ಇದು ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಚಿತ್ರಕಥಾ!

Public TV
3 Min Read
CHITRA KATHA F

ಹೊಸಬರ ತಂಡದ ಮೇಲೆ ಕನ್ನಡ ಪ್ರೇಕ್ಷಕರಲ್ಲಿರೋ ನಂಬಿಕೆ ಮತ್ತೊಮ್ಮೆ ನಿಜವಾಗಿದೆ. ಇದೀಗ ಬಿಡುಗಡೆಯಾಗಿರೋ ಚಿತ್ರಕಥಾ ಹೊಸಾ ತಂಡವೊಂದು ರೂಪಿಸಿರೋ ಚಿತ್ರ. ಆದರೆ ಆರಂಭ ಕಾಲದಿಂದಲೂ ಈ ಸಿನಿಮಾ ಪೋಸ್ಟರ್ ಮುಂತಾದ ಕ್ರಿಯೇಟಿವ್ ಅಂಶಗಳೊಂದಿಗೆ ಪ್ರೇಕ್ಷಕರನ್ನು ಆಕರ್ಶಿಸುತ್ತಲೇ ಸಾಗಿ ಬಂದಿತ್ತು. ಅದೇ ಬಿಸಿಯಲ್ಲಿ ಬಿಡುಗಡೆಯಾಗಿರೋ ಚಿತ್ರಕಥಾ ಕಡೇಯವರೆಗೂ ಗುಟ್ಟು ಬಿಟ್ಟುಕೊಡದ ಗಟ್ಟಿ ಕಥೆಯ ಮೂಲಕ ಪ್ರೇಕ್ಷಕರನ್ನು ಸಂತುಷ್ಟಗೊಳಿಸುವಲ್ಲಿ ಯಶಸ್ವಿಯಾಗಿದೆ.

chitra katha 1 1

ಇದು ಸೈಕಾಲಾಜಿಕಲ್ ಥ್ರಿಲ್ಲರ್ ಜಾನರಿನ ಚಿತ್ರವೆಂದು ಬಿಂಬಿಸಲ್ಪಡುತ್ತಲೇ ಅದರಲ್ಲಿಯೂ ವಿಶೇಷವಾದುದೇನನ್ನೋ ಬಚ್ಚಿಟ್ಟುಕೊಂಡಿರುವಂಥಾ ಸೂಚನೆ ರವಾನಿಸುತ್ತಾ ಬಂದಿದ್ದ ಚಿತ್ರ. ಚಿತ್ರತಂಡ ಜಾಹೀರು ಮಾಡಿದ್ದ ಒಂದೊಂದು ಸಣ್ಣ ಸಣ್ಣ ಸುಳಿವುಗಳೂ ಸಹ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿದ್ದವು. ಒಂದು ಸಶಕ್ತ ತಾರಾಗಣದೊಂದಿಗೆ, ಪ್ರತಿಯೊಂದು ಹೆಜ್ಜೆಯಲ್ಲಿಯೂ ಹೊಸತನದ ಸುಳಿವಿನೊಂದಿಗೆ ಸಾಗಿ ಬಂದಿದ್ದ ಚಿತ್ರಕಥಾದ ನವೀನ ಶೈಲಿಯ ಕಥೆ, ನಿರೂಪಣಾ ಶೈಲಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇಡೀ ಚಿತ್ರ ಮೂಡಿ ಬಂದಿರೋ ರೀತಿಯೇ ಅದಕ್ಕೆ ತಕ್ಕುದಾಗಿದೆ.

Chitra katha Yashaswi Baaladitya

ಇದು ಓರ್ವ ಕಲಾವಿದ ಮತ್ತು ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸು ಕಟ್ಟಿಕೊಂಡಿರೋ ಹುಡುಗನೊಬ್ಬನ ಸುತ್ತಾ ಸುತ್ತುವ ಕಥಾಹಂದರ ಹೊಂದಿರುವ ಚಿತ್ರ. ಇಲ್ಲಿ ಸುಜಿತ್ ರಾಥೋಡ್ ರಾಣಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಣಾ ಚಿತ್ರರಂಗದ ಬಗ್ಗೆ ಬಣ್ಣದ ಕನಸುಗಳನ್ನು ತುಂಬಿಕೊಂಡು ನಿರ್ದೇಶಕನಾಗೋ ಆಸೆಯಿಂದ ಜೀವಿಸೋ ಹುಡುಗ. ಆದರೆ ಈ ಹಾದಿಯಲ್ಲಿ ಎಲ್ಲ ಪ್ರಯತ್ನಗಳಾಚೆಗೂ ನಿರಾಸೆಗಳೇ ಆತನ ಕೈ ಹಿಡಿಯುತ್ತವೆ. ತಾನು ನಿರ್ದೇಶಕನಾಗಲು ಕಾಲ ಕೂಡಿ ಬಂದಿಲ್ಲವಲ್ಲಾ ಎಂಬ ಚಿಂತೆಯಲ್ಲಿರುವಾಗಲೇ ಪ್ರೀತಿಯ ಹುಡುಗಿಯೂ ಕೈಬಿಟ್ಟು ನಡೆದು ಹೋಗುತ್ತಾಳೆ. ಆ ಕ್ಷಣಗಳಲ್ಲಿ ರಾಣಾನನ್ನು ಇಡಿಯಾಗಿ ತಬ್ಬಿ ನಿಲ್ಲೋದು ಗಾಢವಾದ ಹತಾಶೆ ಮಾತ್ರ.

chitra katha aa

ಇಂಥಾ ಸ್ಟೇಜಿನಲ್ಲಿರೋ ಹುಡುಗರಿಗೆ ಬಾರಿನ ಸ್ಟೆಪ್ಪುಗಳೇ ಮೊದಲನೆಯದಾಗಿ ಸ್ವಾಗತಿಸುತ್ತವೆ. ರಾಣಾ ಕೂಡಾ ಹತಾಶೆಯ ಮಡುವಿಗೆ ಬಿದ್ದು ಬಾರು ಸೇರಿಕೊಳ್ಳುತ್ತಾನೆ. ಇಂಥಾ ಘಳಿಗೆಯಲ್ಲಿಯೇ ಕಲಾವಿದನೊಬ್ಬ ಬಿಡಿಸಿದ ಚಿತ್ರ ಅಘೋರಿಯ ರೂಪದಲ್ಲಿ ಆತನನ್ನು ಕಾಡಲು ಶುರುವಿಡುತ್ತದೆ. ಇದು ಭ್ರಮೆಯಾ ವಾಸ್ತವವಾ ಎಂಬ ಸತ್ಯವನ್ನು ನಶೆಯಲ್ಲಿ ತಡಕಾಡುತ್ತಿರುವಾಗಲೇ ಸಾಕ್ಷಾತ್ತು ಅಘೋರಿಯೇ ರಾಣಾನೆದುರು ಪ್ರತ್ಯಕ್ಷವಾಗುತ್ತಾನೆ. ಕೊಲ್ಲಲೂ ಮುಂದಾಗುತ್ತಾನೆ. ನಂತರ ರಾಣಾ ಹೋದಲ್ಲಿ ಬಂದಲ್ಲಿ ಕೊಲ್ಲಲು ಹವಣಿಸೋ ಅಘೋರಿಯದ್ದೇ ಕಾಟ. ರಾಣಾನನ್ನು ಕಾಡುತ್ತಿರೋ ಅಘೋರಿಯ ಮೂಲ ಹುಡುಕುತ್ತಾ ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಸುಧಾರಾಣಿ ಎಂಟ್ರಿ ಕೊಡುತ್ತಾರೆ. ಆ ನಂತರದ್ದು ನಿಜಕ್ಕೂ ರೋಚಕ ಜರ್ನಿ.

chitra katha

ಹಾಗಾದರೆ ಈ ಅಘೋರಿಯ ಚಿತ್ರ ಬಿಡಿಸಿದ ಕಲಾವಿದನ್ಯಾರು, ಆ ಕಲಾವಿದನಿಗೂ ರಾಣಾಗೂ ಇರುವ ನಂಟ್ಯಾವುದು, ಯಾಕೆ ಆ ಅಘೋರಿ ನಾಯಕನ ಬೆಂಬಿದ್ದು ಕೊಲ್ಲಲು ಹವಣಿಸುತ್ತಾನೆಂಬ ಪ್ರಶ್ನೆಗಳಿಗೆ ಕ್ಲೈಮ್ಯಾಕ್ಸ್ ವರೆಗೂ ಕುತೂಹಲ ಬಿಗಿಯಾಗಿಟ್ಟುಕೊಳ್ಳುವ ಉತ್ತರವೊಂದು ಚಿತ್ರಕಥಾದಲ್ಲಿದೆ. ಮತ್ತದು ಮಜವಾದ ಅನುಭವಗಳನ್ನೇ ನೋಡುಗರೆಲ್ಲರಿಗೂ ಕಡೆಯವರೆಗೂ ಕಟ್ಟಿ ಕೊಡುತ್ತದೆ. ಆ ಅನುಭವ ಕೂಡಾ ಸಾಮಾನ್ಯ ಸೈಕಾಲಾಜಿಕಲ್ ಥ್ರಿಲ್ಲರ್ ಕಥನಗಳಿಗಿಂತ ಭಿನ್ನವಾಗಿದೆ ಎಂಬುದೇ ಚಿತ್ರಕಥಾ ಆಪ್ತವಾಗೋದರ ಹಿಂದಿರುವ ಅಸಲೀ ಗುಟ್ಟು.

chitra katha b

ಇದು ಯಶಸ್ವಿ ಬಾಲಾದಿತ್ಯ ನಿರ್ದೇಶನದ ಮೊದಲ ಚಿತ್ರ. ಆದರೆ ಅವರು ಇಡೀ ಚಿತ್ರವನ್ನು ಪಳಗಿದ ನಿರ್ದೇಶಕನಂತೆ ನಿಭಾಯಿಸಿದ ರೀತಿ ಇಷ್ಟವಾಗುವಂತಿದೆ. ಇಲ್ಲಿ ಒಂದು ಹಂತದಲ್ಲಿ ಪಾತ್ರಗಳೇ ವಿಹ್ವಲಗೊಳ್ಳುತ್ತವೆ. ಗೊಂದಲಕ್ಕೆ ಬೀಳುತ್ತವೆ. ಚೂರೇ ಚೂರು ಆಚೀಚೆಯಾದರೂ ಅದು ಪ್ರೇಕ್ಷಕರಿಗೂ ದಾಟಿಕೊಳ್ಳುವ ಅಪಾಯವೂ ಇದ್ದೇ ಇತ್ತು. ಆದರೆ ಅದನ್ನೂ ಕೂಡಾ ಕುತೂಹಲವಾಗಿ ಮಾರ್ಪಾಟು ಮಾಡಿರೋದು ಯಶಸ್ವಿ ಬಾಲಾದಿತ್ಯರ ಟ್ಯಾಲೆಂಟಿಗೆ ಸಾಕ್ಷಿಯಂತಿದೆ. ಸುಧಾರಾಣಿ, ಬಿ. ಜಯಶ್ರೀ, ದಿಲೀಪ್ ರಾಜ್, ತಬಲಾ ನಾಣಿ, ಅನುಷಾ ರಾವ್ ಸೇರಿದಂತೆ ಎಲ್ಲ ಕಲಾವಿದರೂ ತಂತಮ್ಮ ಪಾತ್ರಗಳನ್ನು ಪರಿಣಾಮಕಾರಿಯಾಗಿಸಿದ್ದಾರೆ. ಸುಜಿತ್ ರಾಥೋಡ್ ಕೂಡಾ ಇದು ಮೊದಲ ಚಿತ್ರವೆಂಬುದನ್ನೇ ಮರೆಮಾಚುವಂಥಾ ಮಾಗಿದ ನಟನೆ ಕೊಟ್ಟಿದ್ದಾರೆ.

chitra katha a

ಅಂತೂ ಚಿತ್ರಕಥಾ ಪ್ರತೀ ಪ್ರೇಕ್ಷಕರಲ್ಲಿಯೂ ವಿಭಿನ್ನ ಅನುಭೂತಿಯೊಂದನ್ನು ಮೂಡಿಸಿಸುತ್ತಲೆ. ಖುದ್ದು ನೋಡುಗರೇ ಭ್ರಮ ಮತ್ತು ವಾಸ್ತವದ ನಡುವಿನ ತೊಳಲಾಟದಲ್ಲಿ ಅರೆಕ್ಷಣ ಕಂಗಾಲಾಗುವಂತೆ ಮಾಡುವಷ್ಟು ಸಶಕ್ತವಾಗಿ ಇಲ್ಲಿನ ದೃಶ್ಯಗಳು ಮೂಡಿ ಬಂದಿವೆ. ಈ ಸಿನಿಮಾವನ್ನು ನೋಡುವ ಮೂಲಕ ಅಂಥಾ ವಿಶಿಷ್ಟ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

ರೇಟಿಂಗ್: 3.5/5

Share This Article
Leave a Comment

Leave a Reply

Your email address will not be published. Required fields are marked *