ಚಿತ್ರದುರ್ಗ: ಅದೊಂದು ಅಪರೂಪದ ಪಕ್ಷಿ. ಹಿಂದೂ ಸಂಪ್ರದಾಯದ ಕೆಲ ಸಮುದಾಯಗಳಲ್ಲಿ ಆ ಪಕ್ಷಿಗೆ ಊಟವಿಟ್ಟು ಅದರ ಆಗಮನಕ್ಕಾಗಿ ಜನರು ಕಾಯ್ತಾರೆ. ಆ ಪಕ್ಷಿ ಊಟವನ್ನು ಸೇವಿಸಿದ್ರೆ ಮನುಷ್ಯನ ಜನ್ಮಕ್ಕೆ ಮುಕ್ತಿ ಎಂಬ ನಂಬಿಕೆ ಸಹ ಇದೆ. ಆದರೆ ಈ ಊರಲ್ಲಿ ಮಾತ್ರ ಆ ಪಕ್ಷಿಯ ಹೆಸರು ಕೇಳಿದ್ರೆ ಸಾಕು, ಜನರು ಬೆಚ್ಚಿ ಬೀಳ್ತಾರೆ. ರಸ್ತೆಯಲ್ಲಿ ಒಬ್ಬರೇ ಓಡಾಡಬೇಕೆಂದರೂ ಒಮ್ಮೆ ಯೋಚಿಸ್ತಾರೆ.
Advertisement
ಚಿತ್ರದುರ್ಗ ಜಿಲ್ಲೆ ಭರಮಸಾಗರ ಹೋಬಳಿಯ ಓಬಳಾಪುರ ಗ್ರಾಮದ ರಸ್ತೆಯಲ್ಲಿ ಒಂಟಿಯಾಗಿ ಓಡಾಡೋರನ್ನು ಕಂಡರೆ ವಿಮಾನದಷ್ಟೇ ಸರ್ರನೆ ಬಂದು ತಲೆ ಮೇಲೆ ಕುಟುಕಿ ಹೋಗುತ್ತದೆ. ಕಳೆದ 6 – 7 ತಿಂಗಳುಗಳಿಂದ ಒಂಟಿ ಕಾಗೆಯೊಂದು ಗ್ರಾಮಸ್ಥರಿಗೆ ಸಿಕ್ಕಾಪಟ್ಟೆ ಕ್ವಾಟ್ಲೆ ಕೊಡ್ತಿದೆ. ಕಾಗೆಯ ವಿಚಿತ್ರ ಕಾಟದಿಂದ ಗ್ರಾಮಸ್ಥರು ಅಕ್ಷರಶಃ ಹೈರಾಣಾಗಿದ್ದಾರೆ. ಒಂಟಿ ಮನುಷ್ಯರಿಗೆ ಕುಟುಕೋ ಈ ಕಾಗೆಗೆ ಮನೆ ಕಿಟಕಿಯ ಗಾಜು, ಬೈಕ್ ಮಿರರ್, ಕಾರಿನ ಗ್ಲಾಸ್ ಕಂಡ್ರೂ ಬಿಪಿ ನೆತ್ತಿಗೇರಿ ಪಟಪಟ ಅಂತ ಕುಕ್ಕುತ್ತಂತೆ. ಹಾಗೆಯೇ ಗಾಜುಗಳೇನಾದ್ರೂ ಕಣ್ಣಿಗೆ ಬಿದ್ರೆ ಸಾಕಾಗೋವರೆಗೂ ಕುಟುಕುತ್ತಲೇ ಇರುತ್ತದೆ. ಹೀಗೆ ಕಾಗೆ ಕುಟುಕಿ ಕುಟುಕಿ ಕೆಲವರ ತಲೆಗೆ ಭಾರೀ ಗಾಯ ಆಗಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
Advertisement
Advertisement
ಈ ಕಾಗೆಯೊಂದು ಇಷ್ಟು ಸಿಟ್ಟಿನಿಂದ ಗ್ರಾಮಸ್ಥರಿಗೆ ಕಾಟ ಕೊಡ್ತಿರೋದಕ್ಕೆ ಗ್ರಾಮದ ಆಂಜನೇಯ ಸ್ವಾಮಿಯ ಶಾಪವೇ ಕಾರಣವಂತೆ. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಪಾಳು ಬಿದ್ದು, ಹಲವು ವರ್ಷಗಳೇ ಕಳೆದಿವೆಯಂತೆ. ಅದರ ಅಭಿವೃದ್ಧಿ ಕಾರ್ಯ, ಮರು ಪ್ರತಿಷ್ಠಾಪನೆಗೆ, 10 ವರ್ಷದ ಹಿಂದೆ ಗ್ರಾಮಸ್ಥರು ಕೈ ಹಾಕಿದ್ದರು. ಆದರೆ ಆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಆಂಜನೇಯ ಸ್ವಾಮಿ ಗ್ರಾಮಕ್ಕೆ ಶಾಪ ಹಾಕಿದ್ದಾರಂತೆ. ಹಾಗಾಗಿ ಶನಿ ಮಹಾತ್ಮ ವಾಹನವಾಗಿರುವ ಕಾಗೆ ರೂಪದಲ್ಲಿ ಈ ರೀತಿ ಕಾಟ ಕೊಡ್ತಿದ್ದಾನಂತೆ.
Advertisement
ಒಂಟಿ ಕಾಗೆಯ ಕಿರಕ್ ಗೆ ಗ್ರಾಮದ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಕಾಗೆ ದಾಳಿಯಿಂದ ಈಗಾಗಲೇ ವ್ಯಕ್ತಿಯೊಬ್ಬನ ತಲೆಗೆ ಗಂಭೀರ ಗಾಯವಾಗಿ ನೆಂಟರ ಮನೆಯಲ್ಲೇ ಅವರು ನೆಲೆಸಿದ್ದಾರಂತೆ. ಅಲ್ಲದೆ ಓಬಳಾಪುರ ಗ್ರಾಮಕ್ಕೆ ಹೊರಗಿನ ಜನ ಬರೋದಕ್ಕೂ ಹೆದರಿಕೊಳ್ತಿದ್ದಾರಂತೆ. ಇಷ್ಟು ದಿನ ಒಬ್ಬಂಟಿಯಾಗಿ ಓಡಾಡ್ತಿದ್ದವರು ಈಗ ಗುಂಪು ಗುಂಪಾಗಿ ಓಡಾಡ್ತಿದ್ದಾರೆ. ಕೆಲವರಂತು ಮನೆಯಿಂದ ಹೊರಗೆ ಬರೋವಾಗ ಆಕಾಶ ನೋಡ್ಕೊಂಡು ಹೊರ ಬರ್ತಾರೆ. ಎಲ್ಲಾದ್ರೂ ಕಾಗೆ ಸುಳಿವು ಅಥವಾ ಶಬ್ದ ಕೇಳಿದ್ರೆ ಸಾಕು, ಮನೆಯಿಂದ ಹೊರಗೆ ಬರದೇ ಮನೆಯೊಳಗೆ ಅವಿತು ಕೂರುವಂತಾಗಿದೆ.
ಹಿಂದೂ ಸಂಪ್ರದಾಯದಲ್ಲಿ ಬದುಕಿದ್ದ ಮನುಷ್ಯನನ್ನು ಕಾಗೆ ಮುಟ್ಟಿದ್ರೆ ಅಪಶಕುನ. ಹಾಗಾಗಿ ಕಾಗೆ ಕಂಡ್ರೆ ಸಹಜವಾಗಿಯೇ ಜನ ಹೆದರಿಕೊಳ್ತಾರೆ. ಕಾಗೆ ಮನುಷ್ಯನ ಮೇಲೆ ಕೂತ್ರೆ, ತಲೆ ಕುಟುಕಿದ್ರೆ ಅವರು ಮನೆಯೊಳಗೆ ಹೋಗೋದಿಲ್ಲ. ಮೊದಲು ಸ್ನಾನ ಮಾಡಿ, ಶನಿ ಮಹಾತ್ಮನಿಗೆ ಪೂಜೆ ಮಾಡಿ ಬಳಿಕ ಓಡಾಡ್ತಾರೆ. ಅಲ್ಲದೆ ಸಮೀಪದ ಶನಿ ಮಹಾತ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಶನಿದೇವನಿಗೆ ಶಾಂತಿ ಮಾಡಿಸ್ತಾರೆ. ಈ ಗ್ರಾಮಸ್ಥರು ಕೂಡ ಹೋಗದ ಶನಿ ದೇವಾಲಯವಿಲ್ಲ, ಪೂಜೆ ಮಾಡದ ಆಂಜನೇಯನಿಲ್ಲ. ಕಂಡ ಕಂಡ ದೇವರಿಗೆ ಕೈಮುಗಿದು, ಹರಕೆ ಹೊತ್ತರೂ ಈ ಕಾಗೆ ಕ್ಯಾತೆ ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಯಾರಿಗೆ ಏನು ಕೇಡು ಕಾದಿದ್ಯೊ ಎಂಬ ಭಯ ಶುರುವಾಗಿದೆ.
ಅದರಲ್ಲೂ ಬಹುತೇಕ ಹಳ್ಳಿಗಳಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಊರ ಹೊರಗೆ ಅಥವಾ ಗಡಿ ಭಾಗದಲ್ಲಿ ಇರತ್ತೆ. ಪುರಾಣದ ಪ್ರಕಾರ ಗ್ರಾಮಕ್ಕೆ ಶನಿಕಾಟ ಆಗಬಾರದು, ಊರ ಹೊರಗೆ ಆಂಜನೇಯ ಸ್ವಾಮಿ ಇದ್ರೆ ಶನಿದೇವ ಬರೋದನ್ನ ತಡೆಯುತ್ತಾನ್ನೆ ಅನ್ನೋ ಪ್ರತಿತಿ ಸಹ ಇದೆ. ಆದರೆ ಇಲ್ಲಿ ಆಂಜನೇಯ ಸ್ವಾಮಿಗಾಗಿ ಶನಿದೇವ ಕ್ಯಾತೆ ತೆಗೆದಿದ್ದಾನೆ. ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಿದ್ರೆ ಶನಿ ಕಾಟ ಕಡಿಮೆ ಆಗತ್ತೆ, ಕಾಗೆ ಕ್ಯಾತೆ ತೆಗೆಯೋದು ಬಿಡತ್ತೆ ಅನ್ನೋದು ಇಲ್ಲಿನ ಗ್ರಾಮಸ್ಥರ ನಂಬಿಕೆ.
ಮನುಷ್ಯ ಬದುಕಿದ್ದಾಗ ಕಾಗೆ ಅಪಶಕುನ, ಸತ್ತಾಗ ಪಿಂಡ ತಿನ್ನೋಕೆ ಬರದಿದ್ರೆ ಅಪಶಕುನ. ಮನುಷ್ಯ ಬದುಕಿದ್ದಾಗ ಕಾಗೆ ಕಂಡರೆ ಓಡಿಸ್ತಾರೆ. ಸತ್ತಾಗ ಪಿಂಡ ತಿನ್ನೋಕೆ ಕರೆಯುತ್ತಾರೆ. ಈ ಕಾಗೆ ಪಿಂಡ ತಿನ್ನೋದಕ್ಕೂ ಬರೋದಿಲ್ಲ, ಓಡಿಸಿದ್ರೆ ಓಡೋದು ಇಲ್ಲ. ಕಾಗೆ ಓಡಿಸೋದಕ್ಕೆ 6 ತಿಂಗಳಿಂದ ಜನರು ಹರಸಾಹಸ ಪ್ರಯತ್ನ ಪಡ್ತಿದ್ರೂ ಪ್ರಯೋಜನವಾಗಿಲ್ಲ. ಈ ಗ್ರಾಮದೊಳಗಿನ ದೇವಸ್ಥಾನದ 500 ಮೀಟರ್ ವ್ಯಾಪ್ತಿಯಲ್ಲಿ ಓಡಾಡೋ ಜನರ ಗೋಳು ಕೇಳೋರಿಲ್ಲ.
ಆಂಜನೇಯ ಸ್ವಾಮಿ ದೇವಸ್ಥಾನ ಸುಸ್ತಿತಿಯಲ್ಲಿ ಇರೋವರೆಗೂ ಗ್ರಾಮಕ್ಕೆ ಯಾವುದೇ ಕಂಟಕ ಇರಲಿಲ್ಲ. ಆದರೆ 10 ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲ ಸೇರಿ ದೇವಸ್ಥಾನ ಜೀರ್ಣೋದ್ಧಾರ ಮಾಡೋಣ, ದೇವರಿಗೆ ಪ್ರಾಣ ಪ್ರತಿಷ್ಠಾನೆ ಮಾಡೋಣ ಅಂತ ದೇವರ ಕಾರ್ಯಕ್ಕೆ ಮುಂದಾಗಿದ್ರು. ದೇವಾಲಯ ಮರು ನಿರ್ಮಾಣಕ್ಕೆ ಅನುದಾನ ಕೊಡುವಂತೆ ಆಗಿನ ಶಾಸಕರಿಂದ ಹಿಡಿದು ಈಗಿನ ಶಾಸಕರವರೆಗೆ ಎಲ್ಲರೂ ಮನವಿ ಮಾಡಿದ್ದಾರೆ. ಆದರೆ ಯಾರೊಬ್ಬರೂ ಸ್ಪಂದಿಸಿಲ್ಲ. ಸರ್ಕಾರ ಅನುದಾನ ನೀಡಿ ದೇವಾಲಯ ಜೀರ್ಣೋದ್ಧಾರ ಮಾಡಿ, ಪ್ರಾಣ ಪ್ರತಿಷ್ಠಾಪನೆ ಮಾಡಿದ್ರೆ ಕಾಗೆ ಕಾಟ ತಪ್ಪಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಸಾಮಾನ್ಯವಾಗಿ ಕಾಗೆಗಳು ಸಮೂಹದಲ್ಲಿ ಇದ್ದಾಗ ಯಾರಾದರೂ ಸಾಯಿಸಿದರೆ ಅಥವಾ ಕಾಗೆಗಳು ಸತ್ತರೆ ಅವರು ಸಿಟ್ಟಿನಿಂದ ಮನುಷ್ಯರ ಮೇಲೆ ದಾಳಿ ಮಾಡೋದು ಸಹಜ. ಆದರೆ ಈ ಗ್ರಾಮದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಅಲ್ಲದೆ ಯಾರೊಬ್ಬರೂ ಕಾಗೆ ಸಹವಾಸಕ್ಕೆ ಹೋಗಿಲ್ಲ. ಆದರೂ ಕಾಗೆ ಮಾತ್ರ ದಿನೇ ದಿನೆ ವೈಲೆಂಟ್ ಆಗ್ತಿದೆ. ಕಾಗೆಯನ್ನ ಸಾಯಿಸೋದ್ ಇರ್ಲಿ ಬೆಳಗೆದ್ದು ಅದರ ಮುಖ ನೋಡೋಕೆ ಹೆದರೋ ಜನ ಈಗ ನಿತ್ಯ ಅದರ ಭಯದಲ್ಲೇ ಬದುಕುತ್ತಿದ್ದಾರೆ.
ಒಟ್ಟಾರೆ ಕಳೆದ 6 ತಿಂಗಳಿಂದ ಕಾಗೆ ಕಿರಿಕ್ ಗೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಮರು ನಿರ್ಮಾಣ ಮಾಡಿ ದೇಗುಲಕ್ಕೆ ಜೀವಕಳೆ ತುಂಬಿ ಪ್ರತಿಷ್ಠಾಪನೆ ಮಾಡಿದ್ರೆ ಗ್ರಾಮಕ್ಕೂ ಒಳ್ಳೆಯದಾಗುತ್ತೆ. ಕಾಗೆ ಆಕ್ರೋಶ ಶಮನವಾಗಿ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ ಅನ್ನೋದು ಹಿರಿಯರ ನಂಬಿಕೆಯಾಗಿದೆ.