ಚಿತ್ರದುರ್ಗ: ಈರುಳ್ಳಿಗೆ ಬಂಗಾರದ ಬೆಲೆ ಬಂದಿದೆ. ಹೀಗಾಗಿ ಗ್ರಾಹಕರ ಕಣ್ಣಲ್ಲಿ ನೀರು ಬಂದರೂ ಸಹ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಬರದನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ವಿಡಪನಕುಂಟೆ ಗ್ರಾಮದಲ್ಲಿ ನಿಂಗೇಗೌಡ ಎಂಬ ರೈತನೋರ್ವ ಕಷ್ಟಪಟ್ಟು ಬೆಳೆದ ಬಂಗಾರದಂತಹ ಈರುಳ್ಳಿಗೆ ಆತನ ಮೇಲಿನ ವೈಯಕ್ತಿಕ ದ್ವೇಷ ಹಾಗೂ ಆಸ್ತಿ ವಿವಾದದಿಂದಾಗಿ ಶತೃಗಳು ಕಳೆನಾಶಕವನ್ನು ಸಿಂಪಡಿಸಿ ಬೆಳೆಯನ್ನು ನಾಶಗೊಳಿಸಿದ್ದಾರೆ. ಹೀಗಾಗಿ ರೈತನ ಕೈಗೆ ಬಂದ ತುತ್ತು ಬಾಯಿಗೆ ಇಲ್ಲವಾಗಿದೆ.
ಮಾರುಕಟ್ಟೆಯಲ್ಲಿ ಇಂದು ನೂರು ರೂಪಾಯಿ ದುಡ್ಡು ಕೊಟ್ಟರೂ ಸಹ ಒಂದು ಕೆಜಿ ಈರುಳ್ಳಿ ಸಿಗುತ್ತಿಲ್ಲ. ಅಗತ್ಯವಿರುವಷ್ಟು ಈರುಳ್ಳಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹೀಗಾಗಿ ಈರುಳ್ಳಿ ಬೆಳೆ ಬೆಳೆಯುತ್ತಿರೋ ರೈತನ ಮೊಗದಲ್ಲಿ ಚಿಕ್ಕ ಮಂದಹಾಸ ಮೂಡುತ್ತಿದ್ದೂ, ಇನ್ನು ಕೆಲವೇ ದಿನಗಳಲ್ಲಿ ಕೈಗೆ ಬರುವ ಈರುಳ್ಳಿಗೆ ಬಹಳ ವರ್ಷಗಳ ನಂತರ ಬಂಗಾರದ ಬೆಲೆ ಬಂದಿದೆ. ಹೀಗಾಗಿ ಈ ಬಾರಿ ಸಾಲದ ಸುಳಿಯಿಂದ ಬಚಾವ್ ಆಗುವ ಕನಸು ಮನದಲ್ಲಿ ಮೂಡಿದೆ.
Advertisement
Advertisement
ವಿಡಪನಕುಂಟೆಯ ನಿಂಗೇಗೌಡ ಎಂಬ ರೈತ ಬೆಳೆದಿದ್ದ 3 ಎಕರೆ ಈರುಳ್ಳಿ ಮಾತ್ರ ಸಂಪೂರ್ಣ ನಾಶವಾಗಿದೆ. ಈ ಬಾರಿ ಮಳೆ ಉತ್ತಮವಾಗಿ ಬಂದಿದ್ದೂ, ರೈತನ ಬದುಕಿಗೆ ಭರವಸೆ ಮೂಡಿಸಿದ್ದ ಈರುಳ್ಳಿ ತನ್ನ ಮೇಲಿನ ದ್ವೇಷಕ್ಕೆ ಬಲಿಯಾಗಿದೆ. ಸಂಪಾಗಿ ಬೆಳೆದು, ಕೆಲವೇ ದಿನಗಳಲ್ಲಿ ಕೀಳಬೇಕಿದ್ದ ಈರುಳ್ಳಿಗೆ ಆತನ ದ್ವೇಷಿಗಳು ಕಳೆ ನಾಶಕ ರೂಪದ ವಿಷ ಸಿಂಪಡಿಸಿದ್ದಾರೆ.
Advertisement
ಮೂರು ಎಕರೆ ಜಮೀನನಲ್ಲಿ ಈ ಬಾರಿ ಇಳುವರಿ ಸಹ ಚೆನ್ನಾಗಿ ಬಂದಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಸುಮಾರು 10 ರಿಂದ 15 ಲಕ್ಷ ಬೆಲೆಗೆ ಈರುಳ್ಳಿ ಮಾರಾಟವಾಗುವ ನಿರೀಕ್ಷೆ ಇಟ್ಟುಕೊಂಡಿದ್ದ ರೈತ ನಿಂಗೇಗೌಡ, ಪಕ್ಕದ ಹೊಲಕ್ಕೆ ದಾರಿ ನೀಡಿಲ್ಲ ಎನ್ನುವ ಕ್ಷುಲ್ಲಕ ಕಾರಣ ಹಾಗು ಜಮೀನಿನಲ್ಲಿ ಪಾಲುದಾರಿಕೆ ನೀಡಿಲ್ಲವೆಂಬ ದ್ವೇಷಕ್ಕೆ ಸತೀಶ್ ಕುಟುಂಬದವರು ಹೀಗೆ ಬೆಳೆ ಹಾನಿ ಮಾಡಿದ್ದಾರೆಂದು ಆರೋಪಿಸಿದ್ದಾರೆ.
Advertisement
ನಿಂಗೇಗೌಡನ ಆರೋಪವನ್ನು ರೈತ ಸತೀಶ್ ಅಲ್ಲಗಳೆದಿದ್ದಾರೆ. ಇದು ಯಾವುದೋ ರೋಗ ಇರಬಹುದು ಆದ್ರೆ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡಿದ್ದಾರೆ ಅಂತ ನಿಂಗೇಗೌಡನ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.