ಚಿಟ್ಟಾಣಿ ರಂಗದ ಮೇಲೆ ಪಾತ್ರಧಾರಿಯಲ್ಲ, ಒಬ್ಬ ಚಿತ್ರಕಾರ: ಎಂ.ಎಲ್ ಸಾಮಗ

Public TV
3 Min Read
Chittani Ramachandra Hegde ML Samaga

ಉಡುಪಿ: ಚಿಟ್ಟಾಣಿ ರಂಗದ ಮೇಲೆ ಪಾತ್ರಧಾರಿಯಲ್ಲ. ಅವರೊಬ್ಬರ ಒಬ್ಬ ಚಿತ್ರಕಾರ ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ ಎಂ.ಎಲ್ ಸಾಮಗ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಭಿಮಾನಿಯೂ ಹೌದು ಅವರ ಜೊತೆ ರಂಗಸ್ಥಳದಲ್ಲಿ ಸಹ ಕಲಾವಿದನಾಗಿ ಕೆಲಸವನ್ನು ಕೂಡ ಮಾಡಿದ್ದೇನೆ. ಬರೀ ಯಕ್ಷರಂಗದಲ್ಲಿ ಮಾತ್ರವಲ್ಲದೇ ಆ ನಂತರ ಕೂಡ ನನ್ನದು ಮತ್ತು ಚಿಟ್ಟಾಣಿ ಅವರದ್ದು ಅವಿನಾಭಾವ ಸಂಬಂಧ ಎಂದರು.

chittani

ಪದ್ಮಶ್ರೀ ಚಿಟ್ಟಾಣಿ ಯಕ್ಷಗಾನಕ್ಕೆ ಕೊಟ್ಟಂತಹ ಕೊಡುಗೆ ಈ ಹಿಂದೆ ಮತ್ತು ಮುಂದೆ ಯಾರೂ ಕೊಡುವುದು ಕಷ್ಟಸಾಧ್ಯ. ನಲವತ್ತು ವರ್ಷಗಳ ಹಿಂದೆ ಅವರು ಮಾಡಿದ ಕೀಚಕ, ಭಸ್ಮಾಸುರನ ಪಾತ್ರ ಕರಾವಳಿ ಕರ್ನಾಟಕದ ಯಕ್ಷ ಪ್ರೇಮಿಗಳಲ್ಲಿ ಹೊಸದೊಂದು ಅನುಭವವನ್ನು ಸೃಷ್ಟಿ ಮಾಡಿತ್ತು. ರಾತ್ರಿಯಿಂದ ಬೆಳಗಿನ ಜಾವದ ತನಕ ಕೂಡ ವೇಷ ಮಾಡಿದರೂ ಎಲ್ಲೂ ಕೂಡ ಆಯಾಸವಾಗದೇ ಚಿಟ್ಟಾಣಿ ಪಾತ್ರಮಾಡುತ್ತಿದ್ದರು ಎಂದು ನೆನಪಿಸಿಕೊಂಡರು.
WhatsApp Image 2017 10 04 at 12.13.20 PM 1

ಜೀವನದಲ್ಲಿ ಎಷ್ಟೇ ನೋವು ಸಂಕಟ ಇದ್ದರೂ ಕೂಡ ರಂಗ ಪ್ರವೇಶದ ನಂತರ ಅದು ಯಾವುದನ್ನು ಕೂಡ ತೋರ್ಪಡಿಸದ ದೊಡ್ಡ ಕಲಾವಿದ ಚಿಟ್ಟಾಣಿ. ಪರಂಪರೆಯ ಪಾತ್ರಗಳಿಗೆ ಅದೂ ಕೂಡ ಗದಾಯುದ್ಧದ ಕೌರವ ಪಾತ್ರಕ್ಕೆ ವಿಶಿಷ್ಟವಾದ ಒಂದು ಆಯಾಮವನ್ನು ಕೊಟ್ಟಂತಹ ಕಲಾವಿದ. ಚಿಟ್ಟಾಣಿ ಅವರು ರಂಗದ ಮೇಲೆ ವೇಷ ಮತ್ತು ಪಾತ್ರವನ್ನು ಮಾಡುತ್ತಿದ್ದು ದಲ್ಲ ಅವರು ರಂಗ ಸ್ಥಳದಲ್ಲಿ ಒಂದು ಪಾತ್ರವನ್ನು ಚಿತ್ರಿಸುತ್ತಿದ್ದರು. ಆ ಚಿತ್ರವನ್ನು ಮತ್ತ್ಯಾರಿಗೂ ಮಾಡಲು ಸಾಧ್ಯವಿಲ್ಲ. ಪ್ರಬುದ್ಧ ಯಕ್ಷ ಪ್ರೇಕ್ಷಕರ ಮೇಲೆ ಚಿಟ್ಟಾಣಿ ಬೀರಿದಷ್ಟು ಪ್ರಭಾವ ಈ ಹಿಂದೆ ಯಾರೂ ಮೀರಿದ್ದಲ್ಲಿ ಮುಂದೆ ಬೀರುವಂತಹ ಲಕ್ಷಣಗಳು ಕೂಡ ಈಗಿನ ಯಕ್ಷಗಾನ ಕ್ಷೇತ್ರದಲ್ಲಿ ನನಗೆ ಕಾಣಿಸುತ್ತಿಲ್ಲ ಎಂದು ಅವರು ತಿಳಿಸಿದರು.

WhatsApp Image 2017 10 04 at 12.13.20 PM

ಅವರಂತಹ ಮತ್ತೊಬ್ಬ ಕಲಾವಿದ ಯಕ್ಷರಂಗದಲ್ಲಿ ಹುಟ್ಟಿ ಬರುತ್ತಾನೆ ಅನ್ನುವಂತದ್ದು ನಮ್ಮ ಕಲ್ಪನೆಗೂ ಮೀರಿದ್ದು. ಚಿಟ್ಟಾಣಿ ಅವರ ಅಗಲುವಿಕೆ ಯಕ್ಷಗಾನ ಕ್ಷೇತ್ರಕ್ಕೆ ಎಂದೂ ತುಂಬಲಾರದ ನಷ್ಟ ಅಂತ ಹೇಳಿ ನಾನು ಪರಿಭಾವಿಸುತ್ತೇನೆ ಎಂದು ದುಃಖ ವ್ಯಕ್ತಪಡಿಸಿದರು.

ಅಂತಿಮ ದರ್ಶನ: ಮಂಗಳವಾರ ರಾತ್ರಿ ನಿಧನರಾದ ಹಿರಿಯ ಕಲಾವಿದ ರಾಮಚಂದ್ರ ಚಿಟ್ಟಾಣಿ ಅವರ ಅಂತಿಮ ದರ್ಶನ ಕಾರ್ಯಕ್ರಮ ಉಡುಪಿಯ ಮಣಿಪಾಲದಲ್ಲಿ ನಡೆಯಿತು. ಮಣಿಪಾಲ ಆಸ್ಪತ್ರೆಯಿಂದ ಹೊನ್ನಾವರಕ್ಕೆ ಮೃತದೇಹವನ್ನು ರವಾನೆ ಮಾಡಲಾಯಿತು. ಇದಕ್ಕೂ ಮುನ್ನ ಮಣಿಪಾಲದಲ್ಲಿ ಚಿಟ್ಟಾಣಿ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದನಿಗೆ ಅಂತಿಮ ನಮನವನ್ನು ಸಲ್ಲಿಸಿದರು. ಹೂವಿನ ಹಾರ ಹಾಕಿ ಯಕ್ಷ ಕ್ಷೇತ್ರದಲ್ಲಿ ಚಿಟ್ಟಾಣಿ ಮಾಡಿದ ಸಾಧನೆಗಳ ಬಗ್ಗೆ ಗುಣಗಾನವನ್ನು ಮಾಡಿದರು. ನೂರಾರು ಮಂದಿ ಚಿಟ್ಟಾಣಿ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

WhatsApp Image 2017 10 04 at 12.13.22 PM 1

ಮಣಿಪಾಲ ಯುನಿವರ್ಸಿಟಿ ಆವರಣದಲ್ಲಿ ಈ ಅಂತಿಮ ಸಂಸ್ಕಾರ ವಿಧಿ ವಿಧಾನ ನಡೆಯಿತು. ನಂತರ ತೆರೆದ ವಾಹನದಲ್ಲಿ ಚಿಟ್ಟಾಣಿಯವರ ಮೃತದೇಹವನ್ನು ಶವಯಾತ್ರೆ ಮಾಡಲಾಯಿತು. ಉಡುಪಿಯ ಬ್ರಹ್ಮಾವರ, ಕೋಟ, ಸಾಲಿಗ್ರಾಮ ಕುಂದಾಪುರ, ಬೈಂದೂರು ಶಿರೂರು ಭಾಗದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ.

ಹೊನ್ನಾವರದ ಸ್ವಗ್ರಹದಲ್ಲಿ ಚಿಟ್ಟಾಣಿ ಅವರ ಅಂತ್ಯಸಂಸ್ಕಾರ ಇಂದು ಸಂಜೆ ನಡೆಯಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲೂ ಅಭಿಮಾನಿಗಳಿಗೆ- ಕುಟುಂಬಸ್ಥರಿಗೆ ಅಂತಿಮ ದರ್ಶನ ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದೆ.

WhatsApp Image 2017 10 04 at 12.13.22 PM

ರಾಜ್ ನಂಟು: ಚಿಟ್ಟಾಣಿ ರಾಮಚಂದ್ರರಿಗೂ ವರನಟ ಡಾ. ರಾಜ್ ಕುಮಾರ್ ಅವರಿಗೂ ಬಹಳ ನಂಟಿತ್ತು. ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು. ನೀವು ಯಕ್ಷಗಾನದ ನಟ ಅಂತ ರಾಜ್ ಕುಮಾರ್ ಹಾಡಿ ಹೊಗಳುತ್ತಿದ್ದರು. ಹಾಡು ಮತ್ತು ನಾಟ್ಯದ ಮೇಲಾಟದ ನಡುವೆ ನಟನೆ ತಂದು ಚಿಟ್ಟಾಣಿ ತಮ್ಮದೇ ಶೈಲಿಯನ್ನು ಯಕ್ಷರಂಗದಲ್ಲಿ ಬೆಳೆಸಿದ್ದರು. ಕೌರವ, ಕೀಚಕ- ದುಷ್ಟಬುದ್ಧಿ ಪಾತ್ರಗಳಲ್ಲಿ ಚಿಟ್ಟಾಣಿ ಎತ್ತಿದ ಕೈ. ನಿರಂತರ ಯಕ್ಷಗಾನಕ್ಕೆ ಜೀವನ ಮುಡಿಪಾಗಿಟ್ಟಿದ್ದಕ್ಕೆ ಚಿಟ್ಟಾಣಿಗೆ ಪದ್ಮಶ್ರೀ ಗೌರವ ದಕ್ಕಿತ್ತು.

ವಯೋಸಹಜ ಮತ್ತು ನಿಮೋನಿಯಾ ಕಾಯಿಲೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಮೂರು ದಿನ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ 84 ವರ್ಷದ ಚಿಟ್ಟಾಣಿ ಅವರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದರು.

ಚಿಟ್ಟಾಣಿಯವರು ನ್ಯೂಮೋನಿಯಾ ಹಾಗೂ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದರು. ನವರಾತ್ರಿ ಅಂಗವಾಗಿ ಬಂಗಾರಮಕ್ಕಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಚಿಟ್ಟಾಣಿ ಪಾತ್ರ ನಿರ್ವಹಿಸಿದ್ದರು. ಸೆಪ್ಟೆಂಬರ್ 25ರಂದು ವಸುವರಾಂಗಿ ಪ್ರಸಂಗದಲ್ಲಿ ಭೀಷ್ಮನ ತಂದೆ ಶಂತನು ಪಾತ್ರ ನಿರ್ವಹಿಸಿದ್ದರು. ಕಳೆದ ಮೂರು ವರ್ಷಗಳಿಂದ ಕೆಲ ಪಾತ್ರವನ್ನು ಅವರು ಅರ್ಧವಷ್ಟೇ ಮಾಡುತ್ತಿದ್ದು, ಬಳಿಕ ಬೇರೆ ಬೇರೆ ಕಲಾವಿದರು ಮುಂದುವರಿಸುತ್ತಿದ್ದರು.

WhatsApp Image 2017 10 04 at 12.13.23 PM 1

ಸೆ.25 ರಂದು ಶಂತನು ಪಾತ್ರವನ್ನು ಅವರೊಬ್ಬರೇ ಮಾಡಿದ್ದರು. ಬಳಿಕ ಆರೋಗ್ಯ ಕೈಕೊಟ್ಟಿದ್ದು, ಸುಧಾರಿಸಿಕೊಳ್ಳಲಿಲ್ಲ. ಮೂಲತಃ ಉತ್ತರ ಕನ್ನಡದವರಾದರೂ ಚಿಟ್ಟಾಣಿ ಅವರಿಗೆ ಉಡುಪಿಯಲ್ಲೂ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಪ್ರತೀ ವರ್ಷ ಚಿಟ್ಟಾಣಿ ಸಪ್ತಾಹ ಉಡುಪಿಯಲ್ಲಿ ನಡೆಯುತ್ತಾ ಬಂದಿದೆ.

ಕಳೆದ 7 ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಚಿಟ್ಟಾಣಿ ತಮ್ಮ 14ನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿದ್ದರು. ಅವರ ಇಬ್ಬರೂ ಮಕ್ಕಳು ಹಾಗೂ ಮೊಮ್ಮಗ ಕೂಡಾ ಯಕ್ಷಗಾನ ಕ್ಷೇತ್ರದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ. ಪತ್ನಿ, ಮಕ್ಕಳು ಮತ್ತು ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಅಗಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *