Connect with us

Chitradurga

ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ ಸರ್ಕಾರಿ ಶಾಲೆ – ಶಿಕ್ಷಕನ ಪರಿಶ್ರಮಕ್ಕೆ ಗ್ರಾಮಸ್ಥರು ಫಿದಾ

Published

on

ಚಿತ್ರದುರ್ಗ: ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯೋರೇ ಹೆಚ್ಚು. ಆದರೆ ಸರ್ಕಾರಿ ಶಾಲೆಯು ಸಹ ಖಾಸಗಿ ಶಾಲೆಗಳಿಗಿಂತ ಕಮ್ಮಿ ಏನಿಲ್ಲ ಎಂಬುದನ್ನು ಸಾಭೀತು ಮಾಡಲು ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಅಜ್ಜನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಮಂಜಪ್ಪ ಮುಂದಾಗಿದ್ದಾರೆ.

ಚಿತ್ರಕಲೆ ಪ್ರಾವಿಣ್ಯತೆ ಹೊಂದಿರುವ ಚಳ್ಳಕೆರೆಯ ಕಲಾವಿದರನ್ನು ಕರೆಸಿ, ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸುಲಭವಾಗಿ ಪಾಠ ಪ್ರವಚನ ಅರ್ಥವಾಗುವಂತೆ ಗೋಡೆಯ ಮೇಲೆ ಬಣ್ಣ ಬಣ್ಣದ ಸುಂಧರ ಚಿತ್ತಾರಗಳನ್ನು ಅರಳಿಸಿರುವ ಕಾರ್ಯವನ್ನು ಮಾಡುತ್ತಿದ್ದಾರೆ. ಅಜ್ಜನಹಳ್ಳಿಯ ಸರ್ಕಾರಿ ಶಾಲೆಯ ನಲಿ-ಕಲಿ ಕೊಠಡಿ ಮತ್ತು ಕಲಿಕೆಯ ಪಯಣಕ್ಕೆ ಸಿದ್ಧತೆಗೊಂಡಿರುವ ಚಿಣ್ಣರ ಎಕ್ಸ್ ಪ್ರೆಸ್ ರೈಲು ಅನಾವರಣಗೊಂಡಿದೆ.

ಸತತ 4-5 ವರ್ಷಗಳಿಂದ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಎಸ್.ಡಿ.ಎಮ್.ಸಿ.ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ವನ ಮಹೋತ್ಸವ ಕಾರ್ಯಕ್ರಮದ ಮೂಲಕ 150*130 ಅಡಿ ವಿಸ್ತೀರ್ಣವನ್ನು ಹೊಂದಿರುವ ವಿಶಾಲವಾದ ಶಾಲಾ ಮೈದಾನದಲ್ಲಿ ಕೊಠಡಿಗಳನ್ನು ಹೊರತುಪಡಿಸಿ ಉಳಿದಿರುವ ಮೈದಾನದ ತುಂಬೆಲ್ಲಾ ವಿವಿಧ ಜಾತಿಯ ಸುಮಾರು 160 ಕ್ಕೂ ಹೆಚ್ಚು ಸಸಿಗಳನ್ನು ಸಾಲು ಸಾಲಾಗಿ ನೆಟ್ಟು ಪೋಷಿಸಿಲಾಗುತ್ತಿದೆ. ಈಗ ಶಾಲಾ ಆವರಣದಲ್ಲಿರುವ ಎಲ್ಲಾ ಸಸಿಗಳು ಬೆಳೆದು ಬೃಹತ್ ಮರಗಳಾಗಿವೆ. ಸದ್ಯ ಬರದ ನಾಡಿನಲ್ಲಿ ಈ ಶಾಲಾ ಪರಿಸರ ಒಂದು ಸುಂದರ ವನವಂತಾಗಿದೆ.

ಶಾಲೆಯ ಅಭಿವೃದ್ಧಿ ಹಾಗೂ ಕಾರ್ಯ ಚಟುವಟಿಕೆಗಳನ್ನು ಕೆಲವೊಮ್ಮೆ ರಜಾದಿನಗಳಲ್ಲೂ ನಿಸ್ವಾರ್ಥದಿಂದ ಮಾಡುತ್ತಾ ಬಂದಿದ್ದಾರೆ. ಈ ಸಂಬಂಧ ಶಿಕ್ಷಕ ಮಂಜಪ್ಪನವರ ಕುಟುಂಬದ ಸದಸ್ಯರು ಅವರೊಂದಿಗೆ ಮುನಿಸಿಕೊಂಡಿದ್ದುಂಟು. ಆದರೂ, ಸಹ ಅವರ ವೈಯುಕ್ತಿಕ ಕೆಲಸಗಳನ್ನೂ ಬದಿಗಿಟ್ಟು ಶಾಲೆಯ ಆವರಣದಲ್ಲಿ ಸುಂದರ ಪರಿಸರ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ಮಾಡಿರುವ ಸೇವೆಗೆ ಗ್ರಾಮಸ್ಥರು ಫುಲ್ ಫಿದಾ ಆಗಿದ್ದಾರೆ.

ಸತತ 10 ವರ್ಷಗಳಿಂದ ತಮ್ಮ ಛಲ ಬಿಡದೆ ಮಾಡಿದ ಶ್ರಮ ಶಾಲೆಯ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದೆ. ಇದು ಶಿಕ್ಷಕರಿಗೆ ತೃಪ್ತಿ ಮತ್ತು ಸಮಾಧಾನ ತಂದಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಾ ಖಾಸಗಿ ಶಾಲೆಯನ್ನೇ ಮೀರಿಸುವಂತಿರುವ ಸರ್ಕಾರಿ ಶಾಲೆಯಲ್ಲಿ ಇರುವ ಇವರೊಬ್ಬರೇ ಶಿಕ್ಷಕರು ಇಷ್ಟೆಲ್ಲಾ ಸೇವೆ ಮಾಡುತ್ತಿದ್ದಾರೆ.

ಸಾಧನೆಯ ಗುರಿಯೆಂಬುದು ಅನಂತ ಮತ್ತು ಅಪರಿಮಿತ ಎಂಬಂತೆ ಶಿಕ್ಷಕ ಮಂಜಪ್ಪ ಅವರು, ಸದರಿ ಶಾಲೆಯ 10 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ನಿಸ್ವಾರ್ಥ, ಪ್ರಾಮಾಣಿಕ ಸೇವೆ ಮಾಡಿದ್ದಾರೆ. ಈ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವ, ಉತ್ತಮ ವಾತಾವರಣವನ್ನು ಕಲ್ಪಿಸಿರುವ ಹಾಗೂ ನಿರಂತರ ಪ್ರೋತ್ಸಾಹ, ಸಹಕಾರವನ್ನು ನೀಡುತ್ತಿರುವ ಗ್ರಾಮದ ಹಳೆಯ ವಿದ್ಯಾರ್ಥಿಗಳು, ಶಾಲಾ ಎಸ್.ಡಿ.ಎಂ.ಸಿ. ಸಮುದಾಯ ವರ್ಗದವರಿಗೆ ಹಾಗೂ ಸದಾ ಎಲ್ಲಾ ಕಾರ್ಯಗಳಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *