ಚಿತ್ರದುರ್ಗ: ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಬೇಗ ಮುಗಿದು ಜಿಲ್ಲೆಗೆ ನೀರು ಹರಿದು ಬರದನಾಡು ಬಂಗಾರವಾಗಲಿ ಅಂತ ರೈತರು ಉಳುಮೆ ಮಾಡುವ ಭೂಮಿಗಳನ್ನೇ ನೀಡಿದ್ದಾರೆ. ಆದರೆ ಯೋಜನೆ ತರುವುದನ್ನೇ ನೆಪವಾಗಿಸಿಕೊಂಡ ಅಧಿಕಾರಿಗಳು ರೈತರಿಗೆ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯೆ ತೋರಿದ್ದಾರೆ. ಮನಸಿಗೆ ಬಂದಷ್ಟು ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಿದ್ದಾರೆ. ಅಧಿಕಾರಿಗಳ ಈ ಎಡವಟ್ಟಿನಿಂದಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಇಂದು, ನಾಳೆ ಭದ್ರೆ ಬರದನಾಡಿಗೆ ಬರುತ್ತಾಳೆ ಅಂತ ಕಾಲಾಹರಣ ಮಾಡುತ್ತಿದ್ದ ಸರ್ಕಾರ ಹಾಗೂ ಅಧಿಕಾರಿಗಳು 2019ರ ನವೆಂಬರ್ ತಿಂಗಳಿಂದ ವಾಣಿವಿಲಾಸ ಸಾಗರಕ್ಕೆ ಕಾಲುವೆ ಮೂಲಕ ಭದ್ರೆ ನೀರನ್ನು ಹರಿಸುತ್ತಿದ್ದಾರೆ. ಆದರೆ ಭದ್ರಾ ಕಾಮಗಾರಿಗಾಗಿ ವಶಕ್ಕೆ ಪಡೆದ ರೈತರ ಜಮೀನುಗಳಿಗೆ ಮಾತ್ರ ಈವರೆಗೆ ಸರಿಯಾದ ಪರಿಹಾರ ನೀಡಿಲ್ಲ. ಅಲ್ಲದೆ ಕಾಮಗಾರಿಯಲ್ಲಿ ಕಳಪೆ ಹಾಗೂ ಅಕ್ರಮದ ಆರೋಪ ಸಹ ಕೇಳಿ ಬಂದಿದ್ದು, ಉದ್ಘಾಟನೆಗೂ ಮುನ್ನವೇ ಕಾಲುವೆ ಕುಸಿತ ಸಹ ಆಗಿ ಆತಂಕಸೃಷ್ಟಿಸಿತ್ತು.
ಕಾಮಗಾರಿಗಾಗಿ ವಶಕ್ಕೆ ಪಡೆದ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸಹ ಅಧಿಕಾರಿಗಳು ವಿಫಲರಾಗಿದ್ದಾರೆಂಬ ಮಾತುಗಳು ಕೇಳಿಬಂದಿರುವುದು ಸರ್ಕಾರಕ್ಕೆ ಭಾರೀ ಮುಖಭಂಗ ಎನಿಸಿದೆ. ಅಧಿಕಾರಿಗಳ ಎಡವಟ್ಟಿನಿಂದಾಗಿ ಅನ್ನದಾತರಿಗೆ ಪರಿಹಾರ ತಲುಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೋಟೆನಾಡು ಚಿತ್ರದುರ್ಗದ ಅನ್ನದಾತರು ಬೀದಿಗಳಿದು ಪ್ರತಿಭಟನೆ ಮಾಡಿದರೂ ಈವರೆಗೆ ರೈತರಿಗೆ ಪರಿಹಾರ ಮಾತ್ರ ದೊರೆತಿಲ್ಲ. ಅಲ್ಲದೆ ಚಿತ್ರದುರ್ಗ ತಾಲೂಕಿನ ಚಿಕ್ಕಸಿದ್ದವನಹಳ್ಳಿ ಗ್ರಾಮದ ಅಂಗವಿಕಲ ರೈತ ವೀರಭದ್ರಪ್ಪ ಅವರಿಗೂ ಅಧಿಕಾರಿಗಳು ವಂಚಿಸಿದ್ದಾರೆ.
ವೀರಭದ್ರಪ್ಪ ಅವರ ಜಮೀನನ್ನು ಭದ್ರಾ ಕಾಮಗಾರಿಗಾಗಿ ವಶಪಡಿಸಿಕೊಂಡಿದ್ದು, 1.5 ಲಕ್ಷ ರೂ. ಪರಿಹಾರದ ಹಣವನ್ನು ಚೆಕ್ ರೂಪದಲ್ಲಿ ಅಧಿಕಾರಿಗಳು ನೀಡಿದ್ದಾರೆ. ಆದರೆ ವೀರಭದ್ರಪ್ಪ ಅವರ ಬ್ಯಾಂಕ್ ಖಾತೆಯಲ್ಲಿ ಒಂದು ಸಾವಿರ ರೂಪಾಯಿ ಮಾತ್ರ ಜಮಾ ಆಗಿದ್ದು, ಚೆಕ್ ಬೌನ್ಸ್ ಆರೋಪ ಸಹ ಕೇಳಿಬಂದಿದೆ. ಇದರಿಂದಾಗಿ ಆತಂಕಗೊಂಡ ರೈತ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡಿ, ಅಲೆದಾಡಿ ಸುಸ್ತಾಗಿದ್ದಾರೆ. ಆದರೆ ಈವರೆಗೂ ಅತ್ತ ಜಮೀನು ಇಲ್ಲ, ಇತ್ತ ಪರಿಹಾರದ ಹಣವೂ ಸಿಗದೆ ವೀರಭದ್ರಪ್ಪ ಅವರು ಕಂಗಾಲಾಗಿದ್ದಾರೆ.
ತನಗಾದ ಅನ್ಯಾಯ ಬೇರೆ ಯಾರಿಗೂ ಆಗುವುದು ಬೇಡ ಅಂತ ಕಣ್ಣೀರಿಟ್ಟಿರುವ ರೈತ ವೀರಭದ್ರಪ್ಪ ಅವರು ಆದಷ್ಟು ಬೇಗ ಸರ್ಕಾರ ನನಗೆ ಅಗತ್ಯ ಪರಿಹಾರ ನೀಡಲಿ ಅಂತ ಅಂಗಲಾಚಿದ್ದಾರೆ.
ಭದ್ರಾ ಕಾಮಗಾರಿಯಿಂದ ಆಗುತ್ತಿರುವ ಅವಾಂತರ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಅನ್ನದಾತರು ಸಹ ಶುಕ್ರವಾರ ಧರಣಿ ನಡೆಸಿದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ ಧರಣಿ ನಡೆಸಿದ್ದ ಸ್ಥಳಕ್ಕೆ ಆಗಮಿಸಿ, ರೈತರಿಗೆ ಆಗಿರುವ ಸಮಸ್ಯೆಯನ್ನು ಆಲಿಸಿದರು. ಅಲ್ಲದೆ 2020ರ ಜನವರಿ ತಿಂಗಳ ಮೊದಲ ವಾರದಲ್ಲಿ ಅಧಿಕಾರಿಗಳು ಹಾಗೂ ಭದ್ರಾ ಮೇಲ್ದಂಡೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಭದ್ರಾ ಯೋಜನೆಯಿಂದ ರೈತರಿಗೆ ಆಗಿರುವ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ.