ಚಿತ್ರದುರ್ಗ: ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಹಾಸನದ (Hassan) ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಕಣ್ಮರೆಯಾಗಿದ್ದಾರೆ. ಮಕ್ಕಳನ್ನು ಕಾಣದೇ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಮಗಳೇ ಎಲ್ಲಿ ಹೋದ್ಯಮ್ಮ? ಎಂದು ನವ್ಯಾ ತಂದೆ ಮಂಜಪ್ಪ ಕಣ್ಣೀರಿಟ್ಟಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಬೆಳಿಗ್ಗೆ 7 ಗಂಟೆಗೆ ವಿಷಯ ಗೊತ್ತಾಗಿದೆ. ಮಿಲನಾ ಫೋನ್ ಮಾಡಿ ವಿಷಯ ತಿಳಿಸಿದಳು. ನವ್ಯಾ, ಮಾನಸಾ, ಮಿಲನಾ ಮೂವರು ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಮೂವರು ಒಟ್ಟಿಗೆ ಇಂಜಿನಿಯರಿಂಗ್ ಓದಿ, ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ರಜೆ ಇತ್ತು ಎಂಬ ಕಾರಣಕ್ಕೆ ಸಿಗಂದೂರಿಗೆ ಹೊರಟಿದ್ದರು. ನನಗೆ ಒಬ್ಬನೇ ಮಗ ಹಾಗೂ ಒಬ್ಬಳೇ ಮಗಳಿದ್ದಾಳೆ. ಎಪ್ರಿಲ್‌ನಲ್ಲಿ ನವ್ಯಾ ಮದುವೆ ಕೂಡ ಫಿಕ್ಸ್ ಆಗಿತ್ತು. ಎಲ್ಲ ಕಡೆ ಹುಡುಕಾಡಿದ್ದೇವೆ, ಸಿಗಲಿಲ್ಲ. ಪೊಲೀಸರಿಗೂ ಮಾಹಿತಿ ನೀಡಿದ್ದೇವೆ. ಎಲ್ಲಿದ್ಯಮ್ಮ? ನನ್ನ ಮಗಳನ್ನು ಹುಡುಕಿಕೊಡಿ ಎಂದು ಗೋಗರೆಯುತ್ತಿದ್ದಾರೆ. ಇದನ್ನೂ ಓದಿ: ಹಿರಿಯೂರು ಬಸ್ ಅಪಘಾತ – ಹಾಸನ ಮೂಲದ ಇಬ್ಬರು ಟೆಕ್ಕಿಗಳು ಕಣ್ಮರೆ
ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿಯ ನವ್ಯ ಹಾಗೂ ಚನ್ನರಾಯಪಟ್ಟಣದ ಮಾನಸ ಕಣ್ಮರೆಯಾಗಿದ್ದಾರೆ. ಒಟ್ಟಿಗೆ ಇಂಜಿನಿಯರಿಂಗ್ ಓದಿ, ಬಳಿಕ ಬೆಂಗಳೂರಿನಲ್ಲಿ ಎಂಟೆಕ್ ಮುಗಿಸಿದ್ದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಿಂದ ಬಸ್ ಹತ್ತಿ ಹೊರಟಿದ್ದರು. ರಾತ್ರಿ ಬಸ್ ಅಪಘಾತದಲ್ಲಿ ಕಣ್ಮರೆಯಾಗಿದ್ದಾರೆ.
ಏನಿದು ಪ್ರಕರಣ?
ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಹಿರಿಯೂರಿನಿಂದ ಬೆಂಗಳೂರಿಗೆ ತೆರಳುತಿದ್ದ ಲಾರಿ ಬೆಂಗಳೂರಿನಿಂದ ಶಿವಮೊಗ್ಗ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್ಸಿಗೆ ಗುದ್ದಿದೆ. ಲಾರಿ ಡಿಕ್ಕಿಯಿಂದಾಗಿ ಖಾಸಗಿ ಬಸ್ಸೊಂದು ಬೆಂಕಿಗಾಹುತಿಯಾಗಿ 9ಕ್ಕೂ ಹೆಚ್ಚು ಜನರು ಸಜೀವ ದಹನಗೊಂಡಿದ್ದಾರೆ.
ಗಾಯಾಳುಗಳನ್ನು ಹಿರಿಯೂರು ಹಾಗೂ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.ಇದನ್ನೂ ಓದಿ:ಬಸ್ಸಿನಲ್ಲಿದ್ದ 8 ಪ್ರಯಾಣಿಕರು, ಲಾರಿ ಡ್ರೈವರ್ ಸೇರಿ 9 ಮಂದಿ ಸಾವು: ಐಜಿಪಿ ರವಿಕಾಂತೇಗೌಡ

