ಹಿಂದೆ ಬ್ರಿಟಿಷರು ಏಷ್ಯಾ, ಆಫ್ರಿಕಾದ ದೇಶಗಳಿಗೆ ತಕ್ಕಡಿ ತೆಗೆದುಕೊಂಡು ಬಂದು ವ್ಯಾಪಾರ ಮಾಡಿ ನಂತರ ಆ ದೇಶದ ರಾಜರನ್ನೇ ಸೋಲಿಸಿ ಆಡಳಿತ ಮಾಡಿದ್ದರು. ಈಗ ವ್ಯಾಪಾರ ಮಾರುಕಟ್ಟೆಯನ್ನು ವಿಸ್ತರಿಸುವ ನೆಪದಲ್ಲಿ ಆರಂಭಿಸಿರುವ ಒನ್ ಬೆಲ್ಟ್ ಒನ್ ರೋಡ್ (One Belt One Road) ಯೋಜನೆ ಮೂಲಕ ಚೀನಾ (China) ಇಡೀ ವಿಶ್ವವನ್ನೇ ಆಳಲು ಹೊರಟಿದೆ. ಈ ಯೋಜನೆಗೆ ಈಗ 10 ವರ್ಷ ಪೂರ್ಣಗೊಂಡಿದೆ. ಹೀಗಾಗಿ ಏನಿದು ಒನ್ ಬೆಲ್ಟ್ ಒನ್ ರೋಡ್ ಯೋಜನೆ? ಹೇಗೆ ಚೀನಾ ಹಣವನ್ನು ಹೂಡಿಕೆ ಮಾಡುತ್ತಿದೆ? ಈ ಯೋಜನೆಯಿಂದಾಗಿ ಯಾವೆಲ್ಲ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ? ಹೇಗೆ ವಿಶ್ವವನ್ನು ಆಳಲು ಚೀನಾ ಹೋಗುತ್ತಿದೆ? ಕೊನೆಗೆ ಭಾರತ ಯಾಕೆ ಈ ಯೋಜನೆಗೆ ಸೇರಿಲ್ಲ ಈ ಎಲ್ಲಾ ವಿಷಯಗಳ ಬಗ್ಗೆ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಒನ್ ಬೆಲ್ಟ್ ಒನ್ ರೋಡ್ ಯೋಜನೆ ಆರಂಭವಾಗಿದ್ದು ಹೇಗೆ?
2008ರಲ್ಲಿ ವಿಶ್ವದಲ್ಲಿ ಆರ್ಥಿಕ ಹಿಂಜರಿತವಾಯಿತು. ಅಮೆರಿಕ (USA) ಮತ್ತು ಯುರೋಪ್ ರಾಷ್ಟ್ರಗಳು (Europe Nations) ಬಹಳ ಸಂಕಷ್ಟಕ್ಕೆ ಸಿಲುಕಿದವು. ವಿಶ್ವದ ಹಲವು ರಾಷ್ಟ್ರಗಳಿಗೆ ಸಮಸ್ಯೆಯಾದರೂ ಚೀನಾಗೆ ಅಷ್ಟೇನು ಸಮಸ್ಯೆ ಆಗಲಿಲ್ಲ. ಈ ಹಿಂದೆ ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಚೀನಾ ಆರ್ಥಿಕತೆ ಚಿಗುರಿತ್ತು ಮತ್ತು ವಿಶ್ವದ ಫ್ಯಾಕ್ಟರಿಯಾಗಿ ಹೊರಹೊಮ್ಮಿತ್ತು. ಆಮದು ಕಡಿಮೆಯಾಗಿ ರಫ್ತು ಹೆಚ್ಚಿತ್ತು. ಚೀನಾದ ಆರ್ಥಿಕತೆ ಬೆಳವಣಿಗೆ ಆಗುತ್ತಿದ್ದಂತೆ ವಿಶ್ವದ ಸೂಪರ್ ಪವರ್ ಪಟ್ಟದಲ್ಲಿರುವ ಅಮೆರಿಕವನ್ನು ಸೋಲಿಸಲು ಪ್ಲ್ಯಾನ್ ಮಾಡುತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕವನ್ನು ಅಷ್ಟು ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ ಎನ್ನುವುದು ಚೀನಾಗೆ ಗೊತ್ತಿತ್ತು. ಈ ಕಾರಣಕ್ಕೆ ಅಮೆರಿಕ ಸೋಲಿಸಿ ತಾನು ವಿಶ್ವದ ಸೂಪರ್ ಪವರ್ ದೇಶವಾಗಲು ಚೀನಾ ಆರಂಭಿಸಿದ ಯೋಜನೆಯೇ ಒನ್ ಬೆಲ್ಟ್ ಒನ್ ರೋಡ್ ಯೋಜನೆ.
Advertisement
Advertisement
ಏನಿದು ಈ ಯೋಜನೆ?
ಸರಳವಾಗಿ ಹೇಳುವುದಾರೆ ರಸ್ತೆ, ರೈಲು, ಹಡಗಿನ ಮೂಲಕ ವಸ್ತುಗಳನ್ನು ಸಾಗಿಸಲು ಆರಂಭವಾದ ಯೋಜನೆ ಒನ್ ಬೆಲ್ಟ್, ಒನ್ ರೋಡ್ ಯೋಜನೆ. ಅಂದರೆ ಒಂದು ದೇಶದಲ್ಲಿ ಮೂಲಸೌಕರ್ಯವನ್ನು (Infrastructure) ಅಭಿವೃದ್ಧಿ ಪಡಿಸುವ ಈ ಯೋಜನೆ 2013ರಲ್ಲಿ ಆರಂಭಗೊಂಡಿತು. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಕನಸಿನ ಯೋಜನೆ ಇದಾಗಿದ್ದು ಇದಕ್ಕೆ 30, 50 ದೇಶಗಳು ಸೇರಿಲ್ಲ. ರಷ್ಯಾ, ಸೌದಿ ಅರೇಬಿಯಾ, ಕತಾರ್, ಇರಾನ್, ಅರ್ಜೈಂಟಿನಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಸೇರಿದಂತೆ ಬರೋಬ್ಬರಿ 150 ದೇಶಗಳು ಈ ಮಹತ್ವಾಕಾಂಕ್ಷಿಯೋಜನೆಯ ಸದಸ್ಯ ರಾಷ್ಟ್ರಗಳಾಗಿವೆ.
Advertisement
ಯೋಜನೆಯಲ್ಲಿದೆ 6 ಕಾರಿಡಾರ್
1. ಚೀನಾ ಮಂಗೋಲಿಯಾ ರಷ್ಯಾ ಎಕಾನಮಿಕ್ ಕಾರಿಡಾರ್
2. ನ್ಯೂ ಯುರೋಷಿಯಾ ಲ್ಯಾಂಡ್ ಬ್ರಿಡ್ಜ್ ಎಕಾನಮಿಕ್ ಕಾರಿಡಾರ್
3. ಚೀನಾ ಸೆಂಟ್ರಲ್ ಏಷ್ಯಾ, ವೆಸ್ಟ್ ಏಷ್ಯಾ, ಎಕಾನಮಿಕ್ ಕಾರಿಡಾರ್
4. ಚೀನಾ ಪಾಕಿಸ್ತಾನ ಎಕಾನಮಿಕ್ ಕಾರಿಡಾರ್
5. ಬಾಂಗ್ಲಾದೇಶ, ಚೀನಾ, ಮ್ಯಾನ್ಮರ್ ಎಕಾನಮಿಕ್ ಕಾರಿಡಾರ್
6. ಚೀನಾ, ಇಂಡೋ ಚೀನಾ ಪೆನ್ಸುಲ ಎಕಾನಮಿಕ್ ಕಾರಿಡಾರ್
Advertisement
ರಸ್ತೆ, ರೈಲು, ಸೇತುವೆ, ವಿದ್ಯುತ್ ಸ್ಥಾವರ, ಬಂದರುಗಳನ್ನು ಈ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಸದಸ್ಯ ರಾಷ್ಟ್ರಗಳಲ್ಲ ಲ್ಯಾಟಿನ್ ಅಮೆರಿಕ, ಯುರೋಪ್, ಏಷ್ಯಾ, ಆಫ್ರಿಕಾ ದೇಶಗಳೇ ಅಧಿಕವಾಗಿವೆ. ಇದನ್ನೂ ಓದಿ: ಹಮಾಸ್ ರಾಕೆಟ್ ಲಾಂಚರ್‌ಗಳು ಧ್ವಂಸ – ಇಸ್ರೇಲ್ ಬಳಸಿದ Iron Sting ಬಾಂಬ್ ಎಷ್ಟು ಪವರ್‌ಫುಲ್?
ದೇಶಗಳಿಗೆ ಲಾಭ ಹೇಗೆ?
ಮೂಲಸೌಕರ್ಯ ಕ್ಷೇತ್ರ ಅಭಿವೃದ್ಧಿಯಾದರೆ ಮಾತ್ರ ಆ ದೇಶ ಅಭಿವೃದ್ಧಿಯಾಗುತ್ತದೆ ಎನ್ನುವ ವಿಚಾರ ನಿಮಗೆಲ್ಲ ಗೊತ್ತಿದೆ. ಈ ಕಾರಣಕ್ಕೆ ದೇಶಗಳು ಹೈವೇ, ಬಂದರು, ರೈಲ್ವೇ, ಸೇತುವೆ, ವಿಮಾನ ನಿಲ್ದಾಣ ಮಾಡಲು ಮುಂದಾಗುತ್ತದೆ. ಒಂದು ದೇಶ ಮೂಲಸೌಕರ್ಯ ಯೋಜನೆ ಒಂದನ್ನು ಆರಂಭಿಸಲು ಪ್ಲ್ಯಾನ್ ಮಾಡುತ್ತದೆ. ಈ ಯೋಜನೆಗೆ ಕೋಟ್ಯಂತರ ಡಾಲರ್ ಹಣ ಬೇಕು. ಈ ಹಣ ಬೇಕಾದರೆ ವಿಶ್ವಬ್ಯಾಂಕ್‌ನಿಂದ ಸಾಲವನ್ನು ಪಡೆದು ಯೋಜನೆ ಆರಂಭಿಸಬೇಕಾಗುತ್ತದೆ. ಆದರೆ ಚೀನಾದ ಬೆಲ್ಟ್ ರೋಡ್ ಹಾಗಲ್ಲ. ಆ ಯೋಜನೆಗೆ ಎಷ್ಟು ಹಣ ಬೇಕೋ ಅಷ್ಟು ಹಣವನ್ನು ದೇಶಗಳಿಗೆ ಚೀನಾ ಬ್ಯಾಂಕ್‌ಗಳೇ ಸಾಲವಾಗಿ ನೀಡುತ್ತದೆ. ವಿಶ್ವಬ್ಯಾಂಕ್ 1-2% ಬಡ್ಡಿದರಲ್ಲಿ ಸಾಲ ನೀಡಿದರೆ ಚೀನಾ 6.3% ಬಡ್ಡಿದರಲ್ಲಿ ಸಾಲ ನೀಡುತ್ತದೆ. ವಿಶ್ವಬ್ಯಾಂಕ್‌ನ ಸಾಲ ಮರುಪಾವತಿಯ ಅವಧಿ 28-30 ವರ್ಷ ಇದ್ದರೆ ಚೀನಾದ ಬ್ಯಾಂಕುಗಳ ಅವಧಿ 10-15 ವರ್ಷ ಇರುತ್ತದೆ.
ಈಗ ವಿಶ್ವಬ್ಯಾಂಕ್‌ನಿಂದ ಸಾಲ ಪಡೆದರೆ ಬಹಳಷ್ಟು ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ. ಒಂದು ವೇಳೆ ಮಾನದಂಡಗಳನ್ನು ಪಾಲಿಸದೇ ಇದ್ದರೆ ಸಾಲ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಆದರೆ ಚೀನಾ ಈ ಯೋಜನೆಯಲ್ಲಿ ಅಷ್ಟೊಂದು ಮಾನದಂಡಗಳು ಇಲ್ಲ. ಅವರ ಷರತ್ತುಗಳನ್ನು ಪಾಲಿಸಿದರೆ ಆಯ್ತು. ಆ ಷರತ್ತನ್ನು ಒಪ್ಪಿದರೆ ಚೀನಾ ಬ್ಯಾಂಕುಗಳು ದೇಶಗಳಿಗೆ ಸುಲಭವಾಗಿ ಸಾಲ ನೀಡುತ್ತವೆ.
ಚೀನಾಗೆ ಲಾಭ ಹೇಗೆ?
ಒಂದನೇಯದಾಗಿ ಚೀನಾದ ಬ್ಯಾಂಕ್‌ಗಳೇ ಸಾಲ ನೀಡುತ್ತವೆ. ಎರಡನೇಯದಾಗಿ ಮೂಲ ಸೌಕರ್ಯ ಕ್ಷೇತ್ರದಲ್ಲಿ ಸದ್ಯ ಚೀನಾವೇ ನಂಬರ್ ಒನ್ ದೇಶ. ವಿಶ್ವದ ಟಾಪ್ ಮೂಲಸೌಕರ್ಯ ಕಂಪನಿಗಳು ಚೀನಾದಲ್ಲಿವೆ. ಈ ಕಾರಣಕ್ಕೆ ಆ ಕಂಪನಿಗಳಿಗೆ ಗುತ್ತಿಗೆ ಸಿಗುವಂತೆ ಚೀನಾ ಮಾಡುತ್ತದೆ. ನಂತರ ಚೀನಾದ ಉದ್ಯೋಗಿಗಳೇ ಈ ಯೋಜನೆ ನಿರ್ಮಾಣಕ್ಕೆ ಬರುತ್ತಾರೆ. ಈ ಯೋಜನೆಗೆ ಬೇಕಾದ ಕಚ್ಚಾ ವಸ್ತುಗಳು ಸಹಾ ಚೀನಾದಿಂದಲೇ ಬರುತ್ತದೆ. ಈ ಮೂಲಕ ಸಾಲವಾಗಿ ಪಡೆದ ಹಣ ಯೋಜನೆ ನಿರ್ಮಾಣದ ಮೂಲ ಮರಳಿ ಚೀನಾಕ್ಕೆ ಮರಳುತ್ತದೆ. ಅಂತಿಮವಾಗಿ ಜಾಗ ಒಂದು ಬಿಟ್ಟರೆ ಚೀನಾದ ಹೂಡಿಕೆಯಲ್ಲಿ ಚೀನಾದ ಕಂಪನಿ, ಚೀನಾ ಜನ ನಿರ್ಮಾಣ ಮಾಡಿದ ಯೋಜನೆ ತಲೆ ಎತ್ತುತ್ತದೆ.
ಸಂಕಷ್ಟದಲ್ಲಿ ದೇಶಗಳು
ಚೀನಿ ಲೋನ್ ಅಪ್ಲಿಕೇಶನ್‌ಗಳ ಕತೆ ಗೊತ್ತಿರಬಹುದು. ಷರತ್ತುಗಳು ಇಲ್ಲದೇ ಸಾಲವನ್ನು ನೀಡುತ್ತವೆ. ಸಾಲ ಪಾವತಿ ಮಾಡದೇ ಇದ್ದಾಗ ಟಾರ್ಚರ್ ನೀಡಿ ಮಾನಸಿಕ ಹಿಂಸೆ ಕೊಡಲು ಆರಂಭಿಸುತ್ತವೆ. ಕೊನೆಗೆ ಈ ಟಾರ್ಚರ್‌ಗೆ ಹಲವು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದೇ ಸ್ಟ್ರಾಟಜಿಯನ್ನು ಚೀನಾ ಇಲ್ಲೂ ಮಾಡುತ್ತಿದೆ. ಹಿಂದುಳಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರೀ ದೊಡ್ಡ ಮೊತ್ತದ ಯೋಜನೆಯನ್ನು ಕೈಗೊಳ್ಳುತ್ತದೆ. ಸಾಲ ಪಾವತಿ ಆಗದೇ ಇದ್ದಾಗ ಯೋಜನೆಯನ್ನೇ ಸಂಪೂರ್ಣ ಸ್ವಾಧೀನಪಡಿಸಿಕೊಳ್ಳುತ್ತದೆ.
ಬೇರೆ ಯಾವುದೇ ಉದಾಹರಣೆ ಬೇಡ ನಮ್ಮ ಹತ್ತಿರದ ಪಾಕಿಸ್ತಾನವನ್ನು ನೋಡಿದರೆ ಉಗ್ರರನ್ನು ಸೃಷ್ಟಿಸಿ ಭಾರತದ ವಿರುದ್ಧ ಚೂ ಬಿಡುತ್ತಿದ್ದ ಪಾಕಿಸ್ತಾನ ವಿಶ್ವಬ್ಯಾಂಕ್‌ನಿಂದ ಮೊದಲೇ ಸಾಕಷ್ಟು ಸಾಲ ಪಡೆದುಕೊಂಡಿತ್ತು. ಈ ನಡುವೆ ಚೀನಾ ಪಾಕಿಸ್ತಾನ ಎಕಾನಮಿಕ್ ಕಾರಿಡಾರ್ ಹೆಸರಿನಲ್ಲಿ ಸಾಲ ಪಡೆದುಕೊಂಡಿತ್ತು. ಸದ್ಯ ಅಂದಾಜು 30 ಬಿಲಿಯನ್ ಡಾಲರ್ ಹಣವನ್ನು ಪಾಕಿಸ್ತಾನ ಚೀನಾಗೆ ಪಾವತಿ ಮಾಡಬೇಕಿದೆ. ಚೀನಾ ಹಣವನ್ನು ಪಾವತಿ ಮಾಡಲು ಕನಿಷ್ಟ 40 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಶ್ರೀಲಂಕಾದ ಹಂಬನ್‌ತೋಟ ಬಂದರನ್ನು ಚೀನಾ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಅಭಿವೃದ್ಧಿ ಪಡಿಸಿದರೂ ನಿರೀಕ್ಷಿತ ಪ್ರಮಾಣದ ಲಾಭವಾಗಿಲ್ಲ. ಸಾಲ ಮರುಪಾವತಿ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ 2017ರಲ್ಲಿ 99 ವರ್ಷಗಳ ಕಾಲ ಚೀನಾದ ಚೀನಾ ಮರ್ಚೆಂಟ್ ಪೋರ್ಟ್ ಹೋಲ್ಡಿಂಗ್ ಲೀಸ್‌ಗೆ ನೀಡಲಾಗಿದೆ.
ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡ, ಮಲೇಷ್ಯಾ, ಮಾಲ್ಡೀವ್ಸ್ ಸೇರಿದಂತೆ ಹಲವು ದೇಶಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಕಾರಣಕ್ಕೆ ಒನ್ ರೋಡ್, ಒನ್ ಬೆಲ್ಟ್ ಈಗ Debt-trap Diplomacy ಎಂದೇ ಕುಖ್ಯಾತಿ ಪಡೆದಿದೆ.
ಭಾರತ ಯಾಕೆ ಸೇರ್ಪಡೆಯಾಗಿಲ್ಲ?
ಒಂದನೆಯದಾಗಿ ಭಾರತದ ವಿರೋಧಿ ಪಾಕಿಸ್ತಾನದ ಮಿತ್ರದೇಶ ಚೀನಾ. ಎರಡನೇಯದಾಗಿ ಪಾಕಿಸ್ತಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಚೀನಾ ರಫ್ತು ಮಾಡುತ್ತದೆ. ಮೂರನೇಯದಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಪಾಕಿಸ್ತಾನ ಎಕಾನಮಿಕ್ ಕಾರಿಡಾರ್ ಹಾದು ಹೋಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಯೋಜನೆ ಆರಂಭಿಸಿದ್ದಕ್ಕೆ ಭಾರತ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಶತ್ರುವಿನ ಮಿತ್ರ ತನಗೂ ಶತ್ರು ಎನ್ನುವುದು ಭಾರತಕ್ಕೆ ಚೆನ್ನಾಗಿ ತಿಳಿದಿದೆ. ಇದರ ಜೊತೆ ಭಾರತದ ಅರುಣಾಚಲ ಪ್ರದೇಶದ ಮೇಲೆ ಚೀನಾ ಕಣ್ಣು ಹಾಕಿದೆ. ಈ ಎಲ್ಲಾ ಕಾರಣಕ್ಕೆ ಭಾರತ ಚೀನಾದ ಮಹತ್ವಾಕಾಂಕ್ಷೆಯ ಯೋಜನೆಗೆ ಸಹಿ ಹಾಕಿಲ್ಲ.
ಭಾರತ ಏನು ಮಾಡುತ್ತಿದೆ?
ಚೀನಾಕ್ಕೆ ಪ್ರಾಬಲ್ಯವನ್ನು ಕಡಿಮೆ ಮಾಡಲು ಭಾರತ ಪ್ರಯತ್ನ ನಡೆಸುತ್ತಲೇ ಇದೆ. 2000ನೇ ಇಸ್ವಿಯಲ್ಲಿ ಭಾರತ, ರಷ್ಯಾ, ಇರಾನ್ ಜೊತೆಗೂಡಿ ಇಂಟರ್‌ನ್ಯಾಷನಲ್ ನಾರ್ತ್-ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡರ್ (INSTC) ರಷ್ಯಾದ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಸಹಿ ಹಾಕಲಾಗಿತ್ತು. ಹಡಗು, ರಸ್ತೆ, ರೈಲು ಮೂಲಕ ವಸ್ತುಗಳನ್ನು ಸಾಗಾಣಿಕೆ ಮಾಡಲು ಈ ಕಾರಿಡಾರ್ ಸಹಿ ಹಾಕಲಾಗಿತ್ತು. ನಂತರದ ದಿನದಲ್ಲಿ ಟರ್ಕಿ, ಅಜರ್‌ಬೈಜನ್, ಕಜಕಿಸ್ತಾನ್, ಅರ್ಮೆನಿಯಾ, ಬೆಲರಸ್, ತಜಕಿಸ್ತಾನ, ಕಿರ್ಗಿಸ್ತಾನ್, ಒಮನ್, ಉಕ್ರೇನ್, ಸಿರಿಯಾ ಸಹಿ ಹಾಕಿತ್ತು. 2022ರ ಜುಲೈನಲ್ಲಿ ರಷ್ಯಾದ ಆರ್‌ಜೆಡಿ ಲಾಜಿಸ್ಟಿಕ್ಸ್ ಕಂಪನಿ ಮೂಲಕ ವಸ್ತುಗಳನ್ನು ರಫ್ತು ಮಾಡಿತ್ತು. ಸೂಯೆಜ್ ಕಾಲುವೆಗೆ ಹೋಲಿಸಿದರೆ ಈ ಕಾರಿಡಾರ್‌ನಲ್ಲಿ ಸಾಗಾಣಿಕ ವೆಚ್ಚ 30% ಕಡಿಮೆ ಆಗಲಿದೆ.
ಇತ್ತೀಚಿಗೆ ದೆಹಲಿಯಲ್ಲಿ ಮುಕ್ತಾಯವಾದ ಜಿ20 ಸಮ್ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಮಧ್ಯ ಪ್ರಾಚ್ಯ ಯುರೋಪ್ ಕಾರಿಡರ್(India-Middle East-Europe Economic Corridor) ಘೋಷಣೆ ಮಾಡಿದ್ದರು. ತಿಳುವಳಿಕಾ ಪತ್ರಕ್ಕೆ ಭಾರತ, ಯುಎಇ, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಯುರೋಪಿಯನ್ ಯೂನಿಯನ್ ಸಹಿ ಹಾಕಿದ್ದವು.
ಚೀನಾ ಸೂಪರ್ ಪವರ್ ಆಗುತ್ತಾ?
ಅಮೆರಿಕ ಸೋಲಿಸಿ ಸೂಪರ್ ಪವರ್ ಆಗಲು ಹೊರಟಿರುವ ಚೀನಾದ ಮಹತ್ವಾಕಾಂಕ್ಷೆಯ ಯೋಜನೆ ಆರಂಭದಲ್ಲಿ ಚೆನ್ನಾಗಿದ್ದವು. ಹಲವು ರಾಷ್ಟ್ರಗಳು ಆಸಕ್ತಿ ತೋರಿಸಿದ್ದವು. ಆದರೆ ಕೋವಿಡ್ ನಂತರ ವಿಶ್ವದ ಜೊತೆಗಿನ ಚೀನಾದ ಸಂಬಂಧ ಹಾಳಾಗಿದೆ. ಇದರ ಜೊತೆ ಹಲವು ದೇಶಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಯಾವುದಾದರೂ ಒಂದು ದೇಶ ಚೀನಾದಿಂದ ಸಾಲ ಮಾಡಿ ಯೋಜನೆ ಆರಂಭಿಸುವ ಮುನ್ನ ಆ ದೇಶದಲ್ಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದರ ಜೊತೆ ಕೋವಿಡ್‌ನಿಂದ ಚೀನಾದ ಆರ್ಥಿಕತೆ ಕುಸಿತವಾಗುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮ ಕುಸಿದಿದೆ. ಈ ಎಲ್ಲಾ ಕಾರಣದಿಂದ ಈಗ ನಿರೀಕ್ಷಿಸಿದಷ್ಟು ಈ ಯೋಜನೆ ಪ್ರಗತಿ ಕಾಣುತ್ತಿಲ್ಲ.
– ಅಶ್ವಥ್ ಸಂಪಾಜೆ
Web Stories