– ಮೋದಿ ಓರ್ವ ಸುಳ್ಳುಗಾರ ನಾಟಕಕಾರ
ಚಿತ್ರದುರ್ಗ: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಅಂಜುಮನ್ ಸಮಿತಿ ನೇತೃತ್ವದಲ್ಲಿ ಮುಸ್ಲಿಂ ಭಾಂದವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇಂದು ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದಿಂದ ಓಬವ್ವ ವೃತ್ತದವರೆಗೆ ಹಮ್ಮಿಕೊಂಡಿದ್ದ ಮೆರವಣಿಗೆಗೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು. ವಂದೇ ಮಾತರಂ ಹಾಗೂ ಭೋಲೋ ಭಾರತ್ ಮಾತಾಕಿ ಜೈ ಘೋಷಣೆ ಮೊಳಗಿಸಿದ ಪ್ರತಿಭಟನಾಕಾರರು ಈ ದೇಶ್ ಅಮರ್ ರಹೇ ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್. ಆಂಜನೇಯ, ಸ್ವತಂತ್ರ ಬರುವುದಕ್ಕೂ ಮೊದಲು ದೇಶ ಬ್ರಿಟಿಷರ ಗುಲಾಮಗಿರಿಯಲ್ಲಿ ಇತ್ತು. ಸಾಕಷ್ಟು ಮಹಾನ್ ನಾಯಕರು ಹೋರಾಟ ಹಾಗೂ ಬಲಿದಾನದಿಂದ ದೇಶಕ್ಕೆ ಸ್ವತಂತ್ರ ತಂದು ಕೊಟ್ಟರು. ಇದರಲ್ಲಿ ಮುಸ್ಲಿಮರು ಇದ್ದಾರೆ ಇದನ್ನು ಮೋದಿ ಅರಿತುಕೊಳ್ಳಬೇಕು. ಹೃದಯವಂತಿಕೆ ಇಲ್ಲದ ಪ್ರಧಾನಿ ಮೋದಿ ದೇಶಕ್ಕಾಗಿ ಒಂದು ಒಳ್ಳೆಯ ಕೆಲಸ ಮಾಡಲಿಲ್ಲ. ಅವರು ಕೇವಲ ಶ್ರೀಮಂತರ ಪರವಾಗಿ ಕೆಲಸ ಮಾಡಿದ್ದು, ಪ್ರಶ್ನೆ ಮಾಡುವ ವ್ಯಕ್ತಿಗಳನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಪೌರತ್ವ ಕಾಯ್ದೆಯನ್ನು ಕೂಡಲೇ ಕೇಂದ್ರ ಸರ್ಕಾರ ಹಿಂಪಡೆಯಬೇಕು. ಮಹಾತ್ಮಾ ಗಾಂಧಿ, ಬಸವಣ್ಣ, ಮಹಮ್ಮದ್ ಪೈಗಂಬರ್ ಹುಟ್ಟಿರುವ ಈ ನೆಲದಲ್ಲಿ ಹಿಂಸೆಗೆ ಅವಕಾಶ ಕೊಡದೆ ಎಲ್ಲಾ ವರ್ಗದ ಜನರ ಹಿತ ಕಾಪಾಡಬೇಕು ಎಂದು ಸಲಹೆ ನೀಡಿದರು. ಈ ದೇಶ ಏಕಧರ್ಮದ ದೇಶವಲ್ಲ. ಹಿಂದೂ ಮುಸ್ಲಿಂ, ಪಾರ್ಸಿ, ಸಿಖ್ ಸೇರಿದಂತೆ ವಿವಿಧ ಧರ್ಮಗಳಿವೆ. ಹೀಗಾಗಿ ಭಾರತ ಸರ್ವಧರ್ಮದ ರಾಷ್ಟ್ರವಾಗಿದ್ದು, ಆಳುವ ಸರ್ಕಾರ ಎಲ್ಲರನ್ನು ಒಂದೇ ಎಂಬ ಭಾವನೆಯಿಂದ ಕಾಣಬೇಕು ಎಂದು ಸಲಹೆ ನೀಡಿದರು.
ಬಿಜೆಪಿಯವರ ಅಧಿಕಾರವನ್ನು ಪ್ರಶ್ನಿಸಿದವರನ್ನು ಬಂಧಿಸುತ್ತಿದ್ದಾರೆ. ಐಟಿ ಭಯ ಹುಟ್ಟಿಸುತ್ತಿದ್ದಾರೆ. ಆದರೆ ನಾವು 70 ವರ್ಷ ಆಳ್ವಿಕೆ ನಡೆಸಿದರೂ ಇಂತಹ ಏಕಪಕ್ಷೀಯ ಆಡಳಿತ ಮಾಡಿಲ್ಲ ಎಂದು ತಮ್ಮ ಪಕ್ಷದ ಆಡಳಿತವನ್ನು ಸಮರ್ಥಿಸಿಕೊಂಡ ಅವರು, ಅಚ್ಛೇ ದಿನ್ ಮೋದಿಗೆ ಬಂದಿದೆ. ಜನರಿಗಲ್ಲ ಸಬ್ ಕಾ ಸಾಥ್ ಸಭ್ ಕಾ ವಿಕಾಸ್ ನಹಿ ಆಯ. ಪ್ರಧಾನಿ ಮೋದಿ ಓರ್ವ ಸುಳ್ಳುಗಾರ, ನಾಟಕಕಾರ ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಂಸದ ಚಂದ್ರಪ್ಪ, ಚಳ್ಳಕೆರೆ ಶಾಸಕ ರಘುಮೂರ್ತಿ, ಉಮಾಪತಿ, ಬಿ.ಕೆ.ರಹಮತ್ ಉಲ್ಲಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಪೀರ್, ಹನುಮಲಿ ಷಣ್ಮುಖಪ್ಪ, ಮುರುಘರಾಜೇಂದ್ರ ಒಡೆಯರ್, ಶಿವುಯಾದವ್, ನರೇನಹಳ್ಳಿ ಅರುಣ್ ಕುಮಾರ್, ಅಬ್ದುಲ್ ಜಬ್ಬರ್, ಸಂಪತ್ ಸೇರಿದಂತೆ ಇತರರು ಹಾಜರಿದ್ದರು.