ಚಿತ್ರದುರ್ಗ: ಜಿಲ್ಲೆಯ ಹಿರಿಯೂರು (Hiriyuru) ಬಳಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಸ್ ಚಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮೃತ ಸೀಬರ್ಡ್ ಬಸ್ ಚಾಲಕನನ್ನು ಮಹಮ್ಮದ್ ರಫೀಕ್ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಹುಬ್ಬಳ್ಳಿ (Hubballi) ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ ಟ್ರಕ್ ಗುದ್ದಿದ್ದರಿಂದ ದುರಂತ – ಸೀಬರ್ಡ್ ಮಾಲೀಕ
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್ ಬಸ್ ಹೊತ್ತಿ ಉರಿದಿದೆ. ಗೊರ್ಲತ್ತು ಕ್ರಾಸ್ ಬಳಿ ಎದುರುಗಡೆಯಿಂದ ಯಮನಂತೆ ಬಂದ ಲಾರಿ ಡಿವೈಡರ್ ಹಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ. ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಸ್ ಚಾಲಕ ಮಹಮ್ಮದ್ ರಫೀಕ್ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು (ಡಿ.26) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಅಪಘಾತವಾದ ಬಳಿಕ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ್ದ ಚಾಲಕ, ಏಕಾಏಕಿ ಲಾರಿ ಬಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ಅದನ್ನು ತಪ್ಪಿಸಲು ಹೋದಾಗ ಪಕ್ಕದಲ್ಲೇ ಬಸ್ ಇತ್ತು. ಸೀದಾ ಲಾರಿ ಡಿಸೇಲ್ ಟ್ಯಾಂಕ್‌ಗೆ ಗುದ್ದಿದೆ. ಆ ಕ್ಷಣದಲ್ಲಿ ಏನ್ ಆಯ್ತು ಅನ್ನೋದು ಗೊತ್ತಾಗಲಿಲ್ಲ ಎಂದಿದ್ದರು.
ಇನ್ನೂ ದುರಂತದಲ್ಲಿ ಬೆಂಗಳೂರಿನ ಬಿಂದು, ಅವರ ಪುತ್ರಿ ಗ್ರೇಯಾ, ಚನ್ನರಾಯಪಟ್ಟಣದ ಮಾನಸಾ, ನವ್ಯ, ಕಾರವಾರದ ರಶ್ಮಿ, ಲಾರಿ ಚಾಲಕ ಕುಲದೀಪ್ ಸಜೀವ ದಹನಗೊಂಡಿದ್ದಾರೆ. ಬಸ್‌ಗೆ ಬೆಂಕಿ ತಗುಲುತ್ತಿದ್ದಂತೆ ಬಸ್ ಚಾಲಕ, ನಿರ್ವಾಹಕ ಮತ್ತು ಕೆಲವರು ಬಸ್‌ನಿಂದ ಹೊರಜಿಗಿದು ಬಚಾವ್ ಆಗಿದ್ದಾರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗಾಗಲೇ ಮೃತದೇಹಗಳ ಡಿಎನ್‌ಎ ಪರೀಕ್ಷೆಗಾಗಿ ಮೃತರ ಸಂಬಂಧಿಗಳ ರಕ್ತದ ಮಾದರಿ ಸಂಗ್ರಹಿಸಲಾಗಿದೆ ಹಾಗೂ ಮೃತರ ಮೂಳೆಗಳ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಇವುಗಳನ್ನು ಹುಬ್ಬಳ್ಳಿಯ ಲ್ಯಾಬ್‌ಗೆ ಕಳುಹಿಸಿ, ವರದಿ ಬಂದ ಬಳಿಕ ಖಚಿತವಾಗಿ ಮೃತರ ಗುರುತು ಪತ್ತೆಯಾಗಲಿದೆ. ಆನಂತರ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆ ಸರ್ಜನ್ ಡಾ.ರವೀಂದ್ರ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಹಿರಿಯೂರು | ಖಾಸಗಿ ಬಸ್ ದುರಂತ – ಏನಾಗಿದೆ ಅಂತಾನೇ ಗೊತ್ತಾಗಲಿಲ್ಲ: ಶಾಕ್‌ನಲ್ಲೇ ವಿವರಿಸಿದ ಕ್ಲೀನರ್

