– ‘ಕೈ’ ಟಿಕೆಟ್‌ಗೆ ಆಕಾಂಕ್ಷಿಗಳ ಹಿಂಡು
– ಬಿಜೆಪಿ ಪಾಳಯದಲ್ಲಿ ಕೇಳಿ ಬರ್ತಿದೆ ಸ್ವಾಮೀಜಿ ಹೆಸರು!
ಚಿತ್ರದುರ್ಗ: ಲೋಕಸಭೆ ಚುನಾವಣೆಯ ರಣಕಣ ರಂಗೇರಿದೆ. ಚಿತ್ರದುರ್ಗ ಲೋಕಸಭಾ ಕಣದಲ್ಲಿ ತಾವೇ ಅಭ್ಯರ್ಥಿಯಾಗಬೇಕು ಅಂತಾ ಕೆಲ ನಾಯಕರು ಈಗಾಗಲೇ ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಅಧಿಕಾರದ ಗದ್ದುಗೆಯಲ್ಲಿರುವ ಕಾಂಗ್ರೆಸ್ ಲೋಕಸಭೆಗೆ ಸಿದ್ಧತೆ ಮಾಡಿಕೊಳ್ತಿದೆ. ಹಾಗೆಯೇ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿರೋದು ಎಲ್ಲರಲ್ಲೂ ಬಾರಿ ಕುತೂಹಲ ಮೂಡಿಸಿದೆ.
Advertisement
2019ರ ಲೋಕಸಭಾ ಚುನಾವಣೆಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿತ್ತು. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆನೇಕಲ್ ನಾರಾಯಣಸ್ವಾಮಿ ಅಭೂತಪೂರ್ವ ಗೆಲುವು ಸಾಧಿಸಿ ಪಾರ್ಲಿಮೆಂಟ್ ಪ್ರವೇಶಿಸಿದ್ದು, ಸಾಮಾಜಿಕ ನ್ಯಾಯ ಮತ್ತು ಸಬಲಿಕರಣ ಖಾತೆ ಸಚಿವರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಂಸದ ಬಿಎನ್ ಚಂದ್ರಪ್ಪ, ನಾರಾಯಣಸ್ವಾಮಿ ವಿರುದ್ಧ 1,58,684 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು. ಹೀಗಾಗಿ ಈ ಬಾರಿ ಮತ್ತೆ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಪರಿಚಯ, ಚುನಾವಣೆ ಹಾಗೂ ಮಧ್ಯಕರ್ನಾಟಕದ ಪ್ರಮುಖ ಕ್ಷೇತ್ರ ಎನಿಸಿರುವ ಚಿತ್ರದುರ್ಗದ ರಾಜಕೀಯ ಇತಿಹಾಸದ ಬಗ್ಗೆ ತಿಳಿದುಕೊಳ್ಳೋಣ. ಇದನ್ನೂ ಓದಿ: Lok Sabha 2024: ‘ಕೈ’, ಕಮಲ ಪಾಳಯದಲ್ಲಿ ಟಿಕೆಟ್ ಫೈಟ್ – ಈ ಸಲ ಯಾರ ಪಾಲಾಗುತ್ತೆ ಚಿಕ್ಕಬಳ್ಳಾಪುರ?
Advertisement
Advertisement
ಕ್ಷೇತ್ರ ಪರಿಚಯ
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಚಿತ್ರದುರ್ಗದ ಆರು ವಿಧಾನಸಭಾ ಕ್ಷೇತ್ರಗಳಾದ ಹಿರಿಯೂರು, ಹೊಳಲ್ಕೆರೆ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮೂರು ಸೇರಿದಂತೆ ತುಮಕೂರು ಜಿಲ್ಲೆಯ ಎರಡು ಕ್ಷೇತ್ರಗಳಾದ ಶಿರಾ ಮತ್ತು ಪಾವಗಡ ಐತಿಹಾಸಿಕ ಹಿನ್ನಲೆಯ ಪ್ರವಾಸಿತಾಣ ಎನಿಸಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಈ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಕಡೆ ಕಾಂಗ್ರೆಸ್ ಶಾಸಕರಿದ್ದು, ಕೇವಲ ಹೊಳಲ್ಕೆರೆ ಕ್ಷೇತ್ರ ಮಾತ್ರ ಬಿಜೆಪಿಯ ಹಿಡಿತವಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ಗೆ ಆನೆಬಲ ಬಂದಂತಾಗಿದೆ. ಗೆಲ್ಲುವ ಭರವಸೆಯಲ್ಲಿ ಕೈ ನಾಯಕರಿದ್ದಾರೆ.
Advertisement
ಒಟ್ಟು ಮತದಾರರು ಎಷ್ಟು?
ಚಿತ್ರದುರ್ಗ ಲೋಕಸಭಾ ಕ್ಷೇತ್ರ ಮೈಸೂರು ರಾಜ್ಯದ ಕಾಲದಿಂದಲೂ ಅಸ್ತಿತ್ವದಲ್ಲಿದೆ. 1951 ರಲ್ಲಿ ಈ ಕ್ಷೇತ್ರ ರಚನೆಯಾಯಿತು. ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1810389 ಇದೆ. ಪುರುಷರು – 9,20,264, ಮಹಿಳೆಯರು – 9,24,753 ಮತದಾರರಿದ್ದಾರೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಕೃಪಕಟಾಕ್ಷ ಹಾಗೂ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದ ಪರಿಣಾಮ ಟಿಕೆಟ್ ಘೋಷಿಸಿದ ಕಡಿಮೆ ಅವಧಿಯಲ್ಲೇ ಎ.ನಾರಾಯಣಸ್ವಾಮಿ ಗೆಲುವಿನ ನಗೆ ಬೀರಿದ್ದರು. ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಭರವಸೆ ಹಾಗೂ ಎಸ್ಸಿ ಎಡಪಂಗಡದ ಅಭ್ಯರ್ಥಿ ನಾರಾಯಣಸ್ವಾಮಿ ಎಂಬುದು ಬಿಜೆಪಿಗೆ ವರವಾಗಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಿಂದಲೂ ಸ್ಥಳೀಯ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸಬೇಕು ಎಂಬ ದಾಳವನ್ನು ಚಿತ್ರದುರ್ಗದ ಸ್ಥಳೀಯ ಆಕಾಂಕ್ಷಿಗಳು ಉರುಳಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಈ ಧ್ವನಿ ದಿನದಿಂದ ದಿನಕ್ಕೆ ಮತ್ತಷ್ಟು ಜೋರಾಗುತ್ತಿದೆ. ಇದನ್ನೂ ಓದಿ: Lok Sabha 2024: ಬಿಜೆಪಿ ಭದ್ರಕೋಟೆ ಒಡೆಯುತ್ತಾ ‘ಕೈ’?
ಕ್ಷೇತ್ರದಲ್ಲಿ ಕಾಣದ ಅಭಿವೃದ್ಧಿ?
ಕಳೆದ ಹತ್ತು ವರ್ಷಗಳಿಂದ ಕ್ಷೇತ್ರವನ್ನು ಹೊರಗಿನವರು ಪ್ರತಿನಿಧಿಸುತ್ತಿದ್ದಾರೆ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ಅಲ್ಲದೇ ಜನರ ನಿರೀಕ್ಷೆಯಂತೆ ಬಹುದಿನಗಳ. ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಮತ್ತು ನೇರ ರೈಲ್ವೆ ಮಾರ್ಗ ಸೇರಿದಂತೆ ಯಾವ್ದೇ ಅಭಿವೃದ್ಧಿ ಕಾರ್ಯಗಳು ಈ ಭಾಗದಲ್ಲಿ ಆಗಿಲ್ಲವೆಂಬ ಅಸಮಧಾನದ ಹೊಗೆಯಾಡ್ತಿದೆ. ಇದರ ಬೆನ್ನಲ್ಲೇ ಅಲರ್ಟ್ ಆಗಿರುವ ಕೇಂದ್ರ ಸಚಿವ ನಾರಾಯಣಸ್ವಾಮಿ ಭ್ರಷ್ಟಾಚಾರದಿಂದ ಬೇಸತ್ತು ರಾಜಕಾರಣದಿಂದ ದೂರ ಉಳಿಯುವ ಬಗ್ಗೆ ಆಲೋಚಿಸಿದ್ದಾರೆ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಮುಂದುವರಿಯುವ ರಾಜಕಾರಣಿ ನಾನಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಹೀಗಾಗಿ ಬಿಜೆಪಿ ಸೇರಿದಂತೆ ಕ್ಷೇತ್ರದಾದ್ಯಂತ ಬಾರಿ ಸಂಚಲನ ಸೃಷ್ಟಿಸಿದೆ. ಮೂಲತಃ ಆನೇಕಲ್‌ನ ಸಚಿವರು ಚುನಾವಣಾ ರಾಜಕಾರಣದಿಂದ ದೂರ ಉಳಿಯಬಹುದು ಎಂಬ ಲೆಕ್ಕಾಚಾರ ಶುರುವಾದ ಹಿನ್ನಲೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಬಿಜೆಪಿ ಟಿಕೆಟ್‌ಗೆ ತೆರೆಮರೆಯ ಕಸರತ್ತು
2024ರ ‘ಲೋಕಸಭಾ ಚುನಾವಣೆಗೆ ಸಚಿವ ನಾರಾಯಣಸ್ವಾಮಿ ಮತ್ತೆ ಸ್ಪರ್ಧೆ ಮಾಡುತ್ತಾರೆಯೇ?’ ಎಂಬ ಪ್ರಶ್ನೆಗೆ ಪಕ್ಷದ ವರಿಷ್ಠರೇ ಉತ್ತರ ನೀಡಬೇಕಿದ್ದು, 2009ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದ ಜನಾರ್ದನಸ್ವಾಮಿ ಇದೀಗ ಮತ್ತೆ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಇವರು ಸ್ಥಳೀಯರಾಗಿದ್ದು 2014ರಲ್ಲಿ ಪರಾಭವಗೊಂಡಿದ್ದರು. 2019ರಲ್ಲಿ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದರು. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಾಗೂ ಬಾಬಾ ಅಣು ಸಂಶೋಧನಾ ಕೇಂದ್ರಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ತಂದು ವಿಜ್ಞಾನ ನಗರಿ ನಿರ್ಮಿಸಿದ ಹಿರಿಮೆ ಹಾಗು ಯಡಿಯೂರಪ್ಪ ಅವರನ್ನು ತಮ್ಮ ಬೆನ್ನಿಂದೆ ಇಟ್ಟುಕೊಂಡಿರುವ ಇವರು ಟಿಕೆಟ್ ನಿರೀಕ್ಷಿಸುತ್ತಿದ್ದಾರೆ.
ಇವರೊಂದಿಗೆ ನಿವೃತ್ತ ಐಎಎಸ್ ಅಧಿಕಾರಿಕಾರಿಗಳಾದ ಲಕ್ಷ್ಮಿನಾರಾಯಣ, ಎಂ.ಕೆ. ಶ್ರೀರಂಗಯ್ಯ, ಮಾಯಕೊಂಡದ ಮಾಜಿ ಶಾಸಕ ಪ್ರೊ.ಲಿಂಗಪ್ಪ, ಹರಪನಹಳ್ಳಿಯ ವೈದ್ಯ ಡಾ.ರಮೇಶ್, ಸೂರನಹಳ್ಳಿ ವಿಜಯಕುಮಾರ್ ಹಾಃ ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರ ಪುತ್ರ ಎಂ.ಸಿ. ರಘುಚಂದನ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಹಿನ್ನೆಲೆಯ ಮೂಡಿಗೆರೆಯ ನರೇಂದ್ರ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಅಚ್ಚರಿಯ ಅಭ್ಯರ್ಥಿ ಬರುವ ಕೌತುಕ ಕೂಡ ಬಿಜೆಪಿ ವಲಯದಲ್ಲಿದೆ. ಇನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಹೊರಗಿನವರಿಗೆ ಹೆಚ್ಚು ಮಣೆ ಹಾಕಲಾಗಿದೆ ಎಂಬ ಅಸಮಾಧಾನ ಸ್ಥಳೀಯ ನಾಯಕರಲ್ಲಿದೆ. ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ವಾದವನ್ನು ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಮುಂದಿಡಲಾಗುತ್ತಿದೆ. ಎರಡು ರಾಜಕೀಯ ಪಕ್ಷಗಳಿಗೆ ಇದು ಬಿಸಿ ತುಪ್ಪವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
‘ಕೈ’ ಟಿಕೆಟ್‌ಗೆ ಭಾರಿ ಪೈಪೋಟಿ
ಕಾಂಗ್ರೆಸ್ ಟಿಕೆಟ್ ಕೋರಿ 24 ಜನ ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ 2014ರಲ್ಲಿ ಕ್ಷೇತ್ರ ಪ್ರತಿನಿಧಿಸಿದ್ದ ಬಿ.ಎನ್. ಚಂದ್ರಪ್ಪ, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರ್ಲಗುಂಟೆ ಎಂ.ರಾಮಪ್ಪ, 2009 ರ ಪರಾಜಿತ ಕೈ ಅಭ್ಯರ್ಥಿ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಪುತ್ರ ವಿನಯ್ ತಿಮ್ಮಾಪುರ ಸೇರಿದಂತೆ ಮಾಜಿ ಸಚಿವ ಪಾವಗಡದ ವೆಂಕಟರಮಣಪ್ಪ ಅವರ ಪುತ್ರ ಕುಮಾರಸ್ವಾಮಿ ಹೆಸರು ಪ್ರಮುಖವಾಗಿದೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬಿ.ಎನ್.ಚಂದ್ರಪ್ಪ ಈಗ ಮತ್ತೆ ಟಿಕೆಟ್ ನಿರೀಕ್ಷೆಯಲ್ಲಿ ಕ್ಷೇತ್ರ ಸುತ್ತಾಡುತ್ತಿದ್ದಾರೆ. ಟಿಕೆಟ್ ಕೋರಿ ಕೆಪಿಸಿಸಿಗೆ ಅರ್ಜಿ ಸಲ್ಲಿಸದಿದ್ದರೂ ಮಾಜಿ ಸಚಿವ ಎಚ್.ಆಂಜನೇಯ ಹೆಸರು ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: Lok Sabha 2024: ಬೀದರ್‌ನಲ್ಲಿ ಬಿಜೆಪಿಗೆ ಮೈತ್ರಿ ಬಲ?- ಕಾಂಗ್ರೆಸ್‌ಗೆ ವರವಾಗುತ್ತಾ ‘ಕಮಲ’ ಟಿಕೆಟ್ ಒಳಜಗಳ?
ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಯಾವ್ದೇ ಪರಿಣಾಮವಿಲ್ಲ?
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದೆವು. ಆದರೆ ಈ ಬಾರಿ ಅದು ಉಲ್ಟಾ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿವೆ. ಆದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಮೈತ್ರಿಯಿಂದ ಯಾವ್ದೇ ಪರಿಣಾಮ ಆಗಲ್ಲ. ಈ ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಅಷ್ಟಕ್ಕಷ್ಟೆಯಾಗಿದ್ದು, ಕಾಂಗ್ರೆಸ್‌ನಿಂದ ಮತ್ತೆ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿಎನ್ ಚಂದ್ರಪ್ಪ ಕಣ್ಣಕ್ಕಿಳಿಯಬಹುದು ಎನ್ನಲಾಗುತ್ತಿದೆ. ಹೀಗಾಗಿ ಬಿಜೆಪಿಯವರಿಗಿಂತ ಹೆಚ್ಚಾಗಿ ಕಾಂಗ್ರೆಸ್‌ನಲ್ಲಿನ ಸ್ವಪಕ್ಷದ ಸ್ಥಳೀಯ ಮುಖಂಡರೇ ಚಂದ್ರಪ್ಪ ಅವರನ್ನು ಸೋಲಿಸಲು ತಂತ್ರ ಹೆಣೆಯುತ್ತಿದ್ದಾರೆ. ಬಿಜೆಪಿ ಸಹ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಸಂಪರ್ಕಿಸದೇ ತಟಸ್ಥವಾಗಿದ್ದು, ಬಹುತೇಕ ಪ್ರಮುಖ ಜೆಡಿಎಸ್ ನಾಯಕರು ಕಾಂಗ್ರೆಸ್‌ನತ್ತ ವಾಲಿರುವ ಪರಿಣಾಮ ಕಾಂಗ್ರೆಸ್‌ಗೆ ಅಲ್ಪ ಪ್ರಮಾಣದ ಲಾಭವಾಗಲಿದೆ.
ಮಾಜಿ ಸಚಿವ ಆಂಜನೇಯ ಅಸ್ತಿತ್ವಕ್ಕಾಗಿ ಹೋರಾಟ
ಸಿಎಂ ಸಿದ್ದರಾಮಯ್ಯ ಅವರ ಬಲಗೈ ಬಂಟ ಆಂಜನೇಯ 2023 ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ಚುನಾವಣೆ ಚಾಲೆಂಜ್ ಎನಿಸಿದೆ. ಹೀಗಾಗಿ ಅವರೇ ಮೂಡಿಗೆರೆಯಿಂದ ಕಳೆದ ಬಾರಿ ಕರೆತಂದು ಒಮ್ಮೆ ಸಂಸದರನ್ನಾಗಿಸಿದ ಬಿಎನ್ ಚಂದ್ರಪ್ಪ ಅವರ ಬೆನ್ನಿಗೆ ನಿಂತಿರುವ ಆಂಜನೇಯ ಶತಾಯಗತಾಯ ಗೆಲ್ಲಿಸಲು ರಣತಂತ್ರ ರೂಪಿಸಿದ್ದಾರೆ. ಆದ್ರೆ ಸ್ಥಳೀಯ ಅಭ್ಯರ್ಥಿಯ ಕೂಗು ಕ್ಷೇತ್ರದಲ್ಲಿ ಈ ಬಾರಿ ಜೋರಾಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಮಾಜಿ ಸಚಿವ ಆಂಜನೇಯಗೆ ವರಿಷ್ಠರು ಮಣೆ ಹಾಕುವ ಸಾಧ್ಯತೆ ಸಹ ಹೆಚ್ಚಾಗಿದೆ. ಬಿಎನ್ ಚಂದ್ರಪ್ಪರನ್ನು ಕೋಲಾರದಿಂದ ಕಣಕ್ಕಿಳಿಸಲು ಸಹ ಚಿಂತನೆ ನಡೆದಿದೆ ಎನ್ನಲಾಗ್ತಿದೆ. ಒಂದು ವೇಳೆ ಆಂಜನೇಯ ಅಭ್ಯರ್ಥಿಯನ್ನಾಗಿಸಿ, ಮನೆಯೊಂದು ಮೂರು ಬಾಗಲಾಗಿರುವ ಕಾಂಗ್ರೆಸ್‌ನಲ್ಲಿ ಒಮ್ಮತ ಮೂಡಿಸುವ ತಂತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗುವ ಸಾಧ್ಯತೆ ಹೆಚ್ಚಾಗಿದೆ.
ಒಟ್ಟಾರೆ ಮದ್ಯಕರ್ನಾಟಕದ ಪ್ರಮುಖ ಜಿಲ್ಲೆಯಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಸಹ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಿವಿಧ ತಂತ್ರ ರೂಪಿಸುತ್ತಿವೆ. ಆದರೆ ಈವರೆಗೆ ಕ್ಷೇತ್ರದಲ್ಲಾಗದ ಅಭಿವೃದ್ಧಿ ಹಾಗೂ ಕಡೆಗಣನೆಯಿಂದಾಗಿ ಮತದಾರರು ಪಕ್ಷಕ್ಕಿಂತ ಉತ್ತಮ ವ್ಯಕ್ತಿ ಹಾಗೂ ಅಭಿವೃದ್ಧಿಗೆ ಸ್ಪಂದಿಸುವ ವ್ಯಕ್ತಿತ್ವದ ಅಭ್ಯರ್ಥಿ ನಮ್ಮ ಸಂಸದರಾಗಬೇಕೆಂಬ ಆಶಯ ಹೊಂದಿದ್ದಾರೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ಕ್ಷೇತ್ರದ ಮತದಾರರಲ್ಲಿದೆ. ಇದನ್ನೂ ಓದಿ: Lok Sabha 2024: ಉಡುಪಿ-ಚಿಕ್ಕಮಗಳೂರು ಟಿಕೆಟ್ ಗಿಟ್ಟಿಸಿ ಹ್ಯಾಟ್ರಿಕ್ ನಗೆ ಬೀರ್ತಾರಾ ಕರಂದ್ಲಾಜೆ?
ಬಿಜೆಪಿ ಆಕಾಂಕ್ಷಿಗಳಲ್ಲಿ ಮಠಾಧೀಶ!
ಚುನಾವಣೆ ಹತ್ತಿರ ಬಂದಾಗ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಸೋದು ಸಹಜ. ಆದರೆ ಪ್ರಭಾವಿ ಮಠಾಧೀಶರೊಬ್ಬರು ಬಿಜೆಪಿಯಿಂದ ಸ್ಪರ್ಧಿಸುತ್ತಾರೆಂಬ ಬೆನ್ನಲ್ಲೇ, ದಲಿತರ ಮಠವನ್ನು RSS ಕೇಂದ್ರವಾಗಲು ಬಿಡಲ್ಲವೆಂದು DSS ಮುಖಂಡರು ಹೋರಾಟಕ್ಕಿಳಿದಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕಣದಿಂದ ಹಿಂದೆ ಸರಿಯುವುದಾಗಿ ಇಂಗಿತ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಚಿತ್ರದುರ್ಗದ ಶಿವಶರಣ ಮಾದಾರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ ಹೆಸರು ಮುನ್ನೆಲೆಗೆ ಬಂದಿದೆ. ಸಂಘಪರಿವಾರದೊಂದಿಗೆ ಅಪಾರ ನಂಟನ್ನು ಹೊಂದಿರುವ ಮಾದಾರ ಚನ್ನಯ್ಯ ಶ್ರೀಗಳನ್ನು ಕರ್ನಾಟಕದ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಚಿತ್ರದುರ್ಗ ಲೋಕಸಭಾ ಅಖಾಡಕ್ಕೆ ಇಳಿಸುವ ಊಹಾಪೋಹ ಜೋರಾಗಿದೆ. ಆದರೆ ಶ್ರೀಗಳು ಈವರೆಗೆ ತಾವು ಚುನಾವಣೆಗೆ ಸ್ಪರ್ಧಿಸುವುದಾಗಿ ಎಲ್ಲೂ ಹೇಳಿಲ್ಲ. ಅಲ್ಲದೇ ಅವರ ಹೆಸರು ಕೂಡ ಈವರೆಗೆ ಬಿಜೆಪಿ ಜಿಲ್ಲಾ ಸಮಿತಿಯಲ್ಲಾಗಲಿ, ರಾಜ್ಯದ ಕೋರ್ ಕಮಿಟಿಯಲ್ಲಾಗಲಿ ಚರ್ಚೆಯಾಗಿಲ್ಲ. ಆದರೂ ಶ್ರೀಗಳ ವಿರುದ್ಧ ಆಕ್ರೋಶಗೊಂಡಿರುವ ಚಿತ್ರದುರ್ಗದ ದಲಿತ ಮುಖಂಡರು, ಬಿಜೆಪಿ ಟಿಕೆಟ್ ಘೋಷಣೆಗೂ ಮುನ್ನವೇ ಮಾದಾರ ಚನ್ನಯ್ಯ ಶ್ರೀಗಳ ವಿರುದ್ಧ ಮಾದಿಗ ಸಾಂಸ್ಕೃತಿಕ ಸಂಘದಿಂದ ಹೋರಾಟ ಆರಂಭಿಸಿದ್ದಾರೆ.
ಯಾವ ಅವಧಿಯಲ್ಲಿ ಯಾವ ಪಕ್ಷ ಗೆದ್ದಿತ್ತು? ಗೆದ್ದ ಅಭ್ಯರ್ಥಿ ಪಡೆದ ಮತಗಳು
1999: ಶಶಿ ಕುಮಾರ್- ಜನತಾ ದಳ (ಸಂಯುಕ್ತ)- ಪಡೆದ ಮತಗಳು 3,70,793
2004: ಎನ್. ವೈ.ಹನುಮಂತಪ್ಪ- ಕಾಂಗ್ರೆಸ್- ಪಡೆದ ಮತಗಳು 3,22,609
2009: ಜನಾರ್ಧನ ಸ್ವಾಮಿ- ಬಿಜೆಪಿ – ಪಡೆದ ಮತಗಳು 3,70,920
2014: ಬಿ.ಎನ್.ಚಂದ್ರಪ್ಪ- ಕಾಂಗ್ರೆಸ್ – ಪಡೆದ ಮತಗಳು- 4,67,511
2019: ಆನೇಕಲ್ ನಾರಾಯಣಸ್ವಾಮಿ- ಬಿಜೆಪಿ- ಪಡೆದ ಮತಗಳು- 6,26,195
ಜಾತಿವಾರು ವಿವರ
ಲಿಂಗಾಯತ= 2,38,705
ಕುರುಬ= 2,10,458
ಎಸ್‌ಸಿ = 4,28,205
ಎಸ್‌ಟಿ = 3,10,675
ಮುಸ್ಲಿಂ= 2,24,330
ಗೊಲ್ಲ= 171281
ಇತರೆ= 2,22,099
ಬಿಜೆಪಿ ಟಿಕೆಟ್ ಆಕಾಂಕ್ಷಿಗಳು
* ಎ.ನಾರಾಯಣಸ್ವಾಮಿ, ಕೇಂದ್ರ ಸಚಿವ
* ಭಾರ್ಗವಿ ದ್ರಾವಿಡ, ಎಸ್‌ಸಿ ಮೋರ್ಚಾ ಮಹಿಳಾ ಜಿಲ್ಲಾ ಅಧ್ಯಕ್ಷೆ
* ರಘು ಚಂದನ್, ಶಾಸಕ ಎಂ.ಚಂದ್ರಪ್ಪ ಪುತ್ರ
* ಜನಾರ್ಧನಸ್ವಾಮಿ, ಮಾಜಿ ಸಂಸದ
* ಶ್ರೀನಿವಾಸ್, ನಗರಸಭಾ ಸದಸ್ಯ
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
* ಬಿ.ಎನ್.ಚಂದ್ರಪ್ಪ, ಮಾಜಿ ಸಂಸದ
* ಆಂಜನೇಯ, ಮಾಜಿ ಸಚಿವ
* ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ
* ವಿನಯ್ ಕುಮಾರ್, ಸಚಿವ ತಿಮ್ಮಾಪುರ್ ಪುತ್ರ