ಚಿತ್ರದುರ್ಗ: ಅಣ್ಣ-ತಂಗಿಯರು ಆಚರಿಸುವ ಹಬ್ಬ ಎಂದಾಕ್ಷಣ ಎಲ್ಲರ ನೆನಪಿಗೆ ಬರುವುದು ರಕ್ಷಾಬಂಧನ ಹಬ್ಬ. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ನಡೆಯುವ ಗುಗ್ರಿಹಬ್ಬವನ್ನು ಅಣ್ಣ ತಂಗಿಯರ ಸಮಾಗಮನದ ಹಬ್ಬವೆಂದೇ ಕರೆಯಲಾಗುತ್ತಿದೆ.
ಗುಗ್ರಿಹಬ್ಬದಂದು ಗ್ರಾಮದ ಅಹೋಬಲ ನರಸಿಂಹಸ್ವಾಮಿ ದೇಗುಲದ ಮುಂಭಾಗದಲ್ಲಿರುವ ಒಂಟಿ ಕಂಬದ ಮೇಲಿರುವ ದೀಪಕ್ಕೆ ಎಣ್ಣೆ ಎರೆಯುವ ಮೂಲಕ ಆಚರಿಸಲಾಗುತ್ತದೆ. ಆ ದೀಪ ಎಷ್ಟು ಚೆನ್ನಾಗಿ ಉರಿಯುತ್ತೋ ಅಷ್ಟು ಗ್ರಾಮಸ್ಥರಿಗೆ ಒಳ್ಳೆಯದಾಗುತ್ತದೆ. ಅಲ್ಲದೇ ಅಣ್ಣ-ತಂಗಿಯರ ಸಂಬಂಧ ಗಟ್ಟಿಯಾಗಿ ಉಳಿಯುತ್ತದೆ ಎಂಬ ನಂಬಿಕೆ ಇಲ್ಲಿದೆ. ಹೀಗಾಗಿ ತವರು ಮನೆಯಿಂದ ಮದುವೆಯಾಗಿ ಹೋದ ಪ್ರತಿಯೊಬ್ಬ ಹೆಣ್ಣು ಮಕ್ಕಳು ಈ ಹಬ್ಬಕ್ಕೆ ಆಗಮಿಸುವ ಪ್ರತೀತಿ ಇದೆ.
ದೇವರಮರಿಕುಂಟೆಯ ಅಹೋಬಸ್ವಾಮಿ ದೇವರು ಗ್ರಾಮದಲ್ಲಿ ನೆಲೆನಿಂತಿದ್ದು, ಸ್ವಾಮಿಯ ತಂಗಿ ಗೂಲೋಬಮ್ಮ ಪಾವಗಡ ತಾಲೂಕಿನಲ್ಲಿ ನಿಡುಗಲ್ಲು ಬೆಟ್ಟದಲ್ಲಿ ಪ್ರತಿಷ್ಠಾಪಿತಳಾಗಿರುತ್ತಾಳೆ. ಹೀಗಾಗಿ ಆಕೆ ತನ್ನ ತವರೂರಿಗೆ ಬರಲಾಗದೆ, ಹಬ್ಬದ ಆಚರಣೆಯನ್ನು ದೇಗುಲದಮುಂದೆ ಹಚ್ಚುವ ದೀಪದ ಮೂಲಕ ನನ್ನ ಅಣ್ಣ ಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಯುತ್ತಾಳೆ. ಆಮೂಲಕ ದೇವಿಯು ಅಲ್ಲಿಂದಲೇ ಖುಷಿ ಪಡುತ್ತಾಳೆ ಎಂಬುದು ಐತಿಹ್ಯ ಇದೆ.
ಅಹೋಬಲ ನರಸಿಂಹ ಸ್ವಾಮಿಗೆ ಬೆಲ್ಲವೇ ಇಷ್ಟವಾದ ನೈವೇದ್ಯ. ಆದ್ದರಿಂದ ಭಕ್ತರೆಲ್ಲರೂ ಬೆಲ್ಲವನ್ನೇ ತಂದು ಸ್ವಾಮಿಗೆ ನೈವೇದ್ಯ ಮಾಡಿ ಹರಕೆ ತೀರಿಸುತ್ತಾರೆ. ಈ ವರ್ಷ ಕಟ್ಟಿಕೊಂಡ ಹರಕೆ, ಇಷ್ಟಾರ್ಥ ನೆರವೇರಿದ ಬಳಿಕ ಮುಂದಿನ ವರ್ಷ ಬೆಲ್ಲವನ್ನು ಸ್ವಾಮಿಗೆ ಅರ್ಪಣೆ ಮಾಡೋದ್ರಿಂದ ತಮ್ಮ ಹರಕೆ ಸಲ್ಲಿಸುವ ಸಂಪ್ರದಾಯ ಇಲ್ಲಿದೆ. ಹೀಗಾಗಿ ವಿವಿಧೆಡೆಗಳಿಂದ ಅಹೋಬಲ ಸ್ವಾಮಿಯ ಗುಗ್ಗರಿ ಹಬ್ಬಕ್ಕೆ ಆಗಮಿಸುವ ಭಕ್ತರು ಬೆಲ್ಲವನ್ನು ದೇವರಿಗೆ ಸಮರ್ಪಿಸಿ, ಕಂಬದಮೇಲೆಹಚ್ಚುವ ದೀಪಕ್ಕೆ ಎಣ್ಣೆ ಎರೆಯುವ ಮೂಲಕ ಅಣ್ಣ ತಂಗಿಯರ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ.