ಚಿತ್ರದುರ್ಗ: ನಮ್ಮ ಹಿರಿಯರು ಮಗ್ಗಿ, ಕಾಗುಣಿತ ಹಾಗೂ ವ್ಯಾಕರಣಗಳನ್ನು ತಪ್ಪಿಲ್ಲದಂತೆ ಬರೆಯುತ್ತಾ, ಸದಾ ಮರೆಯದಂತೆ ನೆನಪಿನಲ್ಲಿ ಇಟ್ಟುಕೊಂಡಿರುತಿದ್ದರು. ಆದರೆ ಮೊಬೈಲ್ ಎಂಬ ಮಾರಿಯಿಂದ ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ಇಲ್ಲದಾಗಿದೆ. ವಿದ್ಯಾರ್ಥಿಗಳು ಮಗ್ಗಿ, ಲೆಕ್ಕ, ಗಣಿತಕ್ಕೆ ಕ್ಯಾಲ್ಕುಲೇಟರ್ ಅವಲಂಬಿಸಿದ್ದಾರೆಂದು ಜಿಲ್ಲೆಯ ಹೊಸದುರ್ಗ ಕುಂಚಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದ್ದಾರೆ.
ಶ್ರೀ ಶಾಂತವೀರ ಸ್ವಾಮೀಜಿ ಬೆಂಗಳೂರು ಮಹಾನಗರದ ತಿಗಳರಪಾಳ್ಳದ ಜೆ.ಬಿ ಕಾವಲ್ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ವ್ಯಕ್ತಿತ್ವ ವಿಕಾಸನ ಉಪನ್ಯಾಸದ ಸಾನಿಧ್ಯ ವಯಿಸಿದ್ದರು. ವಿದ್ಯಾರ್ಥಿಗಳು ಏಕಾಗ್ರತೆಗಾಗಿ ಧ್ಯಾನ, ಮೌನ ಅಳವಡಿಸಿಕೊಳ್ಳಿ. ಮನಸ್ಸಿನ ಸಮತೋಲನವನ್ನು ಕಾಯ್ದುಕೊಳ್ಳುವುದು ಇವತ್ತಿನ ಯುವ ಪೀಳಿಗೆಗೆ ಕಠಿಣವಾಗಿದೆ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖವಾಗಿ ಉತ್ತಮ ಸಂಗ – ಸಹವಾಸ, ಉತ್ತಮ ಅಭಿರುಚಿ – ಅಲೋಚನೆಗಳು ಬಹಳ ಮುಖ್ಯವಾಗಿದ್ದು, ವಿದ್ಯಾರ್ಥಿಗಳ ಜೇಬು ಗ್ರಂಥಾಲಯದ ಭಂಡಾರವಾಗಬೇಕು ಎಂದು ಹೇಳಿದರು.
ಯುವ ಜನರು ಉತ್ತಮ ನಡೆ ನುಡಿ, ಕಲೆ, ಸಾಹಿತ್ಯ ಹಾಗೂ ಕ್ರೀಡೆಯ ಅಭಿರುಚಿಯನ್ನು ಮೆರೆಯಬೇಕು. ದುಷ್ಚಟಗಳಿಗೆ ದಾಸರಾಗಿ ಅವರ ಜೀವನ ಗುಟುಕ, ಸಿಗರೇಟು, ಸಾರಾಯಿ ಹಾಗೂ ಡ್ರಗ್ಸ್‍ಗಳ ಕಸದ ತೊಟ್ಟಿಯಾಗಬಾರದು. ಅಲ್ಲದೆ ನಿಮ್ಮ ಶ್ರದ್ಧೆ, ಅಧ್ಯಾಯನ ನಿಮ್ಮ ಕುಟುಂಬಕ್ಕೆ ಆದರ್ಶವಾಗಬೇಕೆ ಹೊರತು ಅಂತ್ಯವಾಗಬಾರದು. ಈ ಬಗ್ಗೆ ನೀವು ಜಾಗೃತಿ ವಹಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯವಿದ್ದು, ಇಲ್ಲಿ ನೀವುಗಳು ನಿಮ್ಮ ಬದ್ಧತೆಯಿಂದ ಕುಟುಂಬದ ಕಷ್ಟಗಳನ್ನು ಪರಿಹಾರ ಮಾಡಲು ಮತ್ತೆ ಮತ್ತೆ ನಿಮ್ಮ ತಂದೆ, ತಾಯಿಯ ಪರಿಸ್ಥಿತಿ ನೋಡಿ ನಿಮ್ಮ ವರ್ತನೆ ಆಲೋಚನೆಗಳು ಸರಿಯಾಗಿರಬೇಕು. ಜೊತೆಗೆ ಉತ್ತಮವಾದ ಯೋಜನೆ ಉತ್ತಮಸ್ಥಾನಕ್ಕೆ ದಾರಿ ದೀಪವೆಂದು ಆಶೀರ್ವಾಚನ ನೀಡಿದರು. ಈ ವೇಳೆ ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಸಲಹಾ ಸಮಿತಿ ಸದಸ್ಯ ಗಿರೀಶ್ ಕರೆಮಾದೇನಹಳ್ಳಿ, ಮುಖ್ಯ ಶಿಕ್ಷಕಿ ಸುಧಾ, ಶಿಕ್ಷಕರು ಹಾಜರಿದ್ದರು.