ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿನಂತೆ ಗೊಲ್ಲ ಸಮಾಜದ ಶಾಸಕಿ ಪೂರ್ಣಿಮಗೆ ಮಂತ್ರಿ ಸ್ಥಾನ ಕೊಡಬೇಕು. ಇಲ್ಲವಾದರೆ ಮಾತು ತಪ್ಪಿದ ಮುಖ್ಯಮಂತ್ರಿ ಎಂಬ ಪಟ್ಟ ಕಟ್ಟಿಕೊಳ್ಳಲಿದ್ದಾರೆ ಎಂದು ಯಾದವ ಗುರುಪೀಠದ ಶ್ರೀಕೃಷ್ಣಯಾದವಾನಾಂದ ಸ್ವಾಮೀಜಿ ಹೇಳಿದ್ದಾರೆ.
ಶ್ರೀಮಠದಲ್ಲಿ ಇಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಹೊಸ ಬೆಳವಣಿಗೆ ಆಗುತ್ತಿದ್ದು, ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಜನತೆ ಅರ್ಹ ಶಾಸಕರನ್ನಾಗಿ ಮಾಡಿದ್ದಾರೆ. ಇದರಿಂದ ಬಿ.ಎಸ್.ಯಡಿಯೂರಪ್ಪ ಮೂರೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಅವರ ಸಚಿವ ಸಂಪುಟದಲ್ಲಿ ಸಮಾಜದಿಂದ ಗೆದ್ದಿರುವ ಮಹಿಳೆಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಅಸಂಘಟಿತ ಸಮಾಜವಾಗಿರುವ ಗೊಲ್ಲ ಸಮುದಾಯದ ಏಕೈಕ ಶಾಸಕಿಯಾಗಿರುವ ಹಿರಿಯೂರಿನ ಪೂರ್ಣಿಮ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಇದು ನಮ್ಮ ಸಮುದಾಯದ ಒತ್ತಾಯ. ಅಲ್ಲದೆ ನಮ್ಮ ಹಕ್ಕು ಕೂಡ ಇದರಿಂದ ಸಮಾಜ ಮತ್ತುಷ್ಟು ಬಲಿಷ್ಠ ಆಗಲಿದೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿ ಆದ ವೇಳೆಯಲ್ಲಿ ನಾವು ಭೇಟಿ ಮಾಡಿ ಒತ್ತಾಯ ಮಾಡಿದ್ದೆವು. ಆಗ ಅವರು ಕೂಡ ಮಂತ್ರಿ ಸ್ಥಾನ ನೀಡುವುದಾಗಿ ಮಾತು ನೀಡಿ, ಸಾಮಾಜಿಕ ನ್ಯಾಯ ಒದಗಿಸಿ ಕೊಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ಪೂರ್ಣಿಮ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದ ಅವರು, ಯಡಿಯೂರಪ್ಪ ನಮ್ಮ ಸಮಾಜವನ್ನು ಮೊದಲಿನಿಂದಲೂ ಕೈ ಬಿಟ್ಟಿಲ್ಲ, ಅದೇ ರೀತಿ ಈಗಲೂ ಕೈ ಬಿಡಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಕೊಟ್ಟ ಮಾತನ್ನು ಎಂದಿಗೂ ತಪ್ಪಿಲ್ಲ. ಉಳಿಸಿಕೊಳ್ಳತ್ತಾರೆ. ನಾವು ಅವರಿಗೆ ಸಹಕಾರ ನೀಡಿದ್ದೇವೆ. ಅದೇ ರೀತಿ ಅವರು ಸಹ ಮಂತ್ರಿ ಸ್ಥಾನ ನೀಡಿ ಸಹಕಾರ ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.