ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಹಲವು ಸಭೆಗಳಿಗೆ ಪದೇ ಪದೇ ಗೈರು ಹಾಜರಾಗುತ್ತಿದ್ದ ಮೊಳಕಾಲ್ಮೂರಿನ ಟಿಎಚ್‍ಓ ತುಳಸಿ ರಂಗನಾಥ್ ಅವರನ್ನು ಅಮಾನತುಗೊಳಿಸಲು ಸೂಚನೆ ನೀಡಿದ್ದಾರೆ.
ಮೊಳಕಾಲ್ಮೂರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕುಂಟಿತವಾಗಲು ಎಇಇ ಶಿವಕುಮಾರ್ ಪವಾರ್ ಕಾರಣವಾಗಿದ್ದಾರೆ. ಅವರಿಗೆ ನೋಟಿಸ್ ನೀಡಬೇಕು ಎಂದು ಉನ್ನತ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಇದೇ ವೇಳೆ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಯಲ್ಲಿನ ಸಮಸ್ಯೆ ಕುರಿತು ತೀವ್ರ ಕಾಳಜಿವಹಿಸಿ, ಸಭೆಯಲ್ಲಿನ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಜೊತೆಗೆ ಆಸ್ಪತ್ರೆಗೆ ಅಗತ್ಯವಿರುವ ರೇಡಿಯಾಲಜಿಸ್ಟ್, ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ಚರ್ಮ ರೋಗ ತಜ್ಞರು, ಫಿಸಿಯೋಥೆರಪಿಸ್ಟ್, 3 ಔಷಧ ವಿತರಕರು, 11 ಶುಶ್ರೂಷಕಿಯರು ಹಾಗೂ ಅತಿ ಮುಖ್ಯವಾಗಿ ಅಲ್ಟ್ರಾ ಸ್ಕ್ಯಾನಿಂಗ್ ಮೆಷಿನ್, ಪಲ್ಸ್ ಆಕ್ಸಿ ಮೀಟರ್, ಎಕ್ಸ್ ರೇ ಮೆಷಿನ್‍ಗಳನ್ನು ಆದಷ್ಟು ಬೇಗ ಒದಗಿಸಲು ಅಗತ್ಯವಿರುವ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
Advertisement
Advertisement
ಸಚಿವ ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದ ರಾಯಪುರದಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜ್ ಹಾಗೂ ಹೋಮಿಯೋಪತಿ ಕಾಲೇಜ್ ಸಹ ಸ್ಥಾಪನೆ ಮಾಡುವ ಇಂಗಿತ ವ್ಯಕ್ತಪಡಿಸಿದರು. ಪಶುಸಂಗೋಪನೆ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಗೂ ಸಭೆಯಲ್ಲಿ ಮನವಿ ಮಾಡಿದಾಗ, ಸಂಪುಟದಲ್ಲಿ ಈ ಬಗ್ಗೆ ಚರ್ಚಿಸುವ ಭರವಸೆ ನೀಡಿದರು.
Advertisement
ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಂಗನವಾಡಿಗಳ ಬಳಿ ನೆಲ್ಲಿಕಾಯಿ, ಸೀಬೆಕಾಯಿ, ಹುಣಸೆ ಕಾಯಿ ಮರಗಳ ಸಸಿ ನೆಟ್ಟು ಬೆಳೆಸಲು ವೈದ್ಯರ ನೀಡಿದ ಸಲಹೆ ಹಾಗೂ ಮನವಿಯನ್ನು ಸಚಿವರು ಪಡೆದರು. ಬಳಿಕ ಅಂಗನವಾಡಿಗಳ ಬಳಿ ಕುಡಿಯುವ ನೀರಿನ ಸೌಲಭ್ಯ ಜೊತೆಗೆ ಗಿಡಮರಗಳನ್ನು ಬೆಳೆಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೆಯೇ ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಅಂಗನವಾಡಿ ಸಿಬ್ಬಂದಿಗೆ ಗೌರವಧನ ಹಾಗೂ ಮೊಟ್ಟೆಗೆ ಹಣ ಬಿಡುಗಡೆಯಲ್ಲಿ ವಿಳಂಭವಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಸಚಿವ ಶ್ರೀರಾಮುಲು ಅವರು ಗರಂ ಆದರು.
Advertisement
ಮೊಳಕಾಲ್ಮೂರು ಕ್ಷೇತ್ರದಲ್ಲಿ 1.35 ಲಕ್ಷ ಬಿಪಿಎಲ್ ಕಾರ್ಡ್ ಗಳಿವೆ. ಆದರೆ ಸಂಪೂರ್ಣ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡದ ಅಧಿಕಾರಿಗೆ ಸಚಿವರು ತರಾಟೆ ತೆಗೆದುಕೊಂಡರು. ತಕ್ಷಣ ಕಾರ್ಡ್ ವಿತರಿಸಲು ಸೂಚಿಸಿದರು. ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ಬೇಡಿಕೆಗೂ ಸ್ಪಂದಿಸಿದ ಅವರು, ವಿದ್ಯಾರ್ಥಿಗಳ ಹಾಸ್ಟೆಲ್ ಪೂರ್ಣಗೊಂಡ ಬಳಿಕ ಆರಂಭಿಸುವ ಭರವಸೆ ನೀಡಿದರು.
ಭಾಗ್ಯ ಲಕ್ಷ್ಮಿ ಬಾಂಡ್ ವಿತರಣೆ ಮತ್ತೆ ಆರಂಭ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಈ ಹಿಂದೆ ಜಾರಿಗೆ ತರಲಾಗಿದ್ದ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ವಿಳಂಬದ ಬಗ್ಗೆ ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು. ಆಗ ಅವರ ಮಾತಿಗೆ ಉತ್ತರಿಸಿದ ಅಧಿಕಾರಿಗಳು, 2015-16ರಿಂದ ಈಚೆಗೆ ವಿತರಣೆ ಆಗಿರಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಬಾಂಡ್ ವಿತರಿಸುತ್ತಿರುವುದಾಗಿ ತಿಳಿಸಿದರು.
ದೇವರಾಜ ಅರಸು ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಬಿಡುಗಡೆ ಆಗಿದೆ. ಕೆಲಸ ಕೂಡ ನಡೆಯುತ್ತಿದ್ದು, ಉಳಿದ 50 ಲಕ್ಷ ರೂ. ಬಿಡುಗಡೆಗೆ ಅಧಿಕಾರಿಗಳಿಂದ ಮನವಿ ಸಲ್ಲಿಸಲಾಯಿತು. ಆಗ ಸಚಿವರು ತಕ್ಷಣ ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು.
ಗಡಿಭಾಗದ ಅಧಿಕಾರಿಗಳು ನಿಷ್ಠೆ ಹಾಗೂ ಬದ್ಧತೆಯಿಂದ ಕೆಲಸ ಮಾಡಬೇಕು. ತಾಲೂಕು ಕೇಂದ್ರಗಳಲ್ಲಿರುವ ಅಧಿಕಾರಿಗಳು ಹೆಡ್ ಕ್ವಾರ್ಟರ್ಸ್ ನಲ್ಲಿಯೇ ಉಳಿಯಬೇಕು. ಒಂದು ವೇಳೆ ಸರಿಯಾಗಿ ಕೆಲಸ ಮಾಡಲು ಆಗದವರು ಹೊರಗಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು. ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳು ಬಾರದ ರೀತಿ ಜನರಿಗೆ ಸ್ಪಂದಿಸಬೇಕು, ಜನರ ಕೆಲಸ ಮಾಡಬೇಕು ಎಂದು ಸಚಿವ ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದರು.