ಚಿತ್ರದುರ್ಗ: ಕಾಡು ಪ್ರಾಣಿಗಳನ್ನು ಹಿಂಸಿಸುವುದು, ಕೊಲ್ಲುವುದು ಹಾಗೂ ಅವುಗಳನ್ನು ಬೇರೆಡೆಗೆ ಸಾಗಿಸುವುದು ಕಾನೂನು ಬಾಹಿರ ಅಂತ ಮಾಹಿತಿ ಇದ್ದರು ಸಹ ಕಾಡುಪ್ರಾಣಿಗಳನ್ನು ಜನರು ಕೊಲ್ಲುತ್ತಿರುವ ಅಮಾನವೀಯ ಘಟನೆಗಳು ಮಾತ್ರ ಮರುಕಳಿಸುತ್ತಲೇ ಇವೆ. ಜೊತೆಗೆ ಅಪರೂಪದ ಕಾಡು ಪ್ರಾಣಿಗಳಾದ ಕರಡಿ, ಚಿರತೆ, ಹುಲಿಗಳು ಸೇರಿದಂತೆ ಇತರೆ ಪ್ರಾಣಿಗಳ ಚೂಪಾದ ಉಗುರುಗಳನ್ನು ಸಂಗ್ರಹಿಸಿಡುವ ಹುಚ್ಚಾಟಗಳು ಹಾಗೂ ಅವುಗಳ ಅಂಗಾಂಗಗಳನ್ನು ಪ್ರತ್ಯೇಕಗೊಳಿಸಿ ಮೊಬೈಲ್ ಸ್ಟೇಟಸ್ ಹಾಕಿಕೊಳ್ಳುವ ದೊಡ್ಡಸ್ತಿಕೆ ಸಹ ನಿರಂತರವಾಗಿವೆ. ಅಂತೆಯೇ ಫೆಬ್ರವರಿ 12 ರಂದು ಮೊಳಕಾಲ್ಮೂರಿನ ಗುಡ್ಡದಲ್ಲಿ ಸಾವನ್ನಪ್ಪಿದ್ದ ಚಿರತೆಯ ಕಾಲನ್ನು ಕತ್ತರಿಕೊಂಡು ಹೋಗಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
Advertisement
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಪಟ್ಣಣದಲ್ಲಿರುವ ಪಾಳೆಗಾರರ ಗುಡ್ಡದ ಬಳಿ ಫೆಬ್ರವರಿ 12ರಂದು ಚಿರತೆ ಶವಪತ್ತೆ ಆಗಿತ್ತು. ಆಗ ಯಾರೋ ದುಷ್ಕರ್ಮಿಗಳು ಮೃತ ಚಿರತೆಯ ಕಾಲುಗಳನ್ನು ಕತ್ತರಿಸಿ ಒಯ್ದಿದ್ದಾರೆಂಬ ಪ್ರಕರಣ ಸಹ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
Advertisement
ಈ ಪ್ರಕರಣದ ಬೆನ್ನತ್ತಿದ್ದ ಅರಣ್ಯಾಧಿಕಾರಿಗಳು ಚಿರತೆಯ ಕಾಲುಗಳನ್ನು ಕತ್ತರಿಸಿಕೊಂಡು ತೆರಳಿದ್ದ ಮೊಳಕಾಲ್ಮೂರಿನ ಶ್ರೀನಿವಾಸ್‍ನಾಯಕ ಬಡಾವಣೆಯ ಪವನ್(20) ಎಂಬ ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಮೊಬೈಲ್ ಸ್ಟೇಟಸ್‍ನಿಂದ ಆರೋಪಿ ಅರೆಸ್ಟ್:
ಗುಡ್ಡದಲ್ಲಿ ಸಾವನ್ನಪ್ಪಿದ್ದ ಚಿರತೆಯ ಮೂರು ಕಾಲುಗಳನ್ನು ಕತ್ತರಿಸಿಕೊಂಡು ಹೋಗಲಾಗಿದ್ದು, ಅವುಗಳಲ್ಲಿಎರಡು ಕಾಲುಗಳನ್ನು ಮಾತ್ರ ತಾನು ಕದ್ದೊಯ್ದಿದ್ದು ಚಿರತೆಯನ್ನು ನಾನು ಕೊಂದಿಲ್ಲವೆಂದು ವಿಚಾರಣೆ ವೇಳೆ ಆರೋಪಿ ಪವನ್ ಹೇಳಿದ್ದಾನೆ. ಚಿರತೆಯ ಉಗುರುಗಳ ಮೇಲಿನ ಕುತೂಹಲ ಹಾಗೂ ವ್ಯಾಮೋಹದಿಂದಾಗಿ ಸತ್ತು ಬಿದ್ದಿದ್ದ ಚಿರತೆಯ ಕಾಲುಗಳನ್ನು ಕತ್ತರಿಸಿಕೊಂಡು ಹೋಗಿದ್ದನು. ಹಾಗೆಯೇ ತಾನು ಮಾಡಿದ್ದ ಮಹತ್ಕಾರ್ಯವನ್ನು ತನ್ನ ಆತ್ಮೀಯರು ಹಾಗೂ ಸ್ನೇಹಿತರು ಮತ್ತು ಸಂಬಂಧಿಗಳಿಗೆ ಪ್ರಚಾರಪಡಿಸುವ ಸಲುವಾಗಿ ತನ್ನ ಮೊಬೈಲ್ ಸ್ಟೇಟಸ್‍ಗೆ ಚಿರತೆಯ ಉಗುರುಗಳನ್ನು ಪವನ್ ಹಾಕಿಕೊಂಡಿದ್ದನು.
ಆಗ ಸಾರ್ವಜನಿಕರಿಂದ ಈ ವಿಚಾರ ತಿಳಿದ ಅರಣ್ಯಾಧಿಕಾರಿಗಳು ಪವನ್‍ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಪ್ರಕರಣ ಬಯಲಾಗಿದೆ. ಆದರೆ ಚಿರತೆಯನ್ನು ಆಹಾರದಲ್ಲಿ ವಿಷ ಬೆರೆಸಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.