ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗವೊಂದು ಶಾಶ್ವತ ಬರದನಾಡು. ಅಲ್ಲಿ ಸತತ ಆರು ವರ್ಷಗಳಿಂದ ಮಳೆ ಇಲ್ಲದೆ ಐತಿಹಾಸಿಕ ಹಿನ್ನೆಲೆಯ ಕಲ್ಯಾಣಿಗಳೆಲ್ಲ ಬತ್ತಿ ಹೋಗಿದ್ದವು. ಹೀಗಾಗಿ ಜನರಿಗೆ ಹನಿ ನೀರಿಗೂ ಹಾಹಾಕಾರ ಶುರುವಾಗಿತ್ತು. ಆದರೆ ಕಳೆದ ಆರು ತಿಂಗಳಿಂದೀಚೆಗೆ ಸುರಿದ ಮಹಾಮಳೆಗೆ ಚಿತ್ರದುರ್ಗದಲ್ಲಿನ ನೀರಿನ ಮೂಲಗಳೆಲ್ಲಾ ಭರ್ತಿಯಾಗಿವೆ. ಆದರೆ ಕಲ್ಯಾಣಿಗಳಲ್ಲಿ ಬಹಳ ದಿನಗಳಿಂದ ಒಂದೆಡೆಯೇ ನಿಂತಿರುವ ನೀರು ವಿಷ ಜಲವಾಗಿ ಮಾರ್ಪಟ್ಟು, ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯನ್ನು ಹುಟ್ಟಿಸಿದೆ.
ಕಳೆದ ಆರು ವರ್ಷಗಳಿಂದ ಮಳೆ ಇಲ್ಲದಿದ್ದರಿಂದ ಹನಿ ನೀರಿಲ್ಲದಂತೆ ಬತ್ತಿ ಬರಿದಾಗಿದ್ದ ಐತಿಹಾಸಿಕ ಹಿನ್ನೆಲೆಯ ಕಲ್ಯಾಣಿಗಳೆಲ್ಲಾ ಇತ್ತೀಚೆಗೆ ಸುರಿದ ಮಹಾಮಳೆಯಿಂದ ಭರ್ತಿಯಾಗಿ ಮೈದುಂಬಿವೆ. ಹೀಗಾಗಿ ಬತ್ತಿಹೋದ ಕೊಳವೆ ಬಾವಿಗಳ ಅಂತರ್ಜಲವನ್ನು ಈ ಕಲ್ಯಾಣಿಗಳು ಹೆಚ್ಚಿಸುತ್ತವೆ ಎಂಬ ಖುಷಿ ಜನರಲ್ಲಿತ್ತು. ಆದರೆ ನಗರಸಭೆ ಅಧಿಕಾರಿಗಳು ಕಲ್ಯಾಣಿಗಳನ್ನು ಸರಿಯಾದ ಸಮಯದಲ್ಲಿ ಸ್ವಚ್ಛಗೊಳಿಸಿ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ತೊರಿರೋ ಪರಿಣಾಮ, ಒಂದೇ ಕಡೆ ಹಲವು ತಿಂಗಳುಗಳಿಂದ ಬಳಕೆಯಾಗದೆ ಕಲ್ಯಾಣಿಗಳಲ್ಲಿ ನಿಂತಿರುವ ನೀರು ಸಂಪೂರ್ಣ ಕಲುಷಿತವಾಗಿದೆ.
Advertisement
Advertisement
ನೀರಿನ ಬಣ್ಣ ಬದಲಾಗಿ, ಹಚ್ಚ ಹಸಿರಿನ ರೀತಿಯಲ್ಲಿ ಪಾಚಿ ಕಟ್ಟಿದೆ. ಅಲ್ಲದೇ ಕಲ್ಯಾಣಿಗಳಲ್ಲಿ ಕ್ರಿಮಿಕೀಟಗಳು ಸಂಗ್ರಹವಾಗಿದ್ದೂ, ಘನತ್ಯಾಜ್ಯ ಹಾಗೂ ಕಸ ಕಡ್ಡಿಗಳೆಲ್ಲ ತುಂಬಿ ದುರ್ನಾತ ಬೀರುತ್ತಾ ವಿಷಜಲವಾಗಿ ಮಾರ್ಪಟ್ಟಿದೆ. ಈ ಕಲುಷಿತ ವಿಷಜಲವು ಅಂತರ್ಜಲದ ಮೂಲಕ ನಾಗರೀಕರ ಮನೆಗಳ ಕೊಳವೆ ಬಾವಿಗೆ ಸೇರಿ, ವಿವಿಧ ಸಾಂಕ್ರಾಮಿಕ ರೋಗಗಳನ್ನು ಹುಟ್ಟುಹಾಕುವ ಭೀತಿ ದುರ್ಗದ ಜನರಲ್ಲಿ ಕಾಡುತ್ತಿದೆ. ಹೀಗಾಗಿ ಅಧಿಕಾರಿಗಳ ನಿರ್ಲಕ್ಷ್ಯ ಗಮನಿಸಿದ ಜಲತಜ್ಞರು ಕಿಡಿಕಾರುತ್ತಿದ್ದಾರೆ.
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತ ಹನುಮಂತರಾಜು, ನಾವು ಪ್ರತೀ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರದಂದು ಕಲ್ಯಾಣಿಗಳ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದೆವು. ಆದರೆ ಇತ್ತೀಚೆಗೆ ಕೆಲಸದ ಒತ್ತಡದಿಂದ ಕಲ್ಯಾಣಿಗಳ ಸ್ವಚ್ಛತೆಯತ್ತ ಗಮನಹರಿಸಿಲ್ಲ ಎಂದು ನೆಪ ಹೇಳ್ತಾರೆ. ಅಲ್ಲದೆ ಅವರ ತಪ್ಪನ್ನು ಮುಚ್ಚಿಕೊಳ್ಳಲು, ನಾಗರೀಕರು ನಿರುಪಯುಕ್ತ ದೇವರ ಪೂಜೆ ಸಾಮಾನುಗಳನ್ನು ಎಸೆದು, ಕಲ್ಯಾಣಿಗಳನ್ನು ಮಲೀನಗೊಳಿಸುತ್ತಾರೆ ಎಂದು ಜನರ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ನಗರದಲ್ಲಿರೋ ಸುಮಾರು ಹತ್ತು ಕಲ್ಯಾಣಿಗಳು ಭರ್ತಿಯಾಗಿವೆ. ಆದರೆ ಕಲುಷಿತ ನೀರಿನಿಂದಾಗಿ ಕಲ್ಯಾಣಿಗಳಲ್ಲಿನ ನೀರು ವಿಷಜಲವಾಗಿದೆ. ಹೀಗಾಗಿ ಜನರ ಬಳಕೆಗೆ ಕಲ್ಯಾಣಿ ನೀರು ಬಾರದೇ ಸಾಂಕ್ರಾಮಿಕ ರೋಗಗಳ ಉತ್ಪಾದನಾ ಘಟಕಗಳಾಗಿವೆ.