ಚಿತ್ರದುರ್ಗ: ಹಿರಿಯೂರು (Hiriyuru) ಬಳಿ ಸಂಭವಿಸಿದ ಬಸ್ ದುರಂತದಲ್ಲಿ 6 ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಐದು ಮೃತದೇಹಗಳ ಮೂಳೆಗಳ ಸ್ಯಾಂಪಲ್ ಸಂಗ್ರಹಿಸಲಾಗಿದ್ದು, ಡಿಎನ್‌ಎ (DNA) ವರದಿ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗುವುದು ಎಂದು ತಿಳಿದುಬಂದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅವಘಡ ಸಂಭವಿಸಿದೆ. ಕ್ರಿಸ್ಮಸ್ ರಜೆ ಎಂಜಾಯ್ ಮಾಡಲು ಸೀಬರ್ಡ್ ಬಸ್ಸಲ್ಲಿ ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಆದರೆ ಯಮರಾಯನ ರೂಪದಲ್ಲಿ ಬಂದ ಲಾರಿಯೊಂದು ಬಸ್ಸಿಗೆ ಡಿಕ್ಕಿಯಾಗಿ 33 ಪ್ರಯಾಣಿಕರ ಪೈಕಿ ಆರು ಪ್ರಯಾಣಿಕರು ಸೇರಿದಂತೆ ಲಾರಿಯ ಚಾಲಕ ಸಹ ಸಜೀವ ದಹನಗೊಂಡಿದ್ದು, ಮೃತರ ಗುರುತು ಪತ್ತೆ ಹಚ್ಚಲಾಗದಂತೆ ಸುಟ್ಟು ಕರಕಲಾಗಿವೆ.ಇದನ್ನೂ ಓದಿ: ಚಿತ್ರದುರ್ಗ ಬಸ್ ದುರಂತ | ಬಸ್ ಕಿಟಕಿಯಿಂದ ಹಾರಿ ಪ್ರಾಣ ಉಳಿಸಿಕೊಂಡ ದಂಪತಿ
ಬಸ್‌ನಲ್ಲಿ ನಿದ್ರೆಗೆ ಜಾರಿದ್ದ ಕಾರವಾರದ ರಶ್ಮಿ, ಚನ್ನರಾಯಪಟ್ಟಣದ ನವ್ಯ, ಮಾನಸಾ ಹಾಗೂ ಬೆಂಗಳೂರಿನ ಬಿಂದು & ಪು|ತ್ರಿ ಗ್ರಿಯ ಸಜೀವ ದಹನವಾಗಿದ್ದಾರೆ. ಮೃತದೇಹಗಳು ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದವು. ಹೀಗಾಗಿ ಮೃತದೇಹಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರಗೆ ಶಿಫ್ಟ್ ಮಾಡಿ ಮರಣೋತ್ತರ ಪರೀಕ್ಷೆ ಮುಗಿಸಲಾಗಿದೆ.
ಇನ್ನೂ ಮೃತದೇಹಗಳ ಡಿಎನ್‌ಎ ಪರೀಕ್ಷೆಗೂ ಕೂಡ ಮೃತರ ಸಂಬಂಧಿಗಳ ರಕ್ತದ ಮಾದರಿ ಸಂಗ್ರಹಿಸಲಾಗಿದೆ ಹಾಗೂ ಬೋನ್ ಸ್ಯಾಂಪಲ್ ಸಂಗ್ರಹಿಸಿ ಮಾದರಿಯನ್ನು ಹುಬ್ಬಳ್ಳಿಯ ಲ್ಯಾಬ್‌ಗೆ ಕಳುಹಿಸಲಾಗಿದೆ. ಒಂದೆರಡು ದಿನದಲ್ಲಿ ಡಿಎನ್‌ಎ ವರದಿ ಪಡೆಯಲು ಅಧಿಕಾರಿಗಳ ಪ್ರಯತ್ನಿಸುತ್ತಿದ್ದು, ತ್ವರಿತವಾಗಿ ವರದಿ ನೀಡುವಂತೆ ಮನವಿ ಮಾಡುವ ಭರವಸೆ ನೀಡಿದ್ದಾರೆ. ಡಿಎನ್‌ಎ ವರದಿ ಬಂದ ಬಳಿಕ ಖಚಿತವಾಗಿ ಮೃತರ ಗುರುತು ಪತ್ತೆಯಾಗಲಿದೆ. ಆನಂತರ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆ ಸರ್ಜನ್ ಡಾ.ರವೀಂದ್ರ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: Chitradurga Bus Accident | ಲಾಕೆಟ್ ಮೂಲಕ ಮಗಳ ಗುರುತು ಪತ್ತೆಹಚ್ಚಿದ ಮಾನಸಾ ತಂದೆ

