನೆಯಾಗಿದೆ. ಪಥಸಂಚಲನ (RSS Flag March) ಯಾರ ವಿರುದ್ಧವೂ ಅಲ್ಲ ಎಂದು ಹೇಳಿದರು.
ಚಿತ್ತಾಪುರ ಒಂದು ಐತಿಹಾಸಿಕ ನಗರ. ಸಂಘದ ಸಂಚಲನದಿಂದ ಯಾವುದೇ ರೀತಿಯ ಅಹಿತಕರ ಘಟನೆ ನಮ್ಮ ಕಡೆಯಿಂದ ಆಗುವುದಿಲ್ಲ. ನ.2 ರಂದು ನಡೆಸಲು ಉದ್ದೇಶಿಸಿರುವ ಪಥಸಂಚಲನವು ಚಿತ್ತಾಪುರ ತಾಲೂಕಿನ ಪೂರ್ವ ನಿರ್ಧಾರಿತ ಕಾರ್ಯಕ್ರಮ. ತಾಲೂಕಿನ ಸ್ವಯಂಸೇವಕರೇ ಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ಹಿಂದೆಯೂ ಚಿತ್ತಾಪುರದಲ್ಲಿ ಸಂಚಲನಗಳು ಶಾಂತವಾಗಿ ನಡೆದಿದ್ದು,ಈಗಲೂ ಸಹ ಶಾಂತವಾಗಿಯೇ ನಡೆಯಲಿದೆ ಎಂಬ ಭರವಸೆ ನಮ್ಮದು. ಹೈಕೋರ್ಟ್‌ನಲ್ಲಿ ಈ ಪ್ರಕರಣವಿದ್ದು ನ್ಯಾಯಾಲಯದ ತೀರ್ಪಿಗನುಗುಣವಾಗಿ ನಾವು ನಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ದೇಶದ ಎಲ್ಲಾ ಸಮುದಾಯಗಳ ಭಾವನೆ ಗೌರವಿಸುವ ಆರ್‌ಎಸ್‌ಎಸ್ ಎಲ್ಲರಿಗೂ ಸಮಾನವಾಗಿ ಅವಕಾಶವನ್ನು ಬೇರೆ ಬೇರೆ ಸಮಯದಲ್ಲಿ ನೀಡಬೇಕೆಂದು ಕೇಳಿಕೊಳ್ಳುತ್ತದೆ. ಅವರವರ ವಿಚಾರ ಹೇಳುವ ಎಲ್ಲಾ ಅವಕಾಶಗಳಿವೆ. ಹೀಗಾಗಿ ಎಲ್ಲರಿಗೂ ಕೂಡ ಅನುಕೂಲವಾಗುವಂತೆ ದಿನಗಳನ್ನು ನೀಡುವಂತೆ ವಿನಂತಿಸಿದರು. ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಶಾಂತಿ ಸಭೆಗೆ ಬಂದಿರುವ ಎಲ್ಲ ಸಜ್ಜನ ನಾಗರೀಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮನವಿ ಮಾಡುತ್ತಿದ್ದು, ನಾವೆಲ್ಲರೂ ಕೂಡಿ ದೇಶದ ಏಳಿಗೆಗೆ ಶ್ರಮಿಸೋಣ ಎಂದು ಹೇಳಿದ್ದಾರೆ.

