ಚೀನಾ (China) ಸಮುದ್ರದ ಗಡಿಯಲ್ಲಿ ನಿರಂತರ ಆಕ್ರಮಣ ಮುಂದುವರೆಸಿದೆ ಎಂದು ಇತ್ತೀಚೆಗೆ ಫಿಲಿಪೈನ್ಸ್ (Philippines) ಸರ್ಕಾರ ಆರೋಪಿಸಿದೆ. ಕಳೆದ ವಾರ ಉಭಯ ದೇಶಗಳ ನಡುವೆ ವಾಯು ಮತ್ತು ಸಮುದ್ರ ಗಡಿಯಲ್ಲಿ ನಡೆದ ಸರಣಿ ಘರ್ಷಣೆಗಳ ಬಳಿಕ ಫಿಲಿಪೈನ್ಸ್ ಈ ಹೇಳಿಕೆ ಬಿಡುಗಡೆ ಮಾಡಿದೆ. ಈ ಬೆಳವಣಿಗೆಯು ಮತ್ತೊಮ್ಮೆ ಚೀನಾ ಮತ್ತು ಫಿಲಿಪೈನ್ಸ್ ನಡುವಿನ ಉದ್ವಿಗ್ನತೆಯನ್ನ ಮುನ್ನೆಲೆಗೆ ತಂದಿದೆ.
ಚೀನಾ, ಫಿಲಿಫೈನ್ಸ್ ಸಮುದ್ರ ವಿವಾದ ಯಾಕೆ?
ದಕ್ಷಿಣ ಚೀನಾ ಸಮುದ್ರದ (South China Sea dispute) ಭಾಗದಲ್ಲಿ ಬ್ರೂನಿ, ಇಂಡೋನೇಷಿಯಾ, ಮಲೇಷ್ಯಾ, ಫಿಲಿಪೈನ್ಸ್, ತೈವಾನ್ ಮತ್ತು ವಿಯೆಟ್ನಾಂ ದೇಶಗಳ ಗಡಿಗಳನ್ನು ಒಳಗೊಂಡಿದೆ. ಈ ದೇಶಗಳು ಶತಮಾನಗಳಿಂದ ಸಮುದ್ರದಲ್ಲಿ ಪ್ರಾದೇಶಿಕ ನಿಯಂತ್ರಣದ ಬಗ್ಗೆ ನಿರಂತರ ಕಿತ್ತಾಡಿಕೊಂಡಿವೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಉದ್ವಿಗ್ನತೆ ಭಾರೀ ಗಂಭೀರ ಸ್ವರೂಪ ಪಡೆದಿವೆ.
ಕಳೆದ ಕೆಲವು ವರ್ಷಗಳಿಂದ ಚೀನಾ ತನ್ನ ಒಪ್ಪಿಗೆಯಿಲ್ಲದೆ ಈ ಸಮುದ್ರ ಭಾಗದಲ್ಲಿ ಬೇರೆ ಯಾವು ದೇಶವೂ ಮಿಲಿಟರಿ ಅಥವಾ ಆರ್ಥಿಕ ಕಾರ್ಯಾಚರಣೆ ನಡೆಸದಂತೆ ತಡೆದಿದೆ. ಇದಕ್ಕಾಗಿ ಸಮುದ್ರವನ್ನು ತನ್ನ ವಿಶೇಷ ಆರ್ಥಿಕ ವಲಯದ (EEZ) ಅಡಿಯಲ್ಲಿ ಬರುತ್ತದೆ ಎಂದು ಚೀನಾ ಘೋಷಿಸಿಕೊಂಡಿದೆ.
ದಕ್ಷಿಣ ಚೀನಾ ಸಮುದ್ರದ ಮೇಲೆ ನಿಯಂತ್ರಣ ಸಾಧಿಸಲು ಚೀನಾ ಬಂದರುಗಳು, ಸೇನಾ ನೆಲೆಗಳನ್ನು ಮತ್ತು ಏರ್‌ಸ್ಟ್ರಿಪ್‌ಗಳನ್ನು ನಿರ್ಮಿಸಿದೆ. ಫೈಟರ್ ಜೆಟ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ರಾಡಾರ್ ವ್ಯವಸ್ಥೆಯನ್ನು ನಿಯೋಜಿಸುವ ಮೂಲಕ ಚೀನಾ ಈ ಭಾಗದ ವುಡಿ ದ್ವೀಪದಿಂದ ನಿಯಂತ್ರಣ ಸಾಧಿಸುತ್ತಿದೆ.
ಇನ್ನೂ ಈ ವಿವಾದಕ್ಕೆ ಅಮೆರಿಕ ಸಹ ಎಂಟ್ರಿಯಾಗಿದೆ. ಚೀನಾ ಉಪಟಳ ನೀಡುತ್ತಿರುವ ಇತರೆ ದೇಶಗಳಿಗೆ ಸೇನೆಯ ನೆರವು, ಶಸ್ತ್ರಾಸ್ತ್ರಗಳು ಮತ್ತು ಆರ್ಥಿಕ ನೆರವು ನೀಡಿ ಚೀನಾವನ್ನು ಹಿಮ್ಮೆಟ್ಟಿಸಲು ಯತ್ನಿಸಿದೆ.
ದಕ್ಷಿಣ ಚೀನಾ ಸಮುದ್ರದ ಪ್ರಾಮುಖ್ಯತೆ ಏನು?
ದಕ್ಷಿಣ ಚೀನಾ ಸಮುದ್ರದ ಅಡಿಯಲ್ಲಿ 11 ಬಿಲಿಯನ್ ಬ್ಯಾರೆಲ್ ತೈಲ ಮತ್ತು 190 ಟ್ರಿಲಿಯನ್ ಘನ ಅಡಿಗಳಷ್ಟು ನೈಸರ್ಗಿಕ ಅನಿಲ ನಿಕ್ಷೇಪಗಳಿವೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಸಮುದ್ರದಲ್ಲಿ ಭಾರೀ ಪ್ರಮಾಣದ ಮೀನುಗಳಿದ್ದು, ಈ ಪ್ರದೇಶದ ಜನರಿಗೆ ಪ್ರಮುಖ ಉದ್ಯೋಗವನ್ನು ಇದು ಒದಗಿಸಿದೆ. ಈ ಮೂಲಕ ಪ್ರದೇಶದಾದ್ಯಂತ ಲಕ್ಷಾಂತರ ಜನರಿಗೆ ಆದಾಯದ ಪ್ರಮುಖ ಮೂಲವಾಗಿದೆ. ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಮೀನುಗಾರಿಕೆ ಹಡಗುಗಳು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತವೆ. ಇಷ್ಟೇ ಅಲ್ಲದೇ ಈ ಸಮುದ್ರ ಮಾಗವು ಪ್ರಮುಖ ವಾಣಿಜ್ಯ ವ್ಯಾಪಾರ ಮಾರ್ಗವಾಗಿದೆ. ಇದು ಚೀನಾಕ್ಕೆ ಆದಾಯವನ್ನು ತಂದುಕೊಡುತ್ತದೆ.
‘9-ಡ್ಯಾಶ್ ಲೈನ್’ ಎಂದರೇನು?
9 ಡ್ಯಾಶ್ ರೇಖೆಯು ಸಮುದ್ರದಲ್ಲಿ ಚೀನಾದ ಗಡಿಯನ್ನು ಗುರುತಿಸುತ್ತದೆ. ಇದು ಆರಂಭದಲ್ಲಿ `11-ಡ್ಯಾಶ್ ಲೈನ್’ ಎಂದು ಕರೆಯಲಾಗುತ್ತಿತ್ತು. 1953 ರಲ್ಲಿ, CCP ನೇತೃತ್ವದ ಸರ್ಕಾರವು ಟೋಂಕಿನ್ ಕೊಲ್ಲಿಯನ್ನು ಒಳಗೊಳ್ಳುವ ಭಾಗವನ್ನು ತೆಗೆದುಹಾಕಿತು. ಬಳಿಕ ಗಡಿಯನ್ನು 9 ಡ್ಯಾಶ್ ಎಂದು ಹೆಸರು ಬದಲಿಸಲಾಯಿತು. ಈ ಗಡಿಯೂ ಚೀನಾದ ಮುಖ್ಯ ಭೂಭಾಗದಿಂದ ಫಿಲಿಪೈನ್ಸ್, ಮಲೇಷಿಯಾ ಮತ್ತು ವಿಯೆಟ್ನಾಂನ ಗಡಿಗಳು ಸೇರಿದಂತೆ 2,000 ಕಿಮೀ ದೂರದವರೆಗೆ ಸಾಗುತ್ತದೆ.
ಗಡಿ ವಿವಾದ ತಡೆಗಟ್ಟಲು ASEAN ಒಕ್ಕೂಟ ವಿಫಲ
ಗಡಿ ವಿವಾದ ತಡೆಗಟ್ಟಲು ASEAN (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ರಚಿಸಿಕೊಂಡಿವೆ. ಥೈಲ್ಯಾಂಡ್, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್, ಬ್ರೂನಿ, ಲಾವೋಸ್, ವಿಯೆಟ್ನಾಂ, ಮ್ಯಾನ್ಮಾರ್ ಮತ್ತು ಕಾಂಬೋಡಿಯಾಗಳನ್ನು ಒಳಗೊಂಡಿರುವ 10-ಸದಸ್ಯ ಪ್ರಾದೇಶಿಕ ದೇಶಗಳ ಒಕ್ಕೂಟವಾಗಿದೆ. ಆದರೆ ಆಂತರಿಕ ಘರ್ಷಣೆಗಳಿಂದಾಗಿ ಇದು ವಿಫಲವಾಗಿದೆ.
ವಿವಾದಿತ ಸಮುದ್ರದಲ್ಲಿ ಹಡಗುಗಳ ಅಪಘಾತ!
ಇತ್ತೀಚೆಗೆ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮತ್ತು ಫಿಲಿಪ್ಪೀನ್ಸ್ ನೌಕೆಗಳು ಢಿಕ್ಕಿ ಹೊಡೆದಿವೆ. ಈ ವಿಚಾರಕ್ಕೆ ಸಂಬಂಧಿಸಿ ಚೀನಾ-ತೈವಾನ್ ಪರಸ್ಪರ ಆರೋಪ ಮಾಡಿಕೊಂಡಿವೆ. ನಮ್ಮ ನೌಕೆಯ ಮೇಲೆ ಫಿಲಿಫೈನ್ಸ್‌ನ ನೌಕೆಯು ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದಿದೆ ಎಂದು ಚೀನಾ ಆರೋಪಿಸಿದೆ. ಇನ್ನೊಂದೆಡೆ ಫಿಲಿಪೈನ್ಸ್‌ನ ಕರಾವಳಿ ಕಾವಲು ಪಡೆ, ಚೀನಾದ ನೌಕೆ ತಮ್ಮ ನೌಕೆಯ ಮೇಲೆ ದಾಳಿ ನಡೆಸಿ ಹಾನಿ ಮಾಡಿದೆ ಎಂದು ಪ್ರತ್ಯಾರೋಪಿಸಿದೆ.
ಜಾಗತಿಕ ಪ್ರತಿಕ್ರಿಯೆ ಏನು?
ಚೀನಾದ ಕ್ರಮಗಳ ಮೇಲೆ ಅಮೆರಿಕ, ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಬ್ರಿಟನ್ ಸೇರಿದಂತೆ ಪ್ರಮುಖ ದೇಶಗಳು ಖಂಡಿಸಿವೆ. ಆದರೆ ಚೀನಾ ಮಾತ್ರ ಫಿಲಿಫೈನ್ಸ್ ಗೊಂದಲವನ್ನು ಹುಟ್ಟುಹಾಕುತ್ತಿದೆ. ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಆರೋಪಿಸಿದೆ.
ಫಿಲಿಪೈನ್ಸ್ ಪ್ರತಿಕ್ರಿಯೆ ಏನು?
ಫಿಲಿಪೈನ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರು ಚೀನಾದ ಹಗೆತನದ ವಿರುದ್ಧ ಕಠಿಣವಾದ ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ. ಪ್ರಾದೇಶಿಕ ಸಮಗ್ರತೆ ಮತ್ತು ಶಾಂತಿಗೆ ಗಂಭೀರ ಸವಾಲುಗಳನ್ನು ಎದುರಿಸಲು ಕಡಲ ಭದ್ರತೆಯ ಮೇಲೆ ಬಲವಾದ ಸಮನ್ವಯಕ್ಕೆ ಮಾರ್ಕೋಸ್ ಕರೆ ನೀಡಿದ್ದಾರೆ. ಫಿಲಿಫೈನ್ಸ್, ಯುಎಸ್ ಮತ್ತು ಜಪಾನ್ ನಾಯಕರು ಏಪ್ರಿಲ್‌ನಲ್ಲಿ ತ್ರಿಪಕ್ಷೀಯ ಶೃಂಗಸಭೆಯನ್ನು ನಡೆಸಿ ಭದ್ರತೆ ಮತ್ತು ಆರ್ಥಿಕ ಸಂಬಂಧಗಳನ್ನು ಗಾಢವಾಗಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.