ಕಾಂಡೋಮ್ ಕಂಪನಿ ವಿರುದ್ಧ ಸಮರ ಆರಂಭಿಸಿದ ಗ್ರಾಹಕ

Public TV
2 Min Read
Condom 3

– ಗ್ರಾಹಕನ ಆರೋಪವನ್ನು ತಿರಸ್ಕರಿಸಿದ ಕಂಪನಿ
– ಕಾಂಡೋಮ್ ಧರಿಸಿದ್ರು ಪತ್ನಿ ಗರ್ಭಿಣಿ

ಬೀಜಿಂಗ್: ಚೀನಾದ ವ್ಯಕ್ತಿಯೊಬ್ಬ ಡುರೆಕ್ಷ್ ಕಾಂಡೋಮ್ ಕಂಪನಿ ವಿರುದ್ಧ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮೊರೆ ಹೋಗಿದ್ದಾನೆ. ಡುರೆಕ್ಷ್ ಕಂಪನಿಯ ಕಾಂಡೋಮ್ ಧರಿಸಿ ಲೈಂಗಿಕ ಕ್ರಿಯೆ ನಡೆಸಿದ್ರೂ ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆಂದು ವ್ಯಕ್ತಿ ಆರೋಪಿಸಿದ್ದಾನೆ.

ದೂರು ಸಲ್ಲಿಸಿದ ವ್ಯಕ್ತಿಯ ಹೆಸರು ವ್ಯಾಂಗ್ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ದೂರುದಾರನ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ಗ್ರಾಹಕ ರಕ್ಷಣಾ ಪ್ರಾಧಿಕಾರದಲ್ಲಿ ಆರೋಪವನ್ನು ಸಾಬೀತು ಮಾಡುವಲ್ಲಿ ವ್ಯಾಂಗ್ ವಿಫಲನಾಗಿದ್ದು, ಕಾನೂನಿನ ಹೋರಾಟ ನಡೆಸಲು ಮುಂದಾಗಿದ್ದಾನೆ.

Condom 2

ನನಗೆ ಈಗಾಗಲೇ ಎರಡು ಮಕ್ಕಳಿದ್ದು, ಮೂರನೇ ಮಗು ನಮಗೆ ಬೇಡವಾಗಿತ್ತು. ಕಾಂಡೋಮ್ ಮೇಲೆ ನಂಬಿಕೆಯಿಟ್ಟು ಅದನ್ನು ಧರಿಸಿಯೇ ಪತ್ನಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದೆ. ಸೆಕ್ಸ್ ಬಳಿಕ ಕಾಂಡೋಮ್ ನಲ್ಲಿ ರಂಧ್ರವಿರೋದು ನನ್ನ ಗಮನಕ್ಕೆ ಬಂದಾಗ ಶಾಕ್ ಆಗಿತ್ತು. ಕೊನೆಗೆ ಪತ್ನಿಗೆ ಗರ್ಭನಿರೋಧಕ ಮಾತ್ರೆಗಳನ್ನು ತಂದು ಕೊಡುವ ಅನಿವಾರ್ಯ ಎದುರಾಯ್ತು. ಮರುದಿನ ಮತ್ತೊಂದು ಕಾಂಡೋಮ್ ನಲ್ಲಿಯೂ ರಂಧ್ರವಿದ್ದರಿಂದ ಪತ್ನಿ ಗರ್ಭಿಣಿಯಾದಳು ಎಂದು ವ್ಯಾಂಗ್ ಹೇಳಿದ್ದಾನೆ.

ಪತ್ನಿ ಮೂರನೇ ಮಗುವಿಗೆ ಜನ್ಮ ನೀಡುವ ಹಾಗಿರಲಿಲ್ಲ. ಅನಾರೋಗ್ಯದಿಂದಾಗಿ ಪತ್ನಿಗೆ ಗರ್ಭಪಾತ ಮಾಡಿಸಲಾಯ್ತು. ಇದರಿಂದಾಗಿ ಪತ್ನಿ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿದ್ದಾಳೆ. ಕಳಪೆ ಕಾಂಡೋಮ್ ನಿಂದಾಗಿ ನನ್ನ ಪತ್ನಿ ಈ ತೊಂದರೆ ಅನುಭವಿಸುತ್ತಿದ್ದಾಳೆ ಎಂದು ವ್ಯಾಂಗ್ ಆರೋಪಿಸಿದ್ದಾನೆ.

Condom 1

ಈ ಸಂಬಂಧ ವ್ಯಾಂಗ್ ತಾನು ಖರೀದಿಸಿದ ಕಾಂಡೋಮ್ ಅಂಗಡಿಗೆ ತೆರಳಿ ಅಲ್ಲಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಆದ್ರೆ ಮಾರಾಟ ಮಾಡಿದ ವ್ಯಕ್ತಿ ಇದರಲ್ಲಿ ನಮ್ಮದು ಯಾವುದೇ ತಪ್ಪಿಲ್ಲ. ಬೇಕಾದ್ರೆ ನೀವು ಖರೀದಿಸಿದ ಕಾಂಡೋಮ್ ಬೆಲೆಯನ್ನು ಹಿಂದಿರುಗಿಸುತ್ತವೆ ಎಂದು ಹೇಳಿದ್ದಾರೆ.

ಕೊನೆಗೆ ವ್ಯಾಂಗ್ ನ್ಯಾಯ ಕೋರಿ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮೊರೆ ಹೋಗಿದ್ದಾನೆ. ಪ್ರಾಧಿಕಾರ ನೀವು ಕಾಂಡೋಮ್ ಹೇಗೆ ಬಳಸಿದ್ದೀರಿ ಎಂಬುದನ್ನ ವಿವರಿಸಬೇಕೆಂದಾಗ ವ್ಯಾಂಗ್ ಸಂಕಷ್ಟಕ್ಕೆ ಸಿಲುಕಿದ್ದಾನೆ. ಒಂದು ವೇಳೆ ನಿಮ್ಮಿಂದ ವಿವರಣೆ ನೀಡಲು ಸಾಧ್ಯವಾಗದಿದ್ದಾಗ ನೀವು ಬಳಸಿದ ಕಾಂಡೋಮ್ ಬ್ಯಾಚ್ ನ ಕೆಲವು ಸ್ಯಾಂಪಲ್ ಗಳನ್ನು ಪರೀಕ್ಷಿಸಿದ್ರೆ ಸತ್ಯ ತಿಳಿಯಲಿದೆ ಎಂದು ಪ್ರಾಧಿಕಾರ ಹೇಳಿದೆ.

condom

ವ್ಯಾಂಗ್ ನವೆಂಬರ್ 2018ರ ಬ್ಯಾಚ್ ನ ಕಾಂಡೋಮ್ ಖರೀದಿಸಿರೋದು ಪ್ಯಾಕೆಟ್ ಮೇಲಿದೆ. ಆದ್ರೆ ಕಾಂಡೋಮ್ ಕಂಪನಿ ನಾವು ಈಗಾಗಲೇ 2018 ನವೆಂಬರ್ ಬ್ಯಾಚಿನ ಉತ್ಪನ್ನಗಳನ್ನು ಮಾರಾಟ ಮಾಡಿದ್ದೇವೆ ಎಂದು ದಾಖಲಾತಿ ನೀಡಿದೆ. ಇದರಿಂದಾಗಿ ವ್ಯಾಂಗ್ ಆರೋಪ ಸಾಬೀತು ಮಾಡಲು ವಿಫಲವಾಗಿದ್ದಾನೆ. ಆದ್ರೆ ವ್ಯಾಂಗ್ ಪತ್ನಿ ಅನುಭವಿಸಿದ ಕಷ್ಟವನ್ನು ಭಾವನಾತ್ಮಕವಾಗಿ ವಿವರಿಸಿ ನ್ಯಾಯ ಕೇಳುತ್ತಿದ್ದಾರೆ. ಇದೀಗ ವ್ಯಾಂಗ್ ಕಂಪನಿ ವಿರುದ್ಧ ಕಾನೂನಿನ ಹೋರಾಟ ನಡೆಸಲು ಮುಂದಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *