ಬೆಳಗಾವಿ(ಚಿಕ್ಕೋಡಿ): ಕೊರೊನಾ ವೈರಸ್ ಭೀತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿಗೂ ಕೊರೊನಾ ಬಿಸಿ ತಟ್ಟಿದೆ.
ಚಿಂಚಲಿಯ ಮಾಯಕ್ಕಾದೇವಿಯ ದರ್ಶನವನ್ನು ಇಂದಿನಿಂದ ಮಾರ್ಚ್ 31ರವರೆಗೂ ಸ್ಥಗಿತಗೊಳಿಸಲಾಗಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನವನ್ನು ಬಂದ್ ಮಾಡಿದೆ. ಮಾಯಕ್ಕಾದೇವಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಆರಾದ್ಯ ದೇವತೆಯಾಗಿದ್ದು, ದೇವಿಯ ದರ್ಶನ ಪಡೆಯಲು ದಿನನಿತ್ಯ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತಿದ್ದರು.
Advertisement
Advertisement
ಕೊರೊನಾ ಭೀತಿಯಿಂದ ಮಾರ್ಚ 31ರವರೆಗೆ ಮಾಯಕ್ಕಾದೇವಿ ದರ್ಶನಕ್ಕೆ ಬಾರದಂತೆ ಭಕ್ತರಿಗೆ ಆಡಳಿತ ಮಂಡಳಿ ಸೂಚನೆ ನೀಡಿದೆ. ನಿತ್ಯ ಭಕ್ತರಿಂದ ತುಂಬಿರುತ್ತಿದ್ದ ದೇವಸ್ಥಾನ ಇಂದು ದರ್ಶನ ಬಂದ್ ಮಾಡಿದ ಹಿನ್ನೆಲೆ ಭಕ್ತರಿಲ್ಲದೆ ಬಣಗುಡುತ್ತಿದೆ.
Advertisement
Advertisement
ಇತ್ತ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಹಾಗೂ ಸಂಕೇಶ್ವರ ಪಟ್ಟಣದಲ್ಲಿ ಶುಕ್ರವಾರದ ಸಂತೆಯನ್ನ ಮುನ್ನೆಚ್ಚರಿಕೆ ಕ್ರಮವಾಗಿ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ರದ್ದು ಮಾಡಿದ್ದಾರೆ. ಸಂತೆ ನಡೆಸಬಾರದೆಂಬ ಆದೇಶವನ್ನು ಲೆಕ್ಕಸದೆ ಸಂತೆ ನಡೆಸಲು ವ್ಯಾಪಾರಿಗಳು ಮುಂದಾಗಿದ್ದರು. ಅದಕ್ಕೆ ಅನುಮತಿ ನೀಡದ ಅಧಿಕಾರಿಗಳು ಪೊಲೀಸರ ಸಹಾಯದಿಂದ ಸಂತೆಯನ್ನ ಬಂದ್ ಮಾಡಿಸಿದ್ದಾರೆ. ಜನ ಸಂತೆಗೆ ಬರುತ್ತಾರೆ ಎಂದು ವ್ಯಾಪಾರಸ್ಥರು ತರಕಾರಿ ಸೇರಿದಂತೆ ಸಾಕಷ್ಟು ವಸ್ತುಗಳನ್ನ ಮಾರಾಟಕ್ಕೆ ತಂದಿದ್ದರು. ಆದರೆ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದ ಸಂತೆಯನ್ನ ತೆರವುಗೊಳಿಸಲಾಯಿತು.