ಸ್ಯಾಂಡಲ್‍ವುಡ್ ಪ್ರಿನ್ಸ್, ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ್’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೇ 12ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ಅಭಿಮಾನಿಗಳಿಗೆ ಸಂತಸ ನೀಡಿದೆ.
ಇದೊಂದು ಆ್ಯಕ್ಷನ್ ಕಂ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾವಾಗಿದೆ. ಚಿರು ಈಗಾಗಲೇ ‘ಸಿಂಗ’ ಮತ್ತು ‘ಖಾಕಿ’ಯಲ್ಲಿ ಅಬ್ಬರಿಸಿದ್ದು, ‘ಶಿವಾರ್ಜುನ’ ಮೇಲೆ ಪ್ರೇಕ್ಷಕರಿಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಜೊತೆಗೆ ಈ ಸಿನಿಮಾದಲ್ಲಿ ಮತ್ತೊಂದು ವಿಶೇಷತೆಯನ್ನು ಕಾಣಬಹುದು. ಸಿನಿಮಾ ಆ್ಯಕ್ಷನ್ ಕಂ ಫ್ಯಾಮಿಲಿ ಸೆಂಟಿಮೆಂಟೇ ಇರಬಹುದು ಆದ್ರೆ ಶಿವನ ವಿಚಾರ ತಾಂಡವವಾಡುತ್ತಿದೆ. ಟೈಟಲ್ ‘ಶಿವಾರ್ಜುನ’ ನಿರ್ಮಾಪಕರು ಶಿವಾರ್ಜುನ್, ನಿರ್ದೇಶಿಸಿರುವವರು ಕೂಡ ಶಿವತೇಜಸ್. ಹೀಗಾಗಿ ಸಿನಿಮಾದ ಮೇಲೆ ಶಿವನ ಆಶೀರ್ವಾದ ಕೊಂಚ ಹೆಚ್ಚೇ ಇರುವಂತಾಗಿದೆ.
ಕಂಪ್ಲೀಟ್ ಆ್ಯಕ್ಷನ್ ಸಿನಿಮಾದಲ್ಲಿ ಮಾಡಬೇಕೆಂಬ ಆಸೆಯಿದ್ದ ಚಿರುಗೆ ಈ ಸಿನಿಮಾ ಆ ಕನಸನ್ನು ನನಸು ಮಾಡಿದೆಯಂತೆ. ಹೀಗಾಗಿ ‘ಶಿವಾರ್ಜುನ’ನ ಬಗ್ಗೆ ಚಿರು ಹೇಳೋದು ಹೀಗೆ, ‘ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಇಂಥದ್ದೊಂದು ಸಿನಿಮಾ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ಈ ಚಿತ್ರ ನನಗೆ ಸ್ಪೆಷಲ್. ಅದು ನಾನು ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ಅಲ್ಲ. ನಿರ್ಮಾಪಕ ಶಿವಾರ್ಜುನ್ ಅಂಕಲ್ ಮಾಡುತ್ತಿರುವ ಚಿತ್ರ ಎಂಬುದು ವಿಶೇಷ. ಅವರು ನಮ್ಮ ಫ್ಯಾಮಿಲಿಯವರು. ಅವರಿಗಾಗಿ ಮಾಡಿದ ಚಿತ್ರವಿದು. ಹಾಗಾಗಿ, ಈ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ಕೊಡಬೇಕು. ಪ್ರತಿಭಾವಂತರು ಸೇರಿ ಮಾಡಿರುವ ಚಿತ್ರವಿದು. ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ’ ಎಂದಿದ್ದಾರೆ.
ಶಿವ ತೇಜಸ್ ಕಥೆ – ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಶಿವಾರ್ಜುನ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿದ್ದಾರೆ. ಅಮೃತಾ ಅಯ್ಯಂಗಾರ್ ಮತ್ತು ಅಕ್ಷತಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕವಿರಾಜ್, ಯೋಗರಾಜ್ ಭಟ್ ಮತ್ತು ವಿ ನಾಗೇಂದ್ರ ಪ್ರಸಾದರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡುಗಳಿಗೆ ಸುರಾಗ್, ಸಾಧು ಕೋಕಿಲಾ ಸಂಗೀತ ನೀಡಿದ್ದಾರೆ. ಹೆಚ್.ಸಿ.ವೇಣು ಛಾಯಾಗ್ರಹಣ ಮತ್ತು ಕೆ.ಎಂ ಪ್ರಕಾಶ್ ಸಂಕಲನವಿದೆ.