ರಾಷ್ಟ್ರಕವಿಗೆ ಜಾತಿ ಬ್ರ್ಯಾಂಡ್ ಕಟ್ಟುವುದು ಸೂಕ್ತವಲ್ಲ: ಸಾಹಿತಿ ಯೋಗೇಶ್ ಸಹ್ಯಾದ್ರಿ

Public TV
2 Min Read
kuvempu

– ಕನ್ನಡ ಯಾರಪ್ಪನ ಆಸ್ತಿಯಲ್ಲ

ಚಿತ್ರದುರ್ಗ: ರಾಷ್ಟ್ರಕವಿ ಕುವೆಂಪು ಅವರಿಗೆ ಜಾತಿ ಬ್ರ್ಯಾಂಡ್ ಕಟ್ಟುವುದು ಸೂಕ್ತವಲ್ಲ ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಹೇಳಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದಿಂದ ಚಿತ್ರದುರ್ಗದಲ್ಲಿ ನಡೆದ ಕನ್ನಡ ದಿನೋತ್ಸವ ಹಾಗೂ ವಿಶ್ವ ಮಾನವ ರಾಷ್ಟ್ರಕವಿ ಕುವೆಂಪುರವರ 115 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಯೋಗೀಶ್ ಸಹ್ಯಾದ್ರಿ ಭಾಗವಹಿಸಿದ್ದರು. ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಜಾತಿ ಹಾಗೂ ಧರ್ಮವನ್ನು ಮೀರಿ ಬೆಳೆದವರು. ಕುವೆಂಪು ಅವಧಿಯಲ್ಲಿ ಅವರ ಬಳಿಗೆ ಜಾತಿ ಸುಳಿಯಲಿಲ್ಲ. ಆದರೆ ಇತ್ತೀಚೆಗೆ ಕೆಲವು ಕಡೆ ಅವರನ್ನು ಜಾತಿಯ ಬ್ರ್ಯಾಂಡ್ ಮಾಡುತ್ತಿರುವುದು ಸೂಕ್ತ ಅಲ್ಲ. ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನ ಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಹೆಮ್ಮೆ ಅವರಿಗಿದೆ ಎಂದರು. ಇದನ್ನೂ ಓದಿ: ಕುವೆಂಪು ಮನೆಗೆ ವಾರ್ಷಿಕ 1.5 ಲಕ್ಷ ಜನ ಭೇಟಿ: ಆದಿಚುಂಚನಗಿರಿ ವಿವಿ ಕುಲಸಚಿವ

CTD Yogeesh Sahyadri

ಸಂಸ್ಕೃತ ಕೇವಲ ಬ್ರಾಹ್ಮಣ ವರ್ಗಕ್ಕೆ ಸೀಮಿತವಾಗಿದ್ದ ಕಾಲದಲ್ಲಿ ಕುವೆಂಪು ಅವರು ಶೂದ್ರ ತಪಸ್ವಿ ಎಂಬ ನಾಟಕವನ್ನು ರಚಿಸಿ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದರು. ಈ ಮೂಲಕ ಸಾಹಿತ್ಯ ಜಾತಿ, ಮತ, ಧರ್ಮ, ಗಡಿ ಎಲ್ಲವನ್ನೂ ಮೀರಿದ್ದು ಎಂಬ ಸತ್ಯವನ್ನು ತಿಳಿಸಿದರು.

ಇಂದಿನ ದಿನಮಾನದಲ್ಲಿ ಹೋರಾಟವನ್ನು ಮಾಡಲು ಮುಂದಾದರೆ ಅದನ್ನು ಬೇರೆ ದೃಷ್ಟಿಯಿಂದ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ನಾಡು, ನುಡಿ, ನೆಲ, ಜಲದ ಬಗ್ಗೆ ಬಂದಾಗ ಮಾತ್ರ ಎಲ್ಲರು ಒಗ್ಗಟ್ಟಾಗಿ ಹೋರಾಟವನ್ನು ಮಾಡಬೇಕಿದೆ. ಗಡಿ ಪ್ರದೇಶದಲ್ಲಿ ಮಹಾರಾಷ್ಟ್ರ ಈಗಾಗಲೇ ತಗಾದೆಯನ್ನು ಪ್ರಾರಂಭಿಸಿದೆ. ಇದೇ ರೀತಿ ಈ ಹಿಂದೆಯೂ ಸಹ ಗಡಿಯ ಬಗ್ಗೆ ತಗಾದೆಯನ್ನು ಮಾಡಿದಾಗ ಅದರ ವಿರುದ್ಧ ಕನ್ನಡ ಪರ ಸಂಘಟನೆಗಳು ಹೋರಾಟವನ್ನು ಮಾಡುವುದರ ಮೂಲಕ ನಮ್ಮತನವನ್ನು ತೋರಿಸಿದ್ದವು. ಇಂತಹ ಸಮಯದಲ್ಲಿ ನಾವುಗಳು ಬೆಂಬಲವನ್ನು ವ್ಯಕ್ತಪಡಿಸುವ ಅಗತ್ಯ ಇದೆ ಎಂದರು.

CTD Yogeesh Sahyadri A 1

ಕಾರ್ಯಕ್ರಮದಲ್ಲಿ ಸಾಹಿತಿ ನಿರಂಜನ ದೇವರಮನೆ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಆರ್.ಮಂಜುನಾಥ್ ವಹಿಸಿದ್ದರು. ಸಮಾರಂಭದಲ್ಲಿ ಉದ್ಯಮಿ ಸುರೇಶ್‍ಬಾಬು, ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣ್, ಕಾರ್ಯಧ್ಯಕ್ಷ ಕೃಷ್ಣಮೂರ್ತಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *