– ಆರೋಗ್ಯ ಸಚಿವರೇ ಇದು ನಿಮ್ಮದೇ ಜಿಲ್ಲೆಯ ವಾಸ್ತವ
ಚಿತ್ರದುರ್ಗ: ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಯಾವುದೇ ತೊಂದರೆ ಆಗಬಾರದು ಅಂತ ಅವರನ್ನು ಜತನದಿಂದ ನೋಡಿಕೊಳ್ಳುತ್ತಾರೆ. ತಾಯಿಗೆ ಏನಾದರೂ ತೊಂದರೆ ಆದರೆ ಮಗುವಿನ ಮೇಲೆ ಎಫೆಕ್ಟ್ ಆಗದಿರಲಿ ಅಂತ ಕಾಳಜಿವಹಿಸ್ತಾರೆ. ಆದರೆ ಹೆರಿಗೆಗೆ ಅಂತ ಬರೋ ಮಹಿಳೆಯರಿಗೆ ಸರ್ಕಾರಿ ಆಸ್ಪತ್ರೆಗಳು ನರಕವನ್ನೇ ತೋರಿಸಿ ಬಿಡುತ್ತವೆ.
Advertisement
ಹೌದು. ಪುಟ್ಟ, ಪುಟ್ಟ ಕಂದಮ್ಮಗಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ನೆಲದ ಮೇಲೆ ಕುಳಿತಿರೋ ಹಸಿ ಬಾಣಂತಿಯರ ಮನಕಲಕುವ ದೃಶ್ಯ ಕಂಡು ಬಂದಿದ್ದು ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ. ಇದು ನೋಡೋಕೆ ಮಾತ್ರ ಸರ್ಕಾರಿ ಆಸ್ಪತ್ರೆಯಾಗಿದೆ. ಆದರೆ ಯಾವುದೇ ಮೂಲಭೂತ ಸೌಕರ್ಯಗಳು ಈ ಆಸ್ಪತ್ರೆಯಲ್ಲಿಲ್ಲ. ಇಲ್ಲಿ ವಾರಗಟ್ಟಲೆ ಪುಟ್ಟ, ಪುಟ್ಟ ಕಂದಮ್ಮಗಳನ್ನು ಇಟ್ಟುಕೊಂಡು ಹಸಿ ಬಾಣಂತಿಯರು ನೆಲದ ಮೇಲೆ ಮಲಗುತ್ತಾರೆ. ಯಾವಾಗಲೂ ರಶ್ ಆಗಿರೋ ಈ ಆಸ್ಪತ್ರೆಯಲ್ಲಿ ಕೆಲ ಹಾಸಿಗೆಗಳು ರಾಜಕಾರಣಿಗಳ ಬೆಂಬಲಿಗರ ಕಡೆಯವರಿಗೆ ಮಾತ್ರ ಮೀಸಲಾಗಿದೆ ಅಂತ ಬಾಣಂತಿ ಸಂಬಂಧಿಕರು ಆರೋಪಿಸಿದ್ದಾರೆ.
Advertisement
Advertisement
ಇಲ್ಲಿನ ಬಡ ಬಾಣಂತಿಯರು ಹೆರಿಗೆಯಾದಾಗ ಬೆಡ್ ಕೇಳಿದರೆ, ಇಲ್ಲಿ ಬೆಡ್ ಖಾಲಿ ಇಲ್ಲ. ಚಿಕಿತ್ಸೆ ಬೇಕಂದರೆ ನೆಲದ ಮೇಲೆ ಮಲಗಿ ಅಂತ ಇಲ್ಲಿನ ಸಿಬ್ಬಂದಿ ದಬಾಯಿಸ್ತಾರಂತೆ. ಅಲ್ಲದೆ ಸಿಸೇರಿಯನ್ ಆದ ತಾಯಿ ಒಂದು ಕಡೆ ಇದ್ದರೆ, ಗಂಭೀರ ಸ್ಥಿತಿಯಲ್ಲಿರೋ ಹಸುಗೂಸೇ ಮತ್ತೊಂದು ಕಡೆ ಇರೋ ಪರಿಸ್ಥಿತಿ ಇದೆ. ಪದೇ ಪದೇ ತಾಯಿ ಹಾಲನ್ನು ಬಾಟಲಿಯಲ್ಲಿ ತೆಗೆದುಕೊಂಡು ಓಡಾಡಿ ಕುಡಿಸಬೇಕಿದೆ. ಹಾಗೆನೇ ಇಂತಹ ವೇಳೆ ಮಗು ಕೂಡ ಅದಲು ಬದಲಾಗುವ ಆತಂಕ ಕೂಡ ತಾಯಂದಿರನ್ನು ಕಾಡುತ್ತಿದೆ.
Advertisement
ಇಲ್ಲಿನ ಸ್ಥಿತಿಗತಿ ಬಗ್ಗೆ ಆರೋಗ್ಯಾಧಿಕಾರಿಗಳನ್ನು ಕೇಳಿದರೆ, ಇದು ಕೇವಲ 50 ಬೆಡ್‍ಗಳ ಆಸ್ಪತ್ರೆ. ದಿನಕ್ಕೆ 30-40 ಮಹಿಳೆಯರಿಗೆ ಹೆರಿಗೆ ಮಾಡಿಸಲಾಗುತ್ತದೆ. ಆದ್ದರಿಂದ ಸಮಸ್ಯೆಯಾಗಿದೆ. ಹೊಸ ಕಟ್ಟಡಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡುತ್ತಾರೆ.
ಆರೋಗ್ಯ ಸಚಿವ ಶ್ರೀರಾಮುಲು ಅವರು ಇಲ್ಲಿ ವಾಸ್ತವ್ಯ ಕೂಡ ಹೂಡಿದ್ರು. ಆದರೂ ಇಲ್ಲಿನ್ನೂ ಸುಧಾರಣೆ ಆಗಿಲ್ಲ. ಸಚಿವರು ಬಂದಾಗ ಐಷಾರಾಮಿ ಬೆಡ್, ಎಸಿ ಅಳವಡಿಸೋ ಆಸ್ಪತ್ರೆ ಸಿಬ್ಬಂದಿಗೆ, ಬೆಡ್ ಇಲ್ಲದೆ ನೆಲದ ಮೇಲೆ ಮಲಗುವ ಹಸಿ ಬಾಣಂತಿಯರ ನರಕಯಾತನೆ ಕಾಣಿಸದಿರುವುದು ದುರಂತ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.