ಚಿತ್ರದುರ್ಗ: ರೈತರ ಜಮೀನಿನಲ್ಲಿ ಮೊಬೈಲ್ ಟವರ್ ಹಾಕಿಸಿ, ಮಾಸಿಕ ಬಾಡಿಗೆ ಕೊಡುತ್ತೇವೆ ಎಂದು ನಂಬಿಸಿ 30 ಸಾವಿರ ರೂ. ವಂಚನೆ ಮಾಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಗುಡ್ಡದರಂಗವನಹಳ್ಳಿಯಲ್ಲಿ ನಡೆದಿದೆ.
ಮಹೇಶ ರೈತ ಕುಟುಂಬಕ್ಕೆ ಮೋಸ ಮಾಡಿ ಹಣ ಪಡೆದು ಪರಾರಿಯಾಗಿರುವ ವ್ಯಕ್ತಿಯಾಗಿದ್ದು, ಗ್ರಾಮದ ಸರಸ್ವತಿ ಹಾಗೂ ಭರತೇಶರೆಡ್ಡಿ ಅವರಿಂದ ಹಣ ಪಡೆದು ವಂಚಿಸಿದ್ದಾನೆ.
ಗ್ರಾಮಕ್ಕೆ ಬಂದಾಗ ಸರಳ ಸಜ್ಜನನಂತೆ ಕಾಣುತ್ತಿದ್ದ ಮಹೇಶನ ಒಳ್ಳೆ ಮಾತುಗಳನ್ನಾಡಿ ರೈತಕುಟುಂಬದ ನಂಬಿಕೆ ಗಳಿಸಿದ್ದಾನೆ. ತಾನೊಬ್ಬ ಖಾಸಗಿ ಮೊಬೈಲ್ ಟವರ್ ಕಂಪನಿಯ ಏಜೆಂಟ್ ಎಂದು ಮಹೇಶ್ ಪರಿಚಯ ಮಾಡಿಸಿಕೊಂಡಿದ್ದು, ನಿಮ್ಮ ಜಮೀನು ಎತ್ತರದ ಸ್ಥಳದಲ್ಲಿದೆ. ಹೀಗಾಗಿ ಕೇವಲ ಹೂವು ಬೆಳೆದುಕೊಂಡು ಕಷ್ಟಪಡೋದು ಬೇಡ, ನಿಮಗೆ ಪ್ರತಿ ತಿಂಗಳು 15 ಸಾವಿರ ಬಾಡಿಗೆ ಸಿಗುವಂತೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಇದನ್ನು ಓದಿ: ಟವರ್ ನಿರ್ಮಾಣದ ಸೋಗಿನಲ್ಲಿ ದಂಪತಿಗೆ ಲಕ್ಷ ಲಕ್ಷ ದೋಖಾ
ಮೊಬೈಲ್ ಟವರ್ ಹಾಕಲು ನೀವು ಯಾವುದೇ ಕಾನೂನಿಗೆ ಎದುರಾಗುವ ಅಗತ್ಯವಿಲ್ಲ. ನೀವುಗಳು ಕೇವಲ 30*40 ಜಾಗವನ್ನು ಮಾತ್ರ ಟವರ್‍ಗೆ ನೀಡಿದರೆ ಸಾಕು. ನಿಮ್ಮ ಊರಲ್ಲಿ ಮೊಬೈಲ್ ಟಬರ್ ಹಾಕಲು ಬಾರಿ ಬೇಡಿಕೆ ಇದೆ. ಯಾರು ಮೊದಲು ನಮಗೆ ಕಮೀಷನ್ ಆಗಿ ಎರಡು ತಿಂಗಳ ಬಾಡಿಗೆಯ ಹಣವನ್ನು ಮುಂಗಡವಾಗಿ ನೀಡುತ್ತಾರೋ ಅಂತಹವರ ಜಮೀನಿನಲ್ಲಿ ನಾವು ಟವರ್ ಹಾಕುತ್ತೇವೆ ಎಂದು ಹೇಳಿದ್ದಾನೆ. ಅಲ್ಲದೇ ರೈತರು ನೀಡುವ ಜಾಗಕ್ಕೆ ಕಂಪನಿ ಮುಂಗಡವಾಗಿ 2 ಲಕ್ಷ ರೂ. ನೀಡುತ್ತೇವೆ ಎಂದು ಹೇಳಿದ್ದಾನೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಸರಸ್ವತಿಯವರ ಮನೆಗೆ ಬಂದಿದ್ದ ಮಹೇಶ, ಈಗಾಗಲೇ ನಿಮ್ಮ ಐಡಿ ನಮ್ಮ ಕಂಪನಿಯಲ್ಲಿ ಸಿದ್ಧವಾಗಿದೆ. ಹೀಗಾಗಿ ತಾವು ತಮ್ಮ ಆಧಾರ್‍ಕಾರ್ಡ್ ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಕಚೇರಿ ಬಳಿ ಬನ್ನಿ ಎಂದು 30 ಸಾವಿರ ಹಣ ಪಡೆದು ಎಸ್ಕೇಪ್ ಆಗಿದ್ದಾನೆ.
ಉಳಿದಂತೆ ಆರೋಪಿ ಮಹೇಶ ಈಗಾಗಲೇ ಹಾಸನ ಜಿಲ್ಲೆಯ ಅರಸಿಕೆರೆಯಲ್ಲೂ ಇದೇ ರೀತಿ ರೈತರಿಗೆ ಮೋಸ ಮಾಡಿರುವ ಮಾಹಿತಿ ಲಭ್ಯವಾಗಿದೆ. ಹೂವು ಬೆಳೆದು ಬದುಕು ಸಾಗಿಸುತ್ತಿದ್ದ ರೈತ ಕುಟುಂಬ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.