– ಪ್ರಿಯಕರನ ಅಸಲಿ ಆಟ ತಿಳಿಸಿದ್ದು ಯುವತಿ ನೇಣಿಗೆ ಶರಣು
– ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ಮೊಬೈಲ್ ಫೋನ್
ಚಿತ್ರದುರ್ಗ: ಪ್ರೀತಿಸಿದ ಪ್ರೇಮಿಗಳು ಮನೆಯವರ ವಿರೋಧದ ನಡುವೆಯೂ ಓಡಿಹೋಗಿ ದೇಗುಲ ಹಾಗೂ ನಿರ್ಜನ ಪ್ರದೇಶದಲ್ಲಿ ಮದುವೆಯಾಗುತ್ತಾರೆ. ಛಲದಿಂದ ಕುಟುಂಬಸ್ಥರೇ ನಾಚುವಂತೆ ಬದುಕುವುದನ್ನು ಕೇಳಿದ್ದೇವೆ. ಆದರೆ ಏಳು ವರ್ಷಗಳಿಂದ ಪ್ರೀತಿಸುತಿದ್ದ ಗೆಳತಿಯ ಬದುಕಿಗೆ ಪಾಗಲ್ ಪ್ರೇಮಿ ವಿಲನ್ ಆದ ಘಟನೆ ಕೋಟೆನಾಡು ಚಿತ್ರದುರ್ಗದಲ್ಲಿ ನಡೆದಿದೆ.
ಹೊಳಲ್ಕೆರೆ ತಾಲೂಕಿನ ಕೆರಯಾಗಲಹಳ್ಳಿಯ ರಾಜೇಶ್ವರಿ ಆತ್ಮಹತ್ಯೆಗೆ ಶರಣಾದ ಯುವತಿ. ಚಿತ್ರದುರ್ಗದ ರಾಜೇಂದ್ರನಗರದ ತಿಪ್ಪೇಸ್ವಾಮಿ ಪ್ರೀತಿಯ ನಾಟಕವಾಡಿದ ಪ್ರೇಮಿ. ಏಳು ವರ್ಷದ ಹಿಂದೆ ಚಿತ್ರದುರ್ಗದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ರಾಜೇಶ್ವರಿ ಹಾಸ್ಟೆಲ್‍ನಲ್ಲಿ ಇದ್ದಳು. ರಜೆ ದಿನಗಳಲ್ಲಿ ಬೇಜಾರು ಅಂತ ಹಾಸ್ಟಲ್‍ನಲ್ಲಿ ಇರಲಾಗದೆ ರಾಜೇಂದ್ರನಗರದ ಸ್ಟೇಡಿಯಂ ರಸ್ತೆಯಲ್ಲಿದ್ದ ತನ್ನ ಅಜ್ಜಿ ಶಾಂತಮ್ಮನವರ ಮನೆಗೆ ಹೋಗುತ್ತಿದ್ದಳು.
Advertisement
Advertisement
ರಾಜೇಶ್ವರಿಗೆ ಶಾಂತಜ್ಜಿ ಮನೆಯ ಪಕ್ಕದ ಮನೆಯ ನಿವಾಸಿ ರಾಜಶೇಖರ್ ಹಾಗೂ ಲಕ್ಮಕ್ಕ ದಂಪತಿ ಪುತ್ರ ತಿಪ್ಪೇಸ್ವಾಮಿ ಪರಿಚಯವಾಗಿದ್ದ. ಬಳಿಕ ಇಬ್ಬರ ಮಧ್ಯೆ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಪರಸ್ಪರ ಇಬ್ಬರು ಅರ್ಥೈಸಿಕೊಂಡಿದ್ದರು. ಈ ವಿಚಾರವನ್ನು ರಾಜೇಶ್ವರಿ ತನ್ನ ತಂದೆ-ತಾಯಿಗೆ ತಿಳಿಸಿ ಮದುವೆಯಾಗುವ ಮುಂದಾಗಿದ್ದಳು.
Advertisement
ರಾಜೇಶ್ವರಿ ಹಾಗೂ ತಿಪ್ಪೇಸ್ವಾಮಿ ಪ್ರೀತಿಯನ್ನು ಎರಡೂ ಕುಟುಂಬಸ್ಥರು ಒಪ್ಪಿ ಮದುವೆಗೆ ಸಿದ್ಧತೆ ಕೂಡ ನಡೆಸಿದ್ದರು. ವರದಕ್ಷಿಣೆ, ವರೋಪಚಾರ ಕೂಡ ಚರ್ಚಿಸಿ ನಿರ್ಧಾರವಾಗಿತ್ತು. ಆದರೆ ಮದುವೆಯಾಗಲು ಇಷ್ಟವಿಲ್ಲದ ತಿಪ್ಪೇಸ್ವಾಮಿ ಮದುವೆ ನಿಲ್ಲಿಸಲು ಯತ್ನಿಸಿದ್ದ. ಮೊದಲು ಒಂದು ಲಕ್ಷ ರೂ. ಕೇಳಿದ್ದ ತಿಪ್ಪೇಸ್ವಾಮಿ, ಕೆಲ ದಿನಗಳ ಬಳಿಕ 5 ಲಕ್ಷ ರೂ. ವರದಕ್ಷಿಣೆ ಕೊಡುವಂತೆ ಕೇಳಿದ್ದ. ಅದಕ್ಕೆ ಒಪ್ಪಿದ್ದ ರಾಜೇಶ್ವರಿ ಕುಟುಂಬಸ್ಥರು ಹುಡುಗ ಚೆನ್ನಾಗಿದ್ದಾನೆ. ವಿದ್ಯಾವಂತ ಹಾಗೆಯೇ ಮುಂದೆ ಸರ್ಕಾರಿ ಕೆಲಸ ಸಿಗುವ ಭರವಸೆ ಇದೆ ಅಂತ ಎಲ್ಲಾ ಬೇಡಿಕೆಗಳಿಗೆ ಒಪ್ಪಿದ್ದರು. ಆದರೂ ಸಮಾಧಾನಗೊಳ್ಳದ ಪಾಗಲ್ ಪ್ರೇಮಿ ಹತ್ತು ಲಕ್ಷ ರೂ. ವರದಕ್ಷಿಣೆ ನೀಡಬೇಕು ಎಂದು ಕೇಳಿದ್ದನು. ಇದರಿಂದಾಗಿ ಏಳು ವರ್ಷದ ಪ್ರೀತಿಯ ಬದುಕಿನಲ್ಲಿ ತಿಪ್ಪೇಸ್ವಾಮಿ ನಾಟಕೀಯ ಮಾತುಗಳಿಗೆ ಸರ್ವಸ್ವವನ್ನು ಒಪ್ಪಿಸಿದ್ದ ರಾಜೇಶ್ವರಿ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
Advertisement
ಪ್ರಕರಣಕ್ಕೆ ಟ್ವಿಸ್ಟ್:
ತಿಪ್ಪೇಸ್ವಾಮಿ ಅಮಾಯಕ ಅಂತ ಎಲ್ಲರೂ ಭಾವಿಸಿದ್ದೂ, ಮದುವೆ ನಿಶ್ಚಯವಾದ ಬಳಿಕ ಆತನಿಗೆ ಹೀಗೆ ಆಗಬಾರದಿತ್ತು. ಆ ಯುವಕನನ್ನು ನಂಬಿಸಿ ರಾಜೇಶ್ವರಿ ಕೈಕೊಟ್ಟಳು ಎಂದು ಎಲ್ಲರೂ ಭಾವಿಸಿದ್ದರು. ಆದರೆ ತಿಪ್ಪೇಸ್ವಾಮಿಯ ಅಸಲಿ ಸತ್ಯ ಈಗ ಬಯಲಾಗಿದೆ. ತಿಪ್ಪೇಸ್ವಾಮಿ ತಂದೆತಾಯಿ ಹೊತ್ತಿನ ಊಟಕ್ಕೂ ಪರದಾಡುತ್ತಾ, ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪದವಿ ಓದಿದ್ದ ತಿಪ್ಪೇಸ್ವಾಮಿ ಆಧಾರ್ ಕಾರ್ಡ್ ಮಾಡಿಕೊಡುವ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ಅವನು ಸರ್ಕಾರಿ ಉದ್ಯೋಗಿ ಆಗುತ್ತಾನೆ ಅಂತ ನಂಬಿ ತಮ್ಮ ಮಗಳನ್ನು ಧಾರೆ ಎರೆಯಲು ರಾಜೇಶ್ವರಿ ಕುಟುಂಬಸ್ಥರು ಸಿದ್ಧವಾಗಿದ್ದರು. ಮಗಳು ಆತ್ಮಹತ್ಯೆಗೆ ಶರಣಾಗಿದ್ದರಿಂದ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ರಾಜೇಶ್ವರಿ ಮೊಬೈಲ್‍ನಲ್ಲಿ ಸಿಕ್ಕ ಮಾಹಿತಿಯಿಂದ ತಿಪ್ಪೇಸ್ವಾಮಿಯ ಮುಖವಾಡ ಬಯಲಾಗಿದೆ.
ಆರೋಪಿ ತಿಪ್ಪೇಸ್ವಾಮಿ ಗೆಳತಿ, ಭಾವಿ ಪತ್ನಿ ರಾಜೇಶ್ವರಿಗೆ ಕರೆಮಾಡಿ ನಿತ್ಯವೂ ಕಿರುಕುಳ ನೀಡಿದ್ದ. 10 ಲಕ್ಷ ರೂ. ಹಾಗೂ ವಿಜೃಂಭಣೆಯಿಂದ ಮದುವೆ ಮಾಡಿಕೊಡಬೇಕು. ಇಲ್ಲವಾದರೆ ನಾ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಬೆದರಿಸಿದ್ದ. ಹೀಗಾಗಿ ಮನನೊಂದ ರಾಜೇಶ್ವರಿ ನೇಣಿಗೆ ಶರಣಾಗಿದ್ದಾಳೆ. ಇದಕ್ಕೆ ಸಂಬಂಧಪಟ್ಟ ಆಡಿಯೋ ಸಂಭಾಷಣೆಗಳು ಹಾಗೂ ಡೆತ್ ನೋಟ್ ಪೊಲೀಸರ ಕೈ ಸೇರಿದ್ದು, ಆರೋಪಿಗಳು ಕುಟುಂಬ ಸಮೇತ ತಲೆಮರೆಸಿಕೊಂಡಿದ್ದಾರೆ.
ಮುದ್ದಾದ ಮಗಳನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿರುವ ರಾಜೇಶ್ವರಿ ಕುಟುಂಬ ಚಿತ್ರದುರ್ಗ ಎಸ್‍ಪಿ ಅವರನ್ನು ಭೇಟಿ ಮಾಡಿ ತಕ್ಷಣ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ. ಹಾಗೆಯೇ ಆರೋಪಿಗಳು ಸಿಕ್ಕ ಬಳಿಕ ತನಿಖೆ ನಡೆಸಿ ಕಾನೂನಾತ್ಮಕ ಕ್ರಮಕೈಗೊಳ್ಳುವ ಭರವಸೆಯನ್ನು ಎಸ್‍ಪಿ ಡಾ.ಅರುಣ್ ನೀಡಿದ್ದಾರೆ.