ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದ (Chinnaswamy Stampede) ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಬೆಂಗಳೂರು (Bengaluru) ನಗರ ಜಿಲ್ಲಾಧಿಕಾರಿ ಜಗದೀಶ್ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ಕಾಲ್ತುಳಿತಕ್ಕೆ ಆರ್‌ಸಿಬಿಯೇ (RCB) ಕಾರಣ ಎಂದು ಉಲ್ಲೇಖಿಸಲಾಗಿದೆ. ಆರ್‌ಸಿಬಿ ಮ್ಯಾನೇಜ್ಮೆಂಟ್ ಪೊಲೀಸರ ಅನುಮತಿ ಪಡೆಯದೇ ಫ್ರೀ ಪಾಸ್ ಎಂದು ಘೋಷಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಘಟನೆಗೆ ನಾಲ್ವರು ಕಾರಣರಾಗಿದ್ದಾರೆ. ನಾಲ್ವರಲ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್ ನಿರ್ಧಾರವೇ ದೊಡ್ಡ ತಪ್ಪು. ಮೊದಲನೇ ಸ್ಥಾನದಲ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್, ಎರಡನೇ ಸ್ಥಾನದಲ್ಲಿ ಡಿಎನ್‌ಎ , ಮೂರನೇ ಸ್ಥಾನದಲ್ಲಿ ಕೆಎಸ್‌ಸಿಎ ಹಾಗೂ ನಾಲ್ಕನೇ ಸ್ಥಾನದಲ್ಲಿ ಪೊಲೀಸರದ್ದು ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕೇಸ್ – ಪೊಲೀಸರನ್ನ ಸಂಪರ್ಕಿಸದೇ ವಿಕ್ಟರಿ ಪೆರೇಡ್ ಘೋಷಿಸಿದ್ದ RCB ಫ್ರಾಂಚೈಸಿ
ಏನಿದು ಪ್ರಕರಣ?
ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಆದರೆ, ಆರ್‌ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ದುರಂತ ಸಂಭವಿಸಿದೆ. 10ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿ ಸೂತಕವಾಗಿ ಆಗಿಬಿಟ್ಟಿದೆ. ಪಂಜಾಬ್ ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿಯೇ ದೀಪಾವಳಿಯಂಥಹ ಸಂಭ್ರಮ ಇತ್ತು. ಇವತ್ತು ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.
ಇವತ್ತು ದಿಢೀರನೆ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಅಭಿಮಾನಿಗಳ ಸುನಾಮಿಯೇ ಸೃಷ್ಟಿ ಆಯ್ತು… ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಫ್ಯಾನ್ಸ್ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿ ಸಾಗರ ತಡೆಯಲು ಪೊಲೀಸರು ಹೈರಾಣಾಗಿ ಹೋದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸುನಾಮಿ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ನಡೀತು. ಒಬ್ಬರ ಮೇಲೋಬ್ಬರು ಬಿದ್ದರು, ಉಸಿರಾಡೋಕೂ ಕೂಡ ಸಾಧ್ಯವಾಗಲಿಲ್ಲ. ತಕ್ಷಣವೇ ಹತ್ತಿರದ ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆ (ಮಲ್ಯ ರಸ್ತ್ರೆ), ಮಣಿಪಾಲ್‌ಗೆ ದಾಖಲಿಸಲಾಯಿತು. ಆದರೆ, ಬೌರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್ – ತನಿಖಾ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ