ಚಿತ್ರದುರ್ಗ: ಮೊಬೈಲ್ ಕಸಿದುಕೊಂಡಿದ್ದಕ್ಕೆ ಸ್ವಂತ ಅಪ್ಪನನ್ನೇ ಅಪ್ರಾಪ್ತ ಬಾಲಕ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಆರ್.ಡಿ ಕಾವಲು ಗ್ರಾಮದಲ್ಲಿ ನಡೆದಿದೆ.
ತಡರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಯಪ್ಪ (48) ಅವರನ್ನು ಯಾರೋ ದುಷ್ಕರ್ಮಿಗಳು ಕತ್ತು ಕೊಯ್ದ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಸುದ್ದಿಯಾಗಿತ್ತು.
ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಸ್ಥಳಕ್ಕೆ ಬಂದ ಪೊಲೀಸರು, ಮನೆಯಲ್ಲಿ ಇದ್ದವರನ್ನು ವಿಚಾರಿಸಿದ್ದಾರೆ. ಮನೆಯಲ್ಲಿ ಜಯಪ್ಪನ ಹೆಂಡತಿ ಸಂಬಂಧಿಕರ ಮನೆಗೆ ಹೋಗಿದ್ದು, ಮನೆಯಲ್ಲಿ ಅಪ್ಪ ಮಗ ಮಾತ್ರ ಇದ್ದರು ಎಂದು ಗೊತ್ತಾಗಿದೆ.
ಆಗ ಮಗ 16 ವರ್ಷದ ಪುನೀತ್‍ನನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ನಮ್ಮ ತಂದೆಯನ್ನು ನಾನೇ ಕೊಲೆ ಮಾಡಿದ್ದು ಎಂದು ಅಪ್ರಾಪ್ತ ಬಾಲಕ ಒಪ್ಪಿಕೊಂಡಿದ್ದಾನೆ. ರಾತ್ರಿ ಮೊಬೈಲ್ ನೋಡುತ್ತಿದ್ದ ಮಗನ ಮೇಲೆ ಗದರಿದ ಅಪ್ಪ ಮೊಬೈಲ್ ಕಸಿದುಕೊಂಡು ಬೈದು ಹೋಗಿ ಮಲಗಿದ್ದಾನೆ. ಮೊಬೈಲ್ ಕಸಿದುಕೊಂಡಿದಕ್ಕೆ ಕೋಪಗೊಂಡಿದ್ದ ಪುನೀತ್ ಬೆಳಗಿನ ಜಾವ ಮನೆಯಲ್ಲಿ ಇದ್ದ ಮಚ್ಚಿನಿಂದ ತಂದೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಆರೋಪಿಯನ್ನು ಅರೆಸ್ಟ್ ಮಾಡಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.