ಚಿತ್ರದುರ್ಗ: ಸಾಮಾನ್ಯವಾಗಿ ಪೊಲೀಸರು ಎಂದರೆ ಖಾಕಿ ಧರಿಸಿ ಲಾಠಿ ಹಿಡಿದು ಜೀಪಿನಲ್ಲಿ ಬೀಟ್ ಹೋಗೋದು ಸಹಜ. ಆದರೆ ಕೋಟೆನಾಡು ಚಿತ್ರದುರ್ಗದ ಲೇಡಿ ಸಿಂಗಂ ಎನಿಸಿರುವ ಎಸ್‍ಪಿ ರಾಧಿಕಾ ಅವರು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯ ಸಿದ್ಧತೆ ವೀಕ್ಷಿಸಲು ಸಿಬ್ಬಂದಿ ಜೊತೆ ಸೈಕಲಿನಲ್ಲಿ ಬೀಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಮಧ್ಯ ಕರ್ನಾಟಕದ ಐತಿಹಾಸಿಕ ಹಿನ್ನೆಲೆಯ ಅತಿ ದೊಡ್ಡ ಜಾತ್ರೆ ಎನಿಸಿರುವ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಸೇರುತ್ತಾರೆ. ಹೀಗಾಗಿ ಪ್ರತಿ ವರ್ಷದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಸ್ಥಳ ಪರಿಶೀಲನೆಗಾಗಿ ಎಸ್‍ಪಿ ರಾಧಿಕಾ ಅವರು ಸೈಕಲಿನಲ್ಲಿ ಆಗಮಿಸಿದರು. ಚಿತ್ರದುರ್ಗದಿಂದ ಮನಮಯ್ಯನಹಟ್ಟಿ ಗೇಟ್‍ವರೆಗೆ ಕಾರಿನಲ್ಲಿ ಬಂದ ಅವರು, ನಾಯಕನಟ್ಟಿಯವರೆಗೆ ಸೈಕ್ಲಿಂಗ್ ಕ್ರೀಡಾಪಟುವಂತೆ ಆಗಮಿಸಿದರು.
Advertisement
Advertisement
ಸೈಕಲ್ ಸವಾರಿ ಬಗ್ಗೆ ಸಿಬ್ಬಂದಿಯನ್ನು ಕೇಳಿದಾಗ, ಜಾತ್ರೆ ನಡೆಯುವ ಪ್ರತಿಯೊಂದು ಸೊಂದಿಗೊಂದಿಗಳ ಸ್ಥಳಕ್ಕೂ ಕಾರಿನಲ್ಲಿ ಹೋಗಲು ಸಾಧ್ಯವಿಲ್ಲ. ಹೀಗಾಗಿ ಸೈಕಲಿನಲ್ಲಿ ಸ್ಥಳ ಪರಿಶೀಲನೆ ನಡೆಸುವ ತಂತ್ರ ಅನುಸರಿಸಿ ಎಂಬುದಾಗಿ ಎಸ್‍ಪಿ ರಾಧಿಕಾ ಅವರು ಸೂಚಿಸಿದ್ದರು. ಅಲ್ಲದೆ ಜಾತ್ರೆಯಲ್ಲಿ ಪಾರ್ಕಿಂಗ್, ಚೆಕ್ ಪೋಸ್ಟ್‍ಗಳು ಹಾಗೂ ಬಿಗಿ ಭದ್ರತೆ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಹೇಳಿದ್ದರು ಎಂದರು.
Advertisement
ಪ್ರತಿ ವರ್ಷಕ್ಕಿಂತ ಈ ಬಾರಿ ಚೆಕ್ ಪೋಸ್ಟ್ ಗಳ ಸಂಖ್ಯೆ ಹೆಚ್ಚಿಸಿದ್ದು, ಈ ಬಾರಿ 24 ಚೆಕ್ ಪೋಸ್ಟ್ ಗಳು ಕಾರ್ಯ ನಿರ್ವಹಿಸಲಿವೆ. ಅಲ್ಲದೆ ಜಾತ್ರೆಯ ರಥೋತ್ಸವದ ವೇಳೆ ಅಡಚಣೆಯಾಗದಂತೆ ವಿಶೇಷ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವಂತೆ ಸಹ ರಾಧಿಕಾ ಅವರು ತಾಕೀತು ಮಾಡುವ ಮೂಲಕ ಭಕ್ತರ ಗಮನ ಸೆಳೆದಿದ್ದಾರೆ. ಬೆಳಗ್ಗೆ ಎಸ್‍ಪಿ ರಾಧಿಕಾ ಅವರಿಗೆ ಎಎಸ್‍ಪಿ ನಂದಗಾವಿ, ಡಿವೈಎಸ್‍ಪಿ ರೋಷನ್ ಬೇಗ್, ಪಿಎಸ್‍ಐ ರಘುನಾಥ್ ಸೇರಿದಂತೆ ಸಿಬ್ಬಂದಿ ಸಾಥ್ ನೀಡಿದರು.