ಚಿತ್ರದುರ್ಗ: ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವಿಗೆ ಆಕಸ್ಮಿಕ ಬೆಂಕಿ ತಗುಲಿರುವ ಘಟನೆ ಹೊಸದುರ್ಗ ತಾಲೂಕಿನ ನಾಗಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಶಾಶ್ವತ ಬರದನಾಡೆಂಬ ಹಣೆಪಟ್ಟಿ ಹೊತ್ತಿರುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಸಕಾಲಕ್ಕೆ ಮಳೆ ಬಾರದೇ ಬರ ತಾಂಡವವಾಡುತ್ತಿದೆ. ಹೀಗಾಗಿ ಜಿಲ್ಲೆಯ ಹೊಸದುರ್ಗ, ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕುಗಳ ಭಾಗದ ಅನ್ನದಾತರು ಮುಂಜಾಗ್ರತಾ ಕ್ರಮವಾಗಿ ಕಷ್ಟ ಕಾಲಕ್ಕೆ ಜಾನುವಾರುಗಳಿಗೆ ಇರಲಿ ಅಂತ ಶೇಂಗಾ, ಮೆಕ್ಕೆಜೋಳ ಮತ್ತು ರಾಗಿ ಹುಲ್ಲನ್ನು ಸಂಗ್ರಹಿಸಿ ಬಣವೆ ಹಾಕಿ ವರ್ಷಗಟ್ಟಲೇ ಇಡುತ್ತಾರೆ. ಆದರೆ ಆಕಸ್ಮಿಕ ಬೆಂಕಿ ತಗುಲಿ ಜಾನುವಾರುಗಳಿಗಳಿಗಾಗಿ ಸಂಗ್ರಹಿಸಿಡಲಾಗಿದ್ದ ರಾಗಿ ಹಾಗು ಶೇಂಗಾ ಬಣವೆಗಳು ಹೊತ್ತಿ ಉರಿದು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
Advertisement
ರೈತ ತಿಮ್ಮಣ್ಣ ಎಂಬವರಿಗೆ ಸೇರಿದ್ದ ಸಾವಿರಾರು ರೂಪಾಯಿ ಮೌಲ್ಯದ ರಾಗಿ ಹಾಗು ಶೇಂಗಾ ಬಣವೆಗಳಿಗೆ ಬೆಳಗಿನ ಜಾವ ಐದು ಗಂಟೆ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗುಲಿರೋ ಪರಿಣಾಮ ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಬಣವೆ ಬಳಿ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಒಂದೂವರೆ ಗಂಟೆ ತಡವಾಗಿ ಬಂದ ಕಾರಣ ಬಣವೆ ಸುಟ್ಟುಕರಕಲಾಗಿದೆ. ಸಿಬ್ಬಂದಿ ಬೇಗ ಬಂದಿದ್ದರೆ ಸ್ಪಲ್ಪನಾದರೂ ಮೇವು ಉಳಿಸಿಕೊಳ್ಳಬಹುದಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.