ಚಿತ್ರದುರ್ಗ: ಅಪ್ರಾಪ್ತೆಯನ್ನು ಮದುವೆಯಾಗಬಾರದೆಂಬ ಕಾನೂನಿದೆ. ಆದರೆ ಕುಟುಂಬಸ್ಥರ ಸಹಕಾರವಿದೆ ಎಂಬ ದರ್ಪದಿಂದಾಗಿ ಯುವಕನೊಬ್ಬ ನಿರ್ಗತಿಕ ಅಪ್ರಾಪ್ತೆಯನ್ನು ಆಟೋದಲ್ಲಿ ಕಿಡ್ನಾಪ್ ಮಾಡಿ ಬಲವಂತವಾಗಿ ಮದುವೆಯಾಗಿರುವ ಅಮಾನವೀಯ ಕೃತ್ಯ ಚಳ್ಳಕೆರೆಯಲ್ಲಿ ನಡೆದಿದೆ.
ಚಳ್ಳಕೆರೆಯ ರಾಜು ಬಂಧಿತ ಆರೋಪಿ. 2019ರ ಮೇ 26ರಂದು ಈ ಘಟನೆ ನಡೆದಿದ್ದು, ಆರೋಪಿ ರಾಜು ಬಾಲಕಿಗೆ ಇಂಜೆಕ್ಷನ್ ಕೊಟ್ಟು ಆಟೋದಲ್ಲಿ ಎಳೆದೊಯ್ದಿದಿದ್ದ. ಬಳಿಕ ಸಂಬಂಧಿಕರ ಮನೆಯಲ್ಲಿ ಬಾಲಕಿಯನ್ನು ಕೂಡಿ ಹಾಕಿ ಬಲವಂತವಾಗಿ ಮದುವೆಯಾಗಿದ್ದ. ಆದರೆ ಈ ವಿಷಯ ತಿಳಿದ ಹುಡುಗಿಯ ತಂದೆ ಆಘಾತಕ್ಕೆ ಒಳಗಾಗಿ ಮಗಳ ಮದುವೆಯಾದ ಕೇವಲ ಮೂರೇ ದಿನಕ್ಕೆ ಮೃತಪಟ್ಟಿದ್ದರು. ಹೀಗಾಗಿ ಅಪ್ರಾಪ್ತೆಯ ಸಂಬಂಧಿಕರು ಹಾಗೂ ಕೆಲ ಪ್ರಜ್ಞಾವಂತರು ಯುವಕನ ಮನೆಗೆ ತೆರಳಿ ಜಗಳ ಮಾಡಿ ಅಪ್ರಾಪ್ತೆಯನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ. ಇದನ್ನೂ ಓದಿ: ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ತಾಳಿ ಕಟ್ಟಿದವ ಅರೆಸ್ಟ್
Advertisement
Advertisement
ಇಷ್ಟೆಲ್ಲಾ ಘಟನೆ ನಡೆದ ಬಳಿಕ ನೊಂದ ಅಪ್ತಾಪ್ತೆಯ ಕುಟುಬಂಸ್ಥರು ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಅಲೆದಾಡಿದ್ದರು. ಆದರೂ ಪೊಲೀಸರು ಯಾವುದೇ ರೀತಿ ಪ್ರಕರಣ ದಾಖಲಿಸಿರಲಿಲ್ಲ. ಇದರಿಂದ ಬೇಸತ್ತ ಸಂತ್ರಸ್ತೆಯ ಕುಟುಂಬಸ್ಥರು ಕಂಗಲಾಗಿದ್ದು, ಪ್ರಭಾವಿ ನಾಯಕರ ಕುಮ್ಮಕ್ಕಿನಿಂದ ಪ್ರಕರಣ ದಾಖಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
Advertisement
ಕೊನೆಗೆ ದಿಕ್ಕು ತೋಚದ ಸಂತ್ರಸ್ತೆಯ ಸಂಬಂಧಿಕರು ಚಿತ್ರದುರ್ಗದ ಮಹಿಳಾ ಹೊರಾಟಗಾರರಾದ ರಮಾ ನಾಗರಾಜ್ ಬಳಿ ತಮ್ಮ ಕಷ್ಟ ಹೇಳಿಕೊಂಡಿದ್ದರು. ಬಳಿಕ ರಮಾ ನಾಗರಾಜ್ ಅವರ ಸಮ್ಮುಖದಲ್ಲಿ ಚಳ್ಳಕೆರೆ ಠಾಣೆಗೆ ಆಗಮಿಸಿದ ಅಪ್ರಾಪ್ತೆ ಸಂಬಂಧಿಕರು ಆರೋಪಿಯ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಆಗ ಎಚ್ಚೆತ್ತ ಪೊಲೀಸರು ಆರೋಪಿ ರಾಜುವನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಲ್ಲೇ ತಾಳಿ ಕಟ್ಟಿದ
Advertisement
ಅಪ್ರಾಪ್ತ ಬಾಲಕಿಯ ಮದುವೆಗೆ ಸಹಕರಿಸಿದ ಗ್ರಾಮದ ಪ್ರಭಾವಿ ಮುಖಂಡರು ಹಾಗೂ ಯುವಕನ ಕುಟುಂಬಸ್ಥರು ಸೇರಿದಂತೆ ಸುಮಾರು 19 ಜನರ ಮೇಲೆ ಸಂತ್ರಸ್ತೆ ದೂರು ನೀಡಿದ್ದಾಳೆ. ಈ ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರು, ಕಳೆದ ಒಂಬತ್ತು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಅಪ್ರಾಪ್ತ ಯುವಕಿಯನ್ನು ಆರೋಪಿ ರಾಜು ಬಲವಂತವಾಗಿ ಮದುವೆ ಆಗಿದ್ದಾರೆ. ಆತನ ವಿರುದ್ಧ ಬಾಲ್ಯವಿವಾಹದ ಕಾಯ್ದೆ ಅಡಿ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಅಪ್ರಾಪ್ತೆಯ ಮದುವೆಗೆ ಯಾರೆಲ್ಲ ಬೆಂಬಲ ನೀಡಿದ್ದಾರೆ ಎಂದು ತನಿಖೆ ನಡೆಸಿ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.