ಬ್ರಹ್ಮಪುತ್ರ ನದಿಗೆ ವಿಶ್ವದಲ್ಲೇ ಅತಿ ದೊಡ್ಡ ಅಣೆಕಟ್ಟು (Brahmaputra Dam) ನಿರ್ಮಾಣಕ್ಕೆ ಚೀನಾ (China) ಮುಂದಾಗಿದೆ. ಇದಕ್ಕಾಗಿ ಚೀನಾ ಸುಮಾರು 11.67 ಲಕ್ಷ ಕೋಟಿ ರೂ. ವೆಚ್ಚ ಮಾಡಲಿದೆ. ಈ ನದಿಯ ನೀರಿನಲ್ಲಿ ಭಾರತ (India) ಹಾಗೂ ಬಾಂಗ್ಲಾದೇಶ ಪಾಲು ಹೊಂದಿದ್ದು, ಈ ಎರಡೂ ದೇಶಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.
ಈ ಅಣೆಕಟ್ಟು ಪೂರ್ಣಗೊಂಡ ನಂತರ 60,000 MW ವಿದ್ಯುತ್ ಉತ್ಪಾದನೆ ಆಗಲಿದೆ. ಈ ಮೂಲಕ ಯೋಜನೆಯು ವಿಶ್ವದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿ ಹೊರಹೊಮ್ಮಲಿದೆ. ಇದು ಮಧ್ಯ ಚೀನಾದಲ್ಲಿರುವ ತ್ರೀ ಗಾರ್ಜಸ್ ಅಣೆಕಟ್ಟಿಗಿಂತಲೂ ಮೂರು ಪಟ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ವರದಿಯಾಗಿದೆ.
ಟಿಬೆಟ್‌ನಲ್ಲಿ ಈ ನದಿಯನ್ನು ಯಾರ್ಲುಂಗ್ ತ್ಸಾಂಗ್ಪೊ ಎನ್ನಲಾಗುತ್ತದೆ. ಅಲ್ಲಿಂದ ಅರುಣಾಚಲ ಪ್ರದೇಶವನ್ನು ಈ ನದಿ ಪ್ರವೇಶಿಸುತ್ತದೆ, ಅಲ್ಲಿ ಈ ನದಿಯನ್ನು ಸಿಯಾಂಗ್ ಎಂದು ಕರೆಯಲಾಗುತ್ತದೆ. ಅಸ್ಸಾಂನಲ್ಲಿ, ಇದು ದಿಬಾಂಗ್ ಮತ್ತು ಲೋಹಿತ್‌ನಂತಹ ಉಪನದಿಗಳಿಂದ ಸೇರಿಕೊಂಡು ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ. ನದಿಯು ನಂತರ ಬಾಂಗ್ಲಾದೇಶವನ್ನು ಪ್ರವೇಶಿಸುತ್ತದೆ. ಬಳಿಕ ಬಂಗಾಳ ಕೊಲ್ಲಿಗೆ ಸೇರುತ್ತದೆ. ಈಗ ಚೀನಾ ಯೋಜನೆಯಿಂದ ಈ ಪ್ರದೇಶಗಳಲ್ಲಿ ವಾಸಿಸುವ ಲಕ್ಷಾಂತರ ಜನರ ಹಾಗೂ ಪರಿಸರದ ಮೇಲೆ ಪರಿಣಾಮ ಬೀರಬಹುದು ಎಂಬ ಕಳವಳ ಕೂಡ ವ್ಯಕ್ತವಾಗುತ್ತಿದೆ.
ಯೋಜನೆಯ ಪ್ರಮುಖ ಅಂಶಗಳೇನು?
ಈ ಡ್ಯಾಂ ಚೀನಾದ 14ನೇ ಪಂಚವಾರ್ಷಿಕ ಯೋಜನೆಯ ಪ್ರಮುಖ ಅಂಶವಾಗಿದೆ. ವಾರ್ಷಿಕವಾಗಿ 300 ಶತಕೋಟಿ kWh ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಯೋಜನೆಗೆ 137 ಶತಕೋಟಿ ಡಾಲರ್ (11.67 ಲಕ್ಷ ಕೋಟಿ ರೂ) ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಚೀನಾಗೆ ಈ ಡ್ಯಾಂ ಯಾಕೆ ಬೇಕು?
ಹೆಚ್ಚಿನ ವಿದ್ಯುತ್ ಉತ್ಪಾದನೆಯಿಂದ ಸಾಂಪ್ರದಾಯಿಕ ಇಂಧನ ಮೂಲಗಳಿಂದ ದೂರ ಸರಿಯಲು ಚೀನಾ ಯೋಜಿಸಿದೆ. ಇನ್ನೂ, 2060ರ ವೇಳೆಗೆ ಇಂಗಾಲದ ಪ್ರಮಾಣ ತಗ್ಗಿಸಲು ಈ ಅಣೆಕಟ್ಟು ಸಹಾಯ ಮಾಡುತ್ತದೆ ಎಂದು ಚೀನಾ ಹೇಳಿಕೊಂಡಿದೆ. ಅಲ್ಲದೇ ನೀರಾವರಿ, ಕೈಗಾರಿಕೆ ಬೆಳವಣಿಗೆ, ಸಾರಿಗೆ ವ್ಯವಸ್ಥೆ ಸುಧಾರಣೆ, ವ್ಯಾಪಾರ ವೃದ್ಧಿ, ಉದ್ಯೋಗ ಸೃಷ್ಟಿಯಾಗಲಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.
ಭಾರತದ ಆತಂಕವೇನು?
ಡ್ಯಾಮ್‌ಗಳನ್ನು ಜಲ ಬಾಂಬ್‌ಗಳೆಂದೆ ಕರೆಯಲಾಗುತ್ತದೆ. ಅದೇ ಕಾರಣಕ್ಕೆ ಶತೃದೇಶಗಳ ಕೈಗೆ ಹಾಗೂ ಉಗ್ರರಿಗೆ ಡ್ಯಾಮ್‌ಗಳ ಮಾಹಿತಿ, ಗೌಪ್ಯತೆ ತಿಳಿಯದಂತೆ ಫೋಟೋ, ಚಿತ್ರೀಕರಣಕ್ಕೆ ನಿಷೇಧ ಹೇರಲಾಗುತ್ತದೆ.
ಈಗ ಚೀನಾ ನಿರ್ಮಿಸುತ್ತಿರುವ ವಿಶ್ವದ ಅತೀ ದೊಡ್ಡ ಡ್ಯಾಮ್‌ನ್ನು ಭಾರತ ಮತ್ತು ಬಾಂಗ್ಲಾದೇಶದ ಮೇಲೆ ದಾಳಿ ನಡೆಸಲು ಚೀನಾ ಬಳಸುವ ಆತಂಕವಿದೆ. ಹೌದು! ಯಾವುದೇ ಸೂಚನೆ ನೀಡದೇ ಕುತಂತ್ರದಿಂದ ಚೀನಾ ತನ್ನ ಡ್ಯಾಮ್‌ನಿಂದ ನೀರನ್ನು ಹರಿಸಿದರೆ ಹಲವಾರು ಪ್ರದೇಶಗಳು ಕೊಚ್ಚಿ ಹೋಗುವ ಭೀತಿ ಇದೆ. ಇದರಿಂದ ಜನ, ಜಾನುವಾರು, ಮೂಲಭೂತ ಸೌಕರ್ಯಗಳು ಹಾನಿಗೊಳಗಾಗುವ ಆತಂಕ ಸಹ ಇದೆ. ಇದೀಗ ಭಾರತದ ಮೇಲೆ ದಾಳಿಯ ಉದ್ದೇಶದಿಂದಲೇ ಚೀನಾ ಈ ಡ್ಯಾಮ್ ನಿರ್ಮಾಣಕ್ಕೆ ಮುಂದಾಯಿತಾ ಎಂಬ ಪ್ರಶ್ನೆ ಸಹ ಉದ್ಭವಿಸಿದೆ.
ನದಿಯಲ್ಲಿ ಹರಿಯುವ ನೀರಿನ ಮೇಲೆ ಚೀನಾ ತನ್ನ ಹಿಡಿತ ಸಾಧಿಸಲು ಯತ್ನಿಸುತ್ತಿದೆ ಎಂದು ಭಾರತ ಆರೋಪಿಸಿದೆ. ಅಣೆಕಟ್ಟಿನ ಗಾತ್ರದ ಲೆಕ್ಕಾಚಾರದಂತೆ ನದಿಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿಸಿದರೆ, ಕೆಳಭಾಗದಲ್ಲಿ ದೊಡ್ಡ ಪ್ರಮಾಣದ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತದ ಅರುಣಾಚಲ ಪ್ರದೇಶಕ್ಕೆ ಪ್ರವೇಶಕ್ಕೂ ಮುನ್ನ ನದಿಯು ದೊಡ್ಡದಾಗಿ ತಿರುವು ಪಡೆಯುತ್ತದೆ. ಆ ಭಾಗದಲ್ಲಿ ಹಿಮಾಲಯದ ಆಳವಾದ ಕಮರಿ ಪ್ರದೇಶದಲ್ಲಿ ಈ ಅಣೆಕಟ್ಟು ನಿರ್ಮಾಣವಾಗುತ್ತದೆ. ಇದರಿಂದಾಗಿ ಚೀನಾದಿಂದ ಭಾರತಕ್ಕೆ ನೀರಿನ ಹರಿವಿನ ಮೇಲೆ ಈ ಆಣೆಕಟ್ಟು ಪರಿಣಾಮ ಬೀರಬಹುದು. ಕೃಷಿಗೆ ಇದರಿಂದ ಸಮಸ್ಯೆಯಾಗಬಹುದು.
ನದಿಯ ಹರಿವಿನ ಬದಲಾವಣೆಗಳು ಸ್ಥಳೀಯ ಜೀವವೈವಿಧ್ಯತೆಯ ಮೇಲೆ ಪರಿಣಾಮ ಬೀರಬಹುದು ಎಂದು ಭಾರತ ಆತಂಕ ವ್ಯಕ್ತಪಡಿಸಿದೆ. ಅಲ್ಲದೇ ಈ ಪ್ರದೇಶವು ಪ್ರಪಂಚದ ಅತ್ಯಂತ ದುರ್ಬಲವಾದ ಮತ್ತು ಭೂಕಂಪ ಪೀಡಿತ ಪ್ರದೇಶವಾಗಿದೆ. 2004 ರಲ್ಲಿ ಭೂಕುಸಿತವು ಹಿಮಾಚಲ ಪ್ರದೇಶದ ಬಳಿ ಟಿಬೆಟಿಯನ್ ಹಿಮಾಲಯದಲ್ಲಿ ಗ್ಲೇಶಿಯಲ್ ಪರೇಚು ಸರೋವರವನ್ನು ಸೃಷ್ಟಿಸಿದೆ ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು. ಇದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಎರಡೂ ದೇಶಗಳ ಮಾತುಕತೆ ಅಗತ್ಯ ಎಂಬುದು ತಜ್ಞರ ಅಭಿಪ್ರಾಯ.
ಗಾರ್ಜಸ್ ಡ್ಯಾಂನಿಂದ ಭೂಮಿ ವೇಗದ ಮೇಲೆ ಪರಿಣಾಮ!
ಇನ್ನೂ ಚೀನಾ ಈ ಹಿಂದೆ ನಿರ್ಮಿಸಿದ್ದ ಗಾರ್ಜಸ್ ಅಣೆಕಟ್ಟಿನಿಂದ ಭೂಮಿಯ ತಿರುಗುವಿಕೆ 0.06 ಮೈಕ್ರೋಸೆಕೆಂಡ್‌ಗಳಷ್ಟು ನಿಧಾನವಾಗಿದೆ. ಅದೇ ರೀತಿ ಈಗ ನಿರ್ಮಾಣವಾಗುತ್ತಿರುವ ಆಣೆಕಟ್ಟಿನಿಂದಲೂ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿದೆ.
ಭಾರತ ಮತ್ತು ಬಾಂಗ್ಲಾದೇಶ ದೇಶಗಳ ಮೇಲೆ ಈ ಡ್ಯಾಂ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಚೀನಾ ಹೇಳಿಕೊಂಡಿದೆ.