ಚಿತ್ರದುರ್ಗ: ಜಿಲ್ಲೆಯ ಜುಂಜರಗುಂಟೆ ಗ್ರಾಮದ ಕಾರ್ಯಕ್ರಮದಲ್ಲಿ ನಟ ಅಂಬರೀಶ್ ಪುತ್ರ ನಟ ಅಭಿಷೇಕ್ ಭಾಗಿಯಾಗಿದ್ದರು.
ಮಂಡ್ಯದ ಗಂಡು, ನಟ ಅಂಬರೀಶ್ ಗೂ ಕೋಟೆನಾಡು ಚಿತ್ರದುರ್ಗಕ್ಕೂ ಅವಿನಾಭಾವ ಸಂಬಂಧವಿದೆ. ನಾಗರಹಾವು ಚಿತ್ರದ ಜಲೀಲನಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ದಿವಂಗತ ನಟ ಅಂಬರೀಶ್ ಚಿತ್ರದುರ್ಗದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.
ಹೀಗಾಗಿ ತಮ್ಮ ತಂದೆಯ ಸಂಬಂಧವನ್ನು ಹಾಗೆಯೇ ಉಳಿಸಿಕೊಳ್ಳಲು ಅಂಬರೀಶ್ ಕುಟುಂಬದ ಕುಡಿ ಸಹ ಮುಂದಾಗಿದೆ. ಇಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಜುಂಜರಗುಂಟೆ ಗ್ರಾಮದಲ್ಲಿ ಗ್ರಾಮಸ್ಥರೇ ನಿರ್ಮಾಣ ಮಾಡಿದ್ದ, ಕೆಂಪೇಗೌಡ ಪುತ್ಥಳಿಯನ್ನು ನಟ ಅಭಿಷೇಕ್ ಅಂಬರೀಶ್ ಅನಾವರಣಗೊಳಿಸಿದರು. ಗ್ರಾಮಸ್ಥರ ಆಶಯದಂತೆ ಕೆಂಪೇಗೌಡ ಜಯಂತಿಗೂ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟನೆ ಹಾಗೂ ಪುತ್ಥಳಿ ಅನಾವರಣ ಬಳಿಕ ಅವರ ತಂದೆಯ ದಾಟಿಯಲ್ಲೇ ಮಾತನ್ನಾರಂಭಿಸಿದ ಅಭಿಷೇಕ್ ಅವರಿಗೆ ಅಭಿಮಾನಿಗಳು ನೀವು ಅಂಬಿಯಂತೆ ಉತ್ತಮ ನಟರಾಗಬೇಕು. ಚಿತ್ರರಂಗದ ಮೇರು ನಟರಾಗಬೇಕು ಅಂತ ಕೂಗಿದರು. ಮಾತು ಆರಂಭಿಸುತಿದಂತೆ ಕೇಕೆ ಹಾಕಿ ಹೃದಯ ಸ್ಪರ್ಶಿ ಸ್ವಾಗತ ಕೋರಿದರು. ಆಗ ಅಭಿಮಾನಿಗಳ ಘೋಷಣೆಗೆ ಫಿದಾ ಆದ ಅಭಿಷೇಕ್ ನಾನು ಚಿತ್ರರಂಗದಲ್ಲಿ ನಟನಾಗಿಯೇ ಮುಂದುವರಿಯುತ್ತೇನೆ. ಬೇರೆ ಯಾವ ಕ್ಷೇತ್ರದತ್ತವೂ ತಿರುಗಿ ನೋಡಲ್ಲ ಎಂದು ನೆರೆದಿದ್ದ ಅಭಿಮಾನಿಗಳೊಂದಿಗೆ ಮನದಾಳದ ಮಾತನ್ನು ಹಂಚಿಕೊಂಡರು.
ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಅವರ ತಂದೆ ಅಂಬರೀಶ್ ಅಭಿನಯದ ಮಂಡ್ಯದ ಗಂಡು ಡೈಲಾಗ್ ಹೇಳುವ ಮೂಲಕ ಕೋಟೆನಾಡಿನ ಜನರ ಮನಗೆದ್ದರು. ಈ ವೇಳೆ ಕುಂಚಿಟಿಗ ಗುರುಪೀಠದ ಶಾಂತವೀರ ಶ್ರೀ ಹಾಗೂ ಚಳ್ಳಕೆರೆ ಶಾಸಕ ರಘುಮೂರ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಭಿಷೇಕ್‍ಗೆ ಸಾಥ್ ನೀಡಿದರು.