ದಿನಕ್ಕೊಂದು ಹೊಸ ಆವಿಷ್ಕಾರ, ಸಂಶೋಧನೆಯನ್ನು ಮಾಡುವುದರಲ್ಲಿ ಚೀನಾ ಸದಾ ಒಂದು ಹೆಜ್ಜೆ ಮುಂದಿರುತ್ತದೆ. ಪ್ರತಿದಿನ ಒಂದಲ್ಲ ಒಂದು ಹೊಸ ತಂತ್ರಜ್ಞಾನವನ್ನು ಕಂಡುಹಿಡಿಯುವ ಚೀನಾ ಇದೀಗ ಸಮುದ್ರದಾಳ, ನೀರೊಳಗಿನ ರಹಸ್ಯವನ್ನು ಕಂಡುಹಿಡಿಯುವ ಸಲುವಾಗಿ ʼಜೆಲ್ಲಿಫಿಶ್ʼ ಎಂಬ ರೋಬೋಟ್ ಅನ್ನು ಕಂಡು ಹಿಡಿದಿದೆ. ಹಾಗಿದ್ರೆ ಏನಿದು ಜೆಲ್ಲಿಫಿಶ್ ರೋಬೋ? ನೀರೋಳಗೆ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ವಿಶೇಷತೆಗಳೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಏನಿದು ಘೋಸ್ಟ್ ಜೆಲ್ಲಿಫಿಶ್?
ಸಮುದ್ರದೊಳಗಿನ ರಹಸ್ಯ ಕಂಡುಹಿಡಿಯುವ ಸಲುವಾಗಿ ಚೀನಿ ವಿಜ್ಞಾನಿಗಳು ‘ಅಂಡರ್ ವಾಟರ್ ಫ್ಯಾಂಟಮ್’ ಎಂಬ ಜೆಲ್ಲಿಫಿಶ್ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ನೈಜ ಲೋಳೆ ಮೀನಿನಂತೆ ಕಾಣುತ್ತದ. ಅಲ್ಲದೇ ಲೋಳೆ ಮೀನಿನಂತೆ ಚಲಿಸುತ್ತದೆ. ಇದನ್ನು ಘೋಸ್ಟ್ ಜೆಲ್ಲಿಫಿಶ್ ಎಂದೂ ಕರೆಯಲಾಗುತ್ತದೆ.
ಜೆಲ್ಲಿಫಿಶ್ ರೋಬೋಟ್ ಹೇಗಿದೆ?
ಹೈಡ್ರೋಜೆಲ್‌ನಿಂದ ಮಾಡಲ್ಪಟ್ಟ ಇದು ಪಾರದರ್ಶಕ ದೇಹ ಹೊಂದಿದೆ. ಇದು ನೀರೊಳಗಿನ ಕಡಲ ಜೀವಿಗಳಿಗೆ ತೊಂದರೆಯಾಗದಂತೆ ಅಲ್ಲಿನ ಪರಿಸರವನ್ನು ಮೇಲ್ವಿಚಾರಣೆ ಮಾಡುತ್ತದೆ. ಬಹುತೇಕ ಶಬ್ದರಹಿತವಾಗಿರುವ ಈ ರೋಬೋಟ್‌ಗೆ ಕಡಿಮೆ ವಿದ್ಯುತ್ ಸಾಕು. ಹೀಗಾಗಿ ಆಳ ಸಮುದ್ರದಲ್ಲಿ ರಹಸ್ಯ ಮೇಲ್ವಿಚಾರಣೆಗೆ, ನೀರೊಳಗಿನ ರಚನೆಗಳ ಕುರಿತು ಪರಿಶೀಲನೆಗೆ ಸೂಕ್ತ. ಈ ಚಿಕ್ಕ ಸಾಧನವು 120 ಮೀ. ಮೀ ವ್ಯಾಸ, 56 ಗ್ರಾಂ ತೂಕವನ್ನು ಹೊಂದಿದೆ.
ಜೆಲ್ಲಿ ಮೀನುಗಳಿಂದ ಪ್ರೇರಿತವಾದ ಈ ರೋಬೋಟ್ ಅನ್ನು ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್‌ನಲ್ಲಿರುವ ನಾರ್ತ್‌ವೆಸ್ಟರ್ನ್ ಪಾಲಿಟೆಕ್ನಿಕಲ್ ವಿಶ್ವವಿದ್ಯಾಲಯದ ಟಾವೊ ಕೈ ಮತ್ತು ಅವರ ತಂಡವು ಅಭಿವೃದ್ಧಿಪಡಿಸಿದೆ. ಛತ್ರಿಯಂತಹ ಆಕಾರ ಮತ್ತು ಸೂಕ್ಷ್ಮವಾದ ಗ್ರಹಣಾಂಗಗಳನ್ನು ಹೊಂದಿರುವ ಈ ರೋಬೋಟ್‌ನ ಪಾರದರ್ಶಕ ದೇಹವು ಹೈಡ್ರೋಜೆಲ್ ಎಲೆಕ್ಟ್ರೋಡ್ ವಸ್ತುವಿನಿಂದ ಮಾಡಲ್ಪಟ್ಟಿದೆ. ಇದು ಕೇವಲ 28.5 ಮಿಲಿ ವ್ಯಾಟ್ ವಿದ್ಯುತ್ ಅನ್ನು ಬಳಸುತ್ತದೆ.
ಕೆಲಸ ಹೇಗೆ?
ಈ ರೋಬೋಟ್ ಜೆಲ್ಲಿಫಿಶ್‌ನ ನರಮಂಡಲದ ಸಂಕೇತಗಳನ್ನು ಅನುಕರಿಸುವ ಆಕ್ಚುಯೇಟರ್ ಬಳಸಿ ಚಲಿಸುತ್ತದೆ. ಈ ರೋಬೋಟ್‌ಗೆ ಕ್ಯಾಮೆರಾ ಮತ್ತು ಎಐ ಚಿಪ್ ಅಳವಡಿಸಲಾಗಿದ್ದು, ಮಷಿನ್ ಲರ್ನಿಂಗ್ ಮೂಲಕ ಸಮುದ್ರದೊಳಗಿನ ಅಥವಾ ನೀರೊಳಗಿನ ವಸ್ತುಗಳನ್ನು ನಿಖರವಾಗಿ ಗುರುತಿಸುತ್ತದೆ. ಇಂತಹ ನೈಸರ್ಗಿಕ ಪ್ರೇರಿತ ರೋಬೋಟ್‌ಗಳು ಆಳ ಸಮುದ್ರ ಪರಿಶೋಧನೆಯಲ್ಲಿ ಹಾಗೂ ರಹಸ್ಯ ಕಾರ್ಯಾಚರಣೆಯಲ್ಲಿ ಸಹಾಯಕವಾಗಬಹುದು.
ಇನ್ನು ಈ ರೋಬೋಟ್ ನೀರಿನೊಳಗೆ ಚಲಿಸುವುದರಿಂದ ರಕ್ಷಣಾ ವ್ಯವಸ್ಥೆಯಲ್ಲೂ ಇದು ಸಹಾಯಕವಾಗಬಹುದು. ಅಲ್ಲದೇ ಈ ರೋಬೋಟ್ ಅತ್ಯಂತ ಕಡಿಮೆ ವಿದ್ಯುತ್ ಬಳಸಿ ಸಮುದ್ರದಾಳದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪತ್ತೆಹಚ್ಚುತ್ತದೆ. ಈ ರೋಬೋಟ್‌ನಲ್ಲಿರುವ ಕ್ಯಾಮೆರದ ಸಹಾಯದಿಂದ ನೀರೊಳಗೆ ರಹಸ್ಯ ಕಾರ್ಯಾಚರಣೆ ನಡೆಸಬಹುದು.
ವಿಶೇಷತೆಗಳೇನು?
-ಲೋಳೆ ಮೀನಿನಂತೆಯೇ ಕಾಣುವ ಚಿಕ್ಕ ರೋಬೋಟ್
– ಹೈಡೋಜೆಲ್‌ನಿಂದ ರಚನೆ, ಪಾರದರ್ಶಕ ದೇಹ
-ಕೇವಲ 120 ಮಿ.ಮೀ. ವ್ಯಾಸ, 56 ಗ್ರಾಂ ತೂಕದ ರೋಬೋಟ್
-ಸಮುದ್ರದಾಳದಲ್ಲಿ ರಹಸ್ಯ ಕಣ್ಣಾವಲಿಗೆ ಸಹಾಯಕ
-ಯಾರ ಕಣ್ಣಿಗೂ ಬೀಳದಂತೆ ರಹಸ್ಯ ಮಾಹಿತಿ ಸಂಗ್ರಹ
– ಕ್ಯಾಮೆರಾ, ಎಐ ಚಿಪ್ ಅಳವಡಿಕೆಯಿಂದ ಅಧ್ಯಯನಕ್ಕೂ ಅನುಕೂಲ


