ಚೀನಾವು (China) ತನ್ನ ದೇಶಕ್ಕೆ ಪ್ರವಾಸಿಗರನ್ನು ಸೆಳೆಯಲು 75 ದೇಶಗಳಿಗೆ ವೀಸಾ (Visa) ನೀತಿಯನ್ನು ಸಡಿಲಗೊಳಿಸಿದೆ. ಹೌದು ಚೀನಾವು ಪ್ರವಾಸೋದ್ಯಮ, ಆರ್ಥಿಕತೆಯನ್ನು ಹೆಚ್ಚಿಸಲು 75 ದೇಶಗಳ ಪ್ರವಾಸಿಗರು ವೀಸಾ ಇಲ್ಲದೆ 30 ದಿನಗಳವರೆಗೆ ಇರಲು ಅವಕಾಶ ನೀಡುವ ಮೂಲಕ ಪ್ರವಾಸಿಗರನ್ನು (Tourists) ಸೆಳೆಯಲು ವಿನೂತನ ಕ್ರಮ ಕೈಗೊಂಡಿದೆ.
ಮಹಾಮಾರಿ ಕೊರೋನಾದ ಚೀನಾವು ತತ್ತರಿಸಿ ಹೋಗಿತ್ತು. ಅಲ್ಲದೇ ವಿದೇಶಗರ ಭೇಟಿ ನಿರ್ಬಂಧ ಹೇರಿತ್ತು. ಬಳಿಕ ಕೋವಿಡ್-19 ನ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ, ಚೀನಾ 2023ರ ಆರಂಭದಲ್ಲಿ ಪ್ರವಾಸಿಗರಿಗೆ ತನ್ನ ಗಡಿಗಳನ್ನು ಮತ್ತೆ ತೆರೆಯಿತು. ಆದರೆ ಆ ವರ್ಷದಲ್ಲಿ ಕೇವಲ 13.8 ಮಿಲಿಯನ್ ಅಂದರೆ 1 ಕೋಟಿಯ 35 ಲಕ್ಷ ಜನರಷ್ಟೇ ಭೇಟಿ ನೀಡಿದ್ದರು.
ಕೊರೋನಾ ಕಾಲಿಡುವ ಮೊದಲು ಅಂದರೆ 2019ರಲ್ಲಿ 31.9 ಮಿಲಿಯನ್ ಅಂದರೆ 3 ಕೋಟಿ 19 ಲಕ್ಷದಷ್ಟು ಜನರು ಭೇಟಿ ನೀಡಿದ್ದರು. 2019ರಲ್ಲಿ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯ ಅರ್ಧಕ್ಕಿಂತ ಕಡಿಮೆ ಜನರು 2023ರಲ್ಲಿ ಭೇಟಿ ನೀಡಿದ್ದರು. ಹೀಗಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ವೀಸಾ ಮುಕ್ತ ಪ್ರವೇಶ ಎಂದು ವಿನೂತನ ಕ್ರಮವನ್ನು ಕೈಗೊಂಡಿದೆ.
ಯಾವೆಲ್ಲ ದೇಶಗಳಿಗೆ ವೀಸಾ ಮುಕ್ತ ಪ್ರವೇಶ?
ಡಿಸೆಂಬರ್ 2023ರಲ್ಲಿ, ಚೀನಾ ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್, ಸ್ಪೇನ್ ಮತ್ತು ಮಲೇಷ್ಯಾದ ನಾಗರಿಕರಿಗೆ ವೀಸಾ-ಮುಕ್ತ ಪ್ರವೇಶವನ್ನು ಘೋಷಿಸಿತ್ತು. ಅಂದಿನಿಂದ ಬಹುತೇಕ ಎಲ್ಲಾ ಯುರೋಪನ್ನು ಸೇರಿಸಲಾಗಿದೆ. ಐದು ಲ್ಯಾಟಿನ್ ಅಮೆರಿಕನ್ ದೇಶಗಳು ಮತ್ತು ಉಜ್ಬೇಕಿಸ್ತಾನ್‌ನಿಂದ ಪ್ರಯಾಣಿಕರಿಗೆ ಕಳೆದ ತಿಂಗಳು ಅರ್ಹತೆ ನೀಡಲಾಗಿತ್ತು. ನಂತರ ಮಧ್ಯಪ್ರಾಚ್ಯದ 4 ದೇಶದವರಿಗೆ ವೀಸಾ ಮುಕ್ತ ಪ್ರವೇಶದ ಅವಕಾಶ ನೀಡಿದೆ. ಜುಲೈ 16 ರಂದು ಅಜರ್ಬೈಜಾನ್ ಸೇರ್ಪಡಿಸಲಾಗಿದ್ದು, ಒಟ್ಟು 75 ದೇಶಗಳಿಗೆ ವೀಸಾ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿದೆ.
ಸುಮಾರು ಮೂರನೇ ಎರಡರಷ್ಟು ದೇಶಗಳಿಗೆ ಒಂದು ವರ್ಷದ ಪ್ರಾಯೋಗಿಕ ಆಧಾರದ ಮೇಲೆ ವೀಸಾ-ಮುಕ್ತ ಪ್ರವೇಶವನ್ನು ನೀಡಲಾಗಿದೆ. ಚೀನಾದೊಂದಿಗೆ ಆಫ್ರಿಕಾ ಖಂಡವು ನಿಕಟ ಸಂಬಂಧವನ್ನು ಹೊಂದಿದ್ದರೂ, ಆಫ್ರಿಕಾದ ಯಾವ ದೇಶವು ವೀಸಾ-ಮುಕ್ತ ಪ್ರವೇಶಕ್ಕೆ ಅರ್ಹವಾಗಿಲ್ಲ.
ವೀಸಾ-ಮುಕ್ತ ಯೋಜನೆಯಲ್ಲಿಲ್ಲದ 10 ದೇಶಗಳವರಿಗೆ ಇನ್ನೊಂದು ಆಯ್ಕೆ:
ಜೆಕ್ ರಿಪಬ್ಲಿಕ್, ಲಿಥುವೇನಿಯಾ, ಸ್ವೀಡನ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಉಕ್ರೇನ್, ಇಂಡೋನೇಷ್ಯಾ, ಕೆನಡಾ, ಯುಎಸ್ ಮತ್ತು ಮೆಕ್ಸಿಕೊ ದೇಶಗಳಿಗೆ ಚೀನಾ ವೀಸಾ-ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಆದರೆ ಆ ದೇಶಗಳಿಗೆ ಚೀನಾವು ಮತ್ತೊಂದು ಅವಕಾಶವನ್ನು ನೀಡಿದೆ. ಆ ದೇಶದ ಪ್ರವಾಸಿಗರು ಬೇರೆ ದೇಶಕ್ಕೆ ಹೊರಟರೆ 10 ದಿನಗಳವರೆಗೆ ಚೀನಾವನ್ನು ಪ್ರವೇಶಿಸಬಹುದು. ಚೀನಾದ ರಾಷ್ಟ್ರೀಯ ವಲಸೆ ಆಡಳಿತದ ಪ್ರಕಾರ, ಈ ನೀತಿಯು 60 ಪ್ರವೇಶ ದ್ವಾರಗಳಿಗೆ ಸೀಮಿತವಾಗಿದೆ.
ಯುಕೆ ಹೊರತುಪಡಿಸಿ, ಸ್ವೀಡನ್ ಮಾತ್ರ 30 ದಿನಗಳ ಪಟ್ಟಿಯಲ್ಲಿ ಸ್ಥಾನ ಪಡೆಯದ ಏಕೈಕ ಹೆಚ್ಚಿನ ಆದಾಯದ ಯುರೋಪಿಯನ್ ದೇಶವಾಗಿದೆ. ಆಡಳಿತಾರೂಢ ಚೀನೀ ಕಮ್ಯುನಿಸ್ಟ್ ಪಕ್ಷವು 2020ರಲ್ಲಿ ಸ್ವೀಡನ್‌ನ ಪುಸ್ತಕ ಮಾರಾಟಗಾರ ಗುಯಿ ಮಿನ್ಹೈಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗಿನಿಂದ ಚೀನಾದೊಂದಿಗಿನ ಸಂಬಂಧಗಳು ಹದಗೆಟ್ಟಿವೆ. ಗುಯಿ 2015ರಲ್ಲಿ ಥೈಲ್ಯಾಂಡ್‌ನಲ್ಲಿರುವ ಕಡಲತೀರದ ಮನೆಯಿಂದ ಕಣ್ಮರೆಯಾಗಿದ್ದರು. ಬಳಿಕ ಕೆಲವು ತಿಂಗಳ ನಂತರ ಚೀನಾದ ಪೊಲೀಸ್ ಕಸ್ಟಡಿಯಲ್ಲಿ ಬಂಧಿಯಾಗಿರುವುದು ತಿಳಿದಿತ್ತು. ಇದರಿಂದ ಈ ಎರಡು ದೇಶಗಳ ಸಂಬಂಧವು ಮುರಿದು ಹೋಗಿದೆ.
ವೀಸಾಗೆ ಅರ್ಜಿ ಸಲ್ಲಿಸುವುದು ಮತ್ತು ಈ ಪ್ರಕ್ರಿಯೆಯು ಜನರಿಗೆ ತುಂಬಾ ಗೊಂದಲವನ್ನು ಸೃಷ್ಟಿಸಿತ್ತು. ಈ ವೀಸಾ-ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿರುವುದು ಪ್ರವಾಸಿಗರಿಗೆ ನಿಜಕ್ಕೂ ಸಹಾಯ ಮಾಡುತ್ತದೆ ಎಂದು ಇತ್ತೀಚೆಗೆ ಬೀಜಿಂಗ್‌ನಲ್ಲಿರುವ ಟೆಂಪಲ್ ಆಫ್ ಹೆವನ್‌ಗೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ತಿಳಿಸಿದ್ದರು.
ಹೆಚ್ಚಿನ ಪ್ರವಾಸಿ ತಾಣಗಳಿರುವ ಚೀನಾ ದೇಶದಲ್ಲಿ ವಿದೇಶಿಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ದೇಶೀಯ ಪ್ರವಾಸಿಗರೇ ಭೇಟಿ ನೀಡುತ್ತಿದ್ದರು. ಆದರೆ ಈ ಹೊಸ ಕ್ರಮದಿಂದ ವಿದೇಶಿ ಪ್ರವಾಸಿಗರ ದಂಡು ಹರಿದು ಬರಲಿದ್ದು, ಪ್ರಯಾಣ ಕಂಪನಿಗಳು ಮತ್ತು ಪ್ರವಾಸ ಮಾರ್ಗದರ್ಶಕರು ಈಗ ಹೆಚ್ಚಿನ ಒಳಹರಿವಿಗಾಗಿ ತಯಾರಿ ನಡೆಸುತ್ತಿದ್ದಾರೆ.
ಚೀನಾದಲ್ಲಿ ಈ ಹೊಸ ಕ್ರಮದಿಂದ ವ್ಯಾಪಾರ, ವ್ಯವಹಾರದಲ್ಲಿ ತೀವ್ರ ಏರಿಕೆ ಕಂಡಿದ್ದು, ಚೀನಾದ ವೆಬ್‌ಸೈಟ್‌ಗಳಲ್ಲಿ ವಿಮಾನ, ಹೋಟೆಲ್ ಹಾಗೂ ಇನ್ನಿತರ ಬುಕಿಂಗ್‌ಗಳು ದ್ವಿಗುಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.