ಕಲಬುರಗಿ: ನನ್ನನ್ನು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ ಎಂದು ಚಿಂಚೋಳಿಯ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಹೇಳಿದ್ದಾರೆ.
ಕಳೆದ 15 ದಿನಗಳಿಂದ ಕಾಂಗ್ರೆಸ್ಸಿನಿಂದ ದೂರವಾಗಿ ಮುಂಬೈಯಲ್ಲಿ ಕುಳಿತಿದ್ದ ಉಮೇಶ್ ಜಾಧವ್ ಯಾರ ಕೈಗೆ ಸಿಕ್ಕಿರಲಿಲ್ಲ. ಸ್ವಗ್ರಾಮ ಬೆಡಸೂರಿನಲ್ಲಿ ಜಾಧವ್ ತಂದೆ ಗೋಪಾಲ್ ಜಾಧವ್ ಅವರ ಪುಣ್ಯತಿಥಿ ಕಾರ್ಯಕ್ರಮ ಗುರುವಾರ ನಡೆಯಲಿರುವ ಹಿನ್ನೆಲೆಯಲ್ಲಿ ಮುಂಬೈನಿಂದ ಬುಧವಾರ ರಾತ್ರಿ ಮರಳಿದ್ದಾರೆ.
Advertisement
ಉಮೇಶ್ ಜಾಧವ್ ತಂದೆಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಬೆಂಬಲಿಗರ ಸಭೆ ನಡೆಸಿ ಬಿಜೆಪಿ ಸೇರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಗೂ ಗೈರಾಗಿ ಕುತೂಹಲ ಮೂಡಿಸಿರುವ ಜಾಧವ್ ನಡೆ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ.
Advertisement
Advertisement
ಪುಣ್ಯತಿಥಿಯಲ್ಲಿ ಭಾಗಿಯಾಗುವುದಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಮಾರಾಟವಾಗಿದ್ದೇನೆ ಎಂದು ಹೇಳಿ ಕಾಂಗ್ರೆಸ್ ನನ್ನ ಚಾರಿತ್ರ್ಯವಧೆ ಮಾಡುತ್ತಿದೆ. ಕಾಂಗ್ರೆಸ್ಸಿನವರಿಗೆ ಬೇರೆ ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡಲು ಧಮ್ ಇಲ್ಲ. ರಮೇಶ್ ಜಾರಕಿಹೋಳಿ ಸೇರಿದಂತೆ ಅನೇಕ ಶಾಸಕರ ಮನೆ ಮುಂದೆ ಇವರು ಪ್ರತಿಭಟನೆ ಮಾಡಲಿ ಎಂದು ಸವಾಲು ಹಾಕಿದರು.
Advertisement
ಕಾಂಗ್ರೆಸ್ಸಿನಲ್ಲಿ ನನ್ನಂತವರು ಇರುವುದು ಬಹಳ ಕಡಿಮೆ. ಈಗ ನನಗೆ ಮಂತ್ರಿ ಸ್ಥಾನ ನೀಡಿದರೂ ನನಗೆ ಬೇಕಾಗಿಲ್ಲ. ನನಗೆ ಅಭಿವೃದ್ಧಿ ಕೆಲಸಗಳು ಆಗಬೇಕು. ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಸಮಸ್ಯೆಗಳು ಇವೆ ಎಂದು ನೇರವಾಗಿ ಹೇಳಿದರು.
ಪ್ರಿಯಾಂಕ್ ವಿರುದ್ಧ ಕಿಡಿ: ಕಲಬುರಗಿ ಜಿಲ್ಲೆಯಲ್ಲಿ ನಡೆದಿದ್ದ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ನನ್ನ ಕ್ಷೇತ್ರದಿಂದ ಬಹಳ ಜನರನ್ನು ಕರೆದುಕೊಂಡು ಹೋಗಿದ್ದೇನೆ. ನಾನು ದುಡ್ಡು ಮಾಡುವ ಹಾಗಿದ್ದರೆ ವೈದ್ಯ ವೃತ್ತಿಯಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಇರುತ್ತಿದ್ದೆ. ಈವಾಗ ಐದು ಲಕ್ಷ ರೂ. ಸಂಬಳ ಇರುತಿತ್ತು. ಶಾಸಕಾಂಗ ಸಭೆ ಕರೆಯಲು ಅಷ್ಟು ತುರ್ತು ಏನಿತ್ತು? ಶಾಸಕಾಂಗ ಸಭೆಯ ಅಜೆಂಡಾಗಳು ಏನು ಇರಲಿಲ್ಲ. ಒಂದು ವಾರ ಟೈಮ್ ಕೊಡಬೇಕಿತ್ತು ಹಾಜರಾಗುತ್ತಿದ್ದೆ. ಏಕಾಏಕಿ ಕರೆದರೆ ಬರುವುದಕ್ಕೆ ನಾನು 700 ಕಿ.ಮೀ ದೂರದಲ್ಲಿ ಇದ್ದೆ. ಕಾಂಗ್ರೆಸ್ ಪಕ್ಷದವರೇ ನನ್ನನ್ನು ಹೊರ ಹಾಕಲು ಮುಂದಾಗಿದ್ದಾರೆ. ನನ್ನನ್ನು ಮಂತ್ರಿ ಮಾಡಿ ಉಸ್ತುವಾರಿ ಸಚಿವ ಸ್ಥಾನ ಕೊಟ್ಟು ನೋಡಲಿ. ಹೇಗೆ ಕೆಲಸ ಮಾಡುತ್ತೇನೆ ಎನ್ನುವುದನ್ನು ನಾನು ತೋರಿಸುತ್ತೇನೆ. ಆರು ತಿಂಗಳು ಕಳೆದರೂ ಕೂಡ ಉಸ್ತುವಾರಿ ಸಚಿವರು ಏನು ಮಾಡಿಲ್ಲ. ನನಗೆ ಅಭಿವೃದ್ಧಿ ಕೆಲಸಗಳು ಆಗಬೇಕು ಅಷ್ಟೇ ಎಂದರು.
ಕೆಲ್ಸ ಆಗ್ತಿಲ್ಲ: ನಾನು ದಿನ 20 ಗಂಟೆ ಕೆಲಸ ಮಾಡುವುದು ನಿಮಗೆ ಗೊತ್ತಿದೆ. ನನ್ನ ಇತಿಹಾಸದಲ್ಲೇ ಇದೂವರೆಗೂ ನಾನು ಕ್ಷೇತ್ರ ಬಿಟ್ಟಿಲ್ಲ. ದೊಡ್ಡ ಕನಸು ಇಟ್ಟುಕೊಂಡು ಮತದಾರರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ನನ್ನ ವೈದ್ಯ ವೃತ್ತಿ ಬಿಡಿಸಿದವರು ಮಾಜಿ ಸಿಎಂ ಧರ್ಮಸಿಂಗ್. ವೈದ್ಯ ವೃತ್ತಿ ಬಿಡಿಸಿ ನೀನು ರಾಜಕೀಯಕ್ಕೆ ಬರಬೇಕು. ಜೀವನದಲ್ಲಿ ರಿಸ್ಕ್ ತಗೋಬೇಕು ನೀನು ಅಂತಾ ಹೇಳಿ ಕರೆದು ಟಿಕೆಟ್ ನೀಡಿದ್ದರು. ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈ ಬಾರಿ ಇನ್ನು ಹೆಚ್ಚಿನ ನೀರಿಕ್ಷೆಯನ್ನು ಇಟ್ಟಿದ್ದ ಜನ ಕಲಬುರಗಿಯಲ್ಲಿ ಅತಿ ಹೆಚ್ಚು ಅಂತರದಿಂದ ಗೆಲ್ಲಿಸಿದ್ದಾರೆ. ಈಗ ಕೆಲಸ ಮಾಡುವ ವಯಸ್ಸು. ಮುನಗೋಳಿ ಅವರ ಹಾಗೆ ವಯಸ್ಸಾದ ಮೇಲೆ ಸಚಿವನಾದ್ರೆ ಏನು ಪ್ರಯೋಜನವಿಲ್ಲ. ಚಿಂಚೋಳಿಯಲ್ಲಿ ಶುಗರ್ ಫ್ಯಾಕ್ಟರಿ ನಿರ್ಮಿಸುವ ಯೋಜನೆ ಇತ್ತು. ಆದರೆ ವಿಧಾನಸೌಧದಲ್ಲಿ ದೇಶಪಾಂಡೆ ಬಿಟ್ಟರೆ ಬೇರೆ ಯಾರೂ ಕೈಗೆ ಸಿಗುವುದಿಲ್ಲ. ಸಮ್ಮಿಶ್ರ ಸರ್ಕಾರದ ಕೆಲಸ ನನಗೆ ಇಷ್ಟವಾಗ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸಮಯ ಬಂದಾಗ ಎಲ್ಲವನ್ನು ಬಿಡಿಸಿ ಹೇಳುತ್ತೇನೆ ಎಂದು ತಿಳಿಸಿದರು.
ಚರ್ಚಿಸಿ ನಿರ್ಧಾರ: ಕಾಂಗ್ರೆಸ್ಸಿನಲ್ಲಿ ವಾತಾವರಣ ಕೆಡುತ್ತಿದೆ. ಯಾರ ಯಾರ ಕ್ಷೇತ್ರಕ್ಕೆ ಮಂತ್ರಿಗಳು ಎಷ್ಟು ಜನ ಬಂದಿದ್ದಾರೆ ಅಂತಾ ನಿಮಗೆ ಗೊತ್ತು. ನನ್ನ ಕ್ಷೇತ್ರದ ಮತದಾರರ ಬಳಿ ಚರ್ಚೆ ಮಾಡಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಸದ್ಯ ನನಗೆ ಬೇಸರ ಆಗಿದ್ದ ಹಿನ್ನೆಲೆಯಲ್ಲಿ ನಮ್ಮ ಸಮುದಾಯ ಮಹಾರಾಜರ ಬಳಿ ಹೋಗಿದ್ದೆ. ನಾನು ಏನು ನಿರ್ಣಯ ತೆಗೆದುಕೊಂಡರು ಜನರು ಕೂಡ ಬೆಂಬಲಿಸುವುದಾಗಿ ಹೇಳಿದ್ದಾರೆ. ಬಿಜೆಪಿಗೆ ಹೋಗುವುದರ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಜಾಧವ್ ಬಿಜೆಪಿಗೆ ಹೊದ್ರೆ ಹೋಗಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇಂತಹ ಹೇಳಿಕೆಗಳಿಂದ 544 ಸೀಟುಗಳಿಂದ 44 ಸೀಟುಗಳಿಗೆ ತಲುಪಿದ್ದಾರೆ. ನಮಗೆ ಹೋಗಲಿ ಅಂತಾ ಬಿಟ್ಟು ಬಿಟ್ಟಿದ್ದರೆ ನಾನು ಹೋಗುತ್ತೇನೆ. ಎಲ್ಲಾ ಸಮಾಜದವರ ಜೊತೆಗೆ ಕರೆದುಕೊಂಡು ಹೋಗಬೇಕು. ಒಂದು ವೇಳೆ ಖರ್ಗೆಯವರ ಇದೆ ಧೋರಣೆ ಮುಂದುವರಿದಿದ್ದರೆ ಕಲಬುರಗಿ ಲೋಕಸಭೆಯನ್ನು ಕಳೆದುಕೊಳ್ಳಬೇಕಿತ್ತು. ಪ್ರಿಯಾಂಕ್ ಖರ್ಗೆ ಕಲಬುರಗಿ ಉಸ್ತುವಾರಿ ಸಚಿವ ಆದ ಮೇಲೆ ಕೈಗೆ ಸಿಗ್ತಿಲ್ಲ ಎಂದು ಅಸಮಾಧಾನವನ್ನು ಹೊರ ಹಾಕಿದರು.
ಫೋಟೋಗೆ ಸ್ಪಷ್ಟನೆ: ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಅವರ ಜೊತೆ ಇರುವ ಫೋಟೋಗೆ ಸಂಬಂಧಿಸಿದ ಪ್ರತಿಕ್ರಿಯಿಸಿದ ಅವರು, ಅದು ಮುಂಬೈ ರೆಸಾರ್ಟಿನಲ್ಲಿರುವ ಫೋಟೋ ಅಲ್ಲ. ಡಾಕ್ಟರ್ ಗಳ ಜೊತೆ ಇದ್ದಾಗ ತೆಗೆದ ಫೋಟೋ ಇದು. ಕಳೆದ ಆರು ತಿಂಗಳಿನಿಂದ ಬಿಜೆಪಿಗೆ ಹೋಗುವ ವಿಚಾರದ ಬಗ್ಗೆ ಚರ್ಚೆ ಆಗುತ್ತಿದೆ. ಆಗ ಯಾರು ನನ್ನ ಬಳಿ ಬಂದು ಜಾಧವ್ ಸಮಸ್ಯೆ ಏನು ಅಂತಾ ಕೇಳಿಲ್ಲ. ಪಕ್ಷದ ನಾಯಕರ ಮೇಲೆ ಸಿಟ್ಟಾಗಿ ಹೋಗಿದ್ದೆ. ಹೋಗುವ ಸಮಯದಲ್ಲಿ ನಾನು ಮೊಬೈಲ್ ಜೊತೆಗೆ ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.
https://www.youtube.com/watch?v=_-Zst6VoNRY
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv