ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ತಿಪ್ಪೇರುದ್ರಸ್ವಾಮಿ ಜಾತ್ರೆಯ ರಥೋತ್ಸವದ ಸಭೆಯಲ್ಲಿ ಶಿಫಾರಸ್ಸು ಪತ್ರಗಳಿಗೆ ಸಹಿ ಮಾಡುವಲ್ಲಿ ಫುಲ್ ಬ್ಯುಸಿಯಾಗಿದ್ದರು. ಇದನ್ನು ನೋಡಿದ ಭಕ್ತರು ಮಾತ್ರ ಸಚಿವರ ಮೇಲೆ ಬೇಸರಗೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವವನ್ನು ಮಧ್ಯ ಕರ್ನಾಟಕದ ಅತಿ ದೊಡ್ಡ ಐತಿಹಾಸಿಕ ಜಾತ್ರೆ ಎಂದೇ ಕರೆಯುತ್ತಾರೆ. ಈ ಜಾತ್ರೆಯ ಪೂರ್ವಭಾವಿ ಸಭೆ ವೇಳೆ ಅಗತ್ಯ ಸೌಲಭ್ಯಗಳ ಬಗ್ಗೆ ಚರ್ಚಿಸದೇ ಒಂದು ಕಂತೆ ಪತ್ರಗಳಿಗೆ ಸಹಿ ಮಾಡುವಲ್ಲಿ ಶ್ರೀರಾಮುಲು ಅವರು ತಲ್ಲೀನರಾಗಿದ್ದರು. ಪ್ರತಿ ಬಾರಿಯೂ ಚಿತ್ರದುರ್ಗಕ್ಕೆ ವಲಸಿಗರೇ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ. ಹೀಗಾಗಿ ಆಗೊಮ್ಮೆ, ಈಗೊಮ್ಮೆ ಸಚಿವರು ಸಭೆಸಮಾರಂಭಗಳ ಉದ್ಘಾಟನೆಗಷ್ಟೇ ಸೀಮಿತರಾಗಿದ್ದು, ಈ ಜಿಲ್ಲೆಯ ಅಭಿವೃದ್ಧಿ ಮಾತ್ರ ಮರಿಚಿಕೆಯಾಗಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.
ಅದರಲ್ಲೂ ಈ ಭಾಗದಲ್ಲಿ ನದಿ, ಸರೋವರ ಸೇರಿದಂತೆ ಯಾವ ನೀರಾವರಿ ಮೂಲಗಳಿಲ್ಲ. ಹೀಗಾಗಿ ಕೋಟೆನಾಡಲ್ಲಿ ರಸ್ತೆ, ನೀರು ಹಾಗೂ ಬೀದಿ ದೀಪದಂತಹ ಅಗತ್ಯ ಮೂಲಭೂತ ಸಮಸ್ಯೆಗಳು ಕೂಡ ಹೇರಳವಾಗಿದೆ. ಆದರೇ ಇಲ್ಲಿನ ಜನರು ಬಹುತೇಕ ಬುಡಕಟ್ಟು ಸಂಸ್ಕೃತಿಯ ನೆಲೆಗಟ್ಟಿನಡಿ ಬೆಳೆದಿದ್ದು, ಜಾತ್ರೆ, ಹಬ್ಬ, ಹರಿದಿನಗಳನ್ನು ವಿಶೇಷವಾಗಿ ಆಚರಿಸುತ್ತಾರೆ. ಹೀಗಾಗಿ ಇಲ್ಲಿನ ಐತಿಹಾಸಿಕ ಜಾತ್ರೆಯಾದ ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಇಲ್ಲಿನ ಪ್ರಮುಖ ಜಾತ್ರೆ ಎನಿಸಿಕೊಂಡಿದೆ. ಲಕ್ಷಾಂತರ ಮಂದಿ ಭಕ್ತರು ಆಂಧ್ರ, ಕೇರಳ, ಮಹಾರಾಷ್ಟ್ರ ರಾಜ್ಯಗಳಿಂದಲೂ ಜಾತ್ರೆಗೆ ಬಂದು ದೇವರ ದರ್ಶನ ಪಡೆಯುತ್ತಾರೆ.
ಇತ್ತೀಚೆಗೆ ಹಲವೆಡೆ ರಥದ ಅವಘಡಗಳು ಆಗ್ತಿರುವುದರಿಂದ ನಾಯಕನಟ್ಟಿಯ ಬೃಹತ್ ರಥ ಹಾಗೂ ರಥದ ಬೀದಿ ಸೇರಿದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಭಾಗಿಯಾಗುವ ಜನರಿಗೆ ಕುಡಿಯುವ ನೀರು ಮತ್ತು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ಸ್ಥಳೀಯ ಮುಖಂಡರು ಯೋಚಿಸಿದ್ದರು. ಹೀಗಾಗಿ ಈ ಕುರಿತು ಸಭೆ ಆಯೋಜಿಸಲಾಗಿತ್ತು. ಆದರೆ ಸಭೆಯಲ್ಲಿ ಸಚಿವರು ತಮ್ಮ ಪಾಡಿಗೆ ಸಹಿ ಹಾಕಿಕೊಂಡು ಇದ್ದು ನಿರ್ಲಕ್ಷ್ಯ ತೋರಿದ್ದಾರೆಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ಪ್ರಮುಖ ಸಭೆಗೆ ಹಾಜರಿದ್ದು ಚರ್ಚಿಸಬೇಕಾದ ಕುಡಿಯುವ ನೀರು, ನೈರ್ಮಲ್ಯ ಅಧಿಕಾರಿ, ಪಿಡಬ್ಲುಡಿ ಅಧಿಕಾರಿ, ಡಿಡಿಪಿಐ ಗೈರಾದರೂ ಸಚಿವ ಶ್ರೀರಾಮುಲು ಅವರ ವಿರುದ್ಧ ತುಟಿ ಬಿಚ್ಚಲಿಲ್ಲ. ಹೀಗಾಗಿ ಸಚಿವರ ನಿರ್ಲಕ್ಷ್ಯೆಕ್ಕೆ ಭಕ್ತರು, ಗ್ರಾಮಸ್ಥರಿಂದ ಅಸಮಧಾನ ವ್ಯಕ್ತವಾಗಿದೆ.