ಬೆಂಗಳೂರು: ಚಿರಂಜೀವಿ ಸರ್ಜಾ `ಸಿಂಗ’ ಚಿತ್ರ ಇದೇ ತಿಂಗಳ ಹತ್ತೊಂಬತ್ತರಂದು ಬಿಡುಗಡೆಗೆ ರೆಡಿಯಾಗಿದೆ. ಹಾಡು, ಟ್ರೈಲರ್, ಪೋಸ್ಟರ್ ಸೇರಿದಂತೆ ಎಲ್ಲದರಲ್ಲಿಯೂ ಹೊಸ ಕಳೆ ತುಂಬಿಕೊಂಡಿರೋ ಈ ಚಿತ್ರಕ್ಕೆ ಪಾಸಿಟಿವ್ ಟಾಕ್‍ನ ಒಡ್ಡೋಲಗ ಭರ್ಜರಿ ಸಾಥ್ ನೀಡುತ್ತಿದೆ. ಟ್ರೈಲರ್ ಮುಂತಾದ ಬಿಡುಗಡೆ ಪೂರ್ವ ಚಟುವಟಿಕೆಗಳ ಮೂಲಕ ಚರ್ಚೆಗೆ ಕಾರಣವಾಗೋ ಚಿತ್ರಗಳು ಗೆಲುವು ಕಂಡ ಅದೆಷ್ಟೋ ಉದಾಹರಣೆಗಳಿವೆ. ಈ ಫಾರ್ಮುಲಾ ಆಧರಿಸಿ ಹೇಳೋದಾದರೆ ಸಿಂಗ ಚಿತ್ರದ ಗೆಲುವು ನಿಚ್ಚಳವಾದಂತಿದೆ!
ಅದೇನೇ ಹೈಪು ಸೃಷ್ಟಿಯಾದರೂ ಚಿತ್ರವೊಂದು ಗೆಲ್ಲೋದರಲ್ಲಿ ಗಟ್ಟಿ ಕಥೆಯದ್ದು ಸಿಂಹಪಾಲು. ಸಿಂಗ ಚಿತ್ರದ ಕಥೆಯೂ ಅಷ್ಟೇ ಅದ್ಭುತವಾಗಿದೆಯಂತೆ. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ವಿಶಿಷ್ಟವಾದ ಟೇಸ್ಟ್ ಹೊಂದಿರುವವರು ಚಿರಂಜೀವಿ ಸರ್ಜಾ. ಅವರೇ ಈ ಕಥೆ ಕೇಳಿ ಆರಂಭದಲ್ಲಿಯೇ ಥ್ರಿಲ್ ಆಗಿದ್ದರಂತೆ. ಮಾಸ್ ಸೇರಿದಂತೆ ಎಲ್ಲ ಅಂಶಗಳಿಂದ ಮೈ ಕೈ ತುಂಬಿಕೊಂಡಿರೋ ಈ ಕಥೆಯ ಸೊಗಸು ಕಂಡೇ ವಿಶೇಷ ಆಸಕ್ತಿ ವಹಿಸಿ ಚಿರು ಈ ಚಿತ್ರವನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಸಿಂಗ ತಮ್ಮ ವೃತ್ತಿ ಬದುಕಿಗೆ ಹೊಸ ದಿಕ್ಕಾಗಲಿದೆ ಎಂಬ ಗಾಢ ವಿಶ್ವಾಸವೂ ಅವರಲ್ಲಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಸಿನಿಮಾದ ಶ್ಯಾನೆ ಟಾಪಗೌಳೆ ಎಂಬ ಹಾಡೊಂದು ಭಾರೀ ಫೇಮಸ್ ಆಗಿ ಟ್ರೆಂಡ್ ಸೆಟ್ ಮಾಡಿದೆ. ಈ ಹಾಡಿನ ಅದ್ಧೂರಿತನ ಇಡೀ ಚಿತ್ರದಲ್ಲಿಯೂ ತುಂಬಿಕೊಂಡಿದೆಯಂತೆ. ನಿರ್ದೇಶಕರಾದ ವಿಜಯ್ ಕಿರಣ್ ಅಷ್ಟೊಂದು ಕಾಳಜಿಯಿಂದ, ಎಲ್ಲ ಪ್ರೇಕ್ಷಕ ವರ್ಗವನ್ನೂ ಸಂತುಷ್ಟಗೊಳಿಸುವ ಇರಾದೆಯಿಂದಲೇ ಸಿಂಗನನ್ನು ಶೃಂಗರಿಸಿದ್ದಾರೆ. ಯಶಸ್ವಿ ನಿರ್ಮಾಪಕ ಉದಯ್ ಕೆ ಮೆಹ್ತಾ ಅಂಥಾದ್ದೇ ಕಾಳಜಿಯಿಂದ ಪ್ರತಿ ಹೆಜ್ಜೆಯಲ್ಲಿಯೂ ಸಿಂಗನನ್ನು ಪೊರೆದಿದ್ದಾರೆ. ಇಂಥಾ ಪ್ರೀತಿಯಿಂದಲೇ ಪೊಗದಸ್ತಾಗಿ ಮೂಡಿ ಬಂದಿರೋ ಈ ಚಿತ್ರ ಇದೇ ಹತ್ತೊಂಬತ್ತರಂದು ನಿಮ್ಮ ಮುಂದೆ ಬರಲಿದೆ.