– ವೇತನ ತಾರತಮ್ಯ ಪ್ರಶ್ನಿಸಿದ್ದಕ್ಕೆ ಮಹಿಳೆ ಮೇಲೆ ದೌರ್ಜನ್ಯ
ಚಿತ್ರದುರ್ಗ: ಅರಣ್ಯ ಇಲಾಖೆ ಅಧಿಕಾರಿಯ ದೌರ್ಜನ್ಯದಿಂದ ಮನನೊಂದ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲೇ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ಇಂದು ನಡೆದಿದೆ.
ಅರಣ್ಯ ಇಲಾಖೆ ಕಚೇರಿಯಲ್ಲಿ ಗುತ್ತಿಗೆ ಆಧಾರ ಮೇಲೆ ಕಸಗೂಡಿಸುವ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಗಂಡ ಬಿಟ್ಟು ನಿರ್ಗತಿಕಳಾದ ಲಕ್ಷ್ಮಿ ಅವರಿಗೆ ಒಬ್ಬಳು ಮಗಳಿದ್ದು, ಆಕೆಯ ವಿದ್ಯಾಭ್ಯಾಸ ಹಾಗೂ ಜೀವನೋಪಾಯಕ್ಕೆ ಕಳೆದ ನಾಲ್ಕು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಆದರೆ ಚಿತ್ರದುರ್ಗದ ಆರ್.ಎಫ್.ಓ ಸಂದೀಪ್‍ನಾಯಕ ಅವರು ಲಕ್ಷ್ಮಿ ಅವರಿಗೆ 9,000 ರೂ. ಬದಲಾಗಿ 7,000 ರೂ. ನೀಡುತ್ತಿದ್ದರು. ಆದರೂ ಕೊಟ್ಟಷ್ಟು ಕೊಡಲಿ ಅಂತ ಸಹನೆಯಿಂದ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಅವರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡ ಸಂದೀಪ್ ನಾಯಕ ವೇತನವನ್ನು ದಿಢೀರ್ ಆರು ಸಾವಿರ ರೂ.ಗೆ ಇಳಿಸಿದ್ದರು.
Advertisement
Advertisement
ವೇತನವನ್ನು ದಿಢೀರ್ ಅಂತಾ ಇಳಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸಂದೀಪ್ ಅವರು ಜನವರಿ ತಿಂಗಳಿಂದಲೇ ಲಕ್ಷ್ಮಿ ಅವರ ಮೇಲೆ ದೌರ್ಜನ್ಯ ಎಸಗಿದ್ದರು. ಅಷ್ಟೇ ಅಲ್ಲದೆ ಕೆಲಸದಿಂದಲೇ ತೆಗೆದು ಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ.
Advertisement
ಅರಣ್ಯಾ ಇಲಾಖೆ ಅಧಿಕಾರಿ ದೌರ್ಜನುದಿಂದ ಮನನೊಂದ ಲಕ್ಷ್ಮಿ, ಸ್ಥಳೀಯ ಶಾಸಕ ತಿಪ್ಪಾರೆಡ್ಡಿ ಬಳಿ ಹೋಗಿ ಅಳಲನ್ನು ತೋಡಿಕೊಂಡಿದ್ದರು. ಆದರೂ ಸಹ ಅಲ್ಲಿಯೂ ನ್ಯಾಯ ಸಿಕ್ಕಿರಲಿಲ್ಲ. ಹೀಗಾಗಿ ಚಿತ್ರದುರ್ಗ ಡಿಸಿ ವಿನೋತ್ ಪ್ರಿಯಾ ಅವರ ಬಳಿ ನ್ಯಾಯ ಕೊಡಿಸುವಂತೆ ಮನವಿ ಸಲ್ಲಿಸಲು ಆಗಮಿಸಿದ್ದರು. ಆದರೆ ಜಿಲ್ಲಾಧಿಕಾರಿ ಇವರ ಕೈಗೆ ಸಿಗಲಾರದೇ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಕಂಗಾಲಾದ ಮಹಿಳೆಯು ಕಚೇರಿಯಲ್ಲೇ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಡಿಸಿ ಕಚೇರಿ ಸಿಬ್ಬಂದಿ ಲಕ್ಷ್ಮಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ಲಕ್ಷ್ಮಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.